ಸಾಂದರ್ಭಿಕ ಚಿತ್ರ (ಎಐ) 
ದೇಶ

ನಿಮ್ಮ ಸುಳ್ಳುಗಳು ವಾಸ್ತವ ಬದಲಿಸಲ್ಲ! ಅರುಣಾಚಲ ಪ್ರದೇಶದ ತಂಟೆಗೆ ಬಂದ ಚೀನಾಗೆ ಮುಖಕ್ಕೆ ಹೊಡೆದಂತೆ ಹೇಳಿದ ಭಾರತ | Arunachal Pradesh

ಪ್ರಮುಖ ಮುಖ್ಯಾಂಶಗಳು

  • ಅರುಣಾಚಲ ಭಾರತದ ಅವಿಭಾಜ್ಯ ಅಂಗ
  • ಚೀನಾದ ಆಕ್ಷೇಪಣೆಗಳಿಗೆ ಕೇಂದ್ರ ಸರ್ಕಾರ ಖಡಕ್​ ಉತ್ತರ
ನವದೆಹಲಿ: ಅರುಣಾಚಲ ಪ್ರದೇಶ ಭಾರತ ಮತ್ತು ಚೀನಾ ನಡುವೆ ಮತ್ತೆ ಕಿಡಿ ಹೊತ್ತಿಸಿದ್ದು, ಭಾರತ 27 ಪ್ರದೇಶಗಳಿಗೆ ಅಧಿಕೃತವಾಗಿ ಹೆಸರು ಘೋಷಿಸಿದ ಬೆನ್ನಲ್ಲೇ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ಖಡಕ್ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಈ ವಿಚಾರದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಗುಡುಗಿದೆ.
ಗಡಿ ವಿಚಾರದಲ್ಲಿ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ಭಾರತ ಇತ್ತೀಚೆಗಷ್ಟೇ, ಅರುಣಾಚಲ ಪ್ರದೇಶದ 27 ಪ್ರದೇಶಗಳ ಹೆಸರುಗಳನ್ನು ಅಧಿಕೃತವಾಗಿ ಘೋಷಿಸಿದೆ. ಆದಾಗ್ಯೂ, ಚೀನಾ ಇದನ್ನು ವಿರೋಧಿಸಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಒತ್ತಿ ಹೇಳಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇದು ಸ್ವಯಂ ಸ್ಪಷ್ಟವಾದ ಸತ್ಯ. ಈ ಅಸಲಿ ಸಂಗತಿಯಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತವು ಅರುಣಾಚಲ ಪ್ರದೇಶದ 27 ಹಳ್ಳಿಗಳು ಮತ್ತು ಭೌಗೋಳಿಕ ಸ್ಥಳಗಳನ್ನು ಅಧಿಕೃತವಾಗಿ ಗುರುತಿಸಿ, ಇವುಗಳನ್ನು ಸರ್ವೇ ಆಫ್ ಇಂಡಿಯಾ ನಕ್ಷೆಯಲ್ಲಿ ಅಧಿಕೃತವಾಗಿ ನೋಂದಾಯಿಸುವ ಮೂಲಕ ಆಯಾ ಪ್ರದೇಶಗಳನ್ನು ನಿಖರವಾಗಿ ಗುರುತಿಸುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ದೇಶದ ಕರ್ತವ್ಯ ಎಂದು ಸರ್ಕಾರ ಹೇಳಿದೆ. ಭಾರತದ ಈ ನಿರ್ಧಾರಕ್ಕೆ ಹೊಸ ತಕರಾರು ತೆಗೆದಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಭಾರತದ ನಡೆ ಅಕ್ರಮ ಮತ್ತು ಅಮಾನ್ಯ ಎಂದು ಟೀಕಿಸಿದ್ದಾರೆ.
ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಅಥವಾ ಝೊಂಗ್ನಾನ್ ಎಂದು ಚೀನಾ ಕರೆಯುತ್ತದೆ. ಇಂದಿಗೂ ಈ ಪ್ರದೇಶವನ್ನು ತನ್ನದೇ ಎಂದು ವಾದಿಸುತ್ತಿದೆ. ಇದನ್ನೇ ಮುಂದಿಟ್ಟುಕೊಂಡು, ಹಲವು ಬಾರಿ ಅರುಣಾಚಲದ ಪ್ರದೇಶಗಳಿಗೆ ತಮ್ಮದೇ ಹೆಸರುಗಳಿಂದ ಕೂಗುವ ಪ್ರವೃತ್ತಿಯನ್ನು ಚೀನಾ ಪದೇ ಪದೇ ರಿಪೀಟ್​ ಮಾಡುತ್ತಿದೆ. ಭಾರತೀಯ ಪ್ರದೇಶಗಳಿಗೆ ಚೀನೀ ಹೆಸರುಗಳನ್ನು ಇಡುವುದರಿಂದ ಸತ್ಯಗಳು ಎಂದಿಗೂ ಬದಲಾಗುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಚೀನಾಗೆ ಹೇಳಿದೆ,(ಏಜೆನ್ಸೀಸ್).