ಇಸ್ರೋ ಉಪಗ್ರಹ ಚಿತ್ರದಲ್ಲಿ ನಾಪತ್ತೆಯಾದ ಭಾರತ! ಹವಾಮಾನ ಇಲಾಖೆ ಹೇಳೋದೇನು? ಭಾರಿ ಮಳೆ ಮುನ್ಸೂಚನೆಯೇ? Monsoon Trough  
ದೇಶ

ಇಸ್ರೋ ಉಪಗ್ರಹ ಚಿತ್ರದಲ್ಲಿ ನಾಪತ್ತೆಯಾದ ಭಾರತ! ಹವಾಮಾನ ಇಲಾಖೆ ಹೇಳೋದೇನು? ಭಾರಿ ಮಳೆ ಮುನ್ಸೂಚನೆಯೇ? Monsoon Trough

ಪ್ರಮುಖ ಮುಖ್ಯಾಂಶಗಳು

  • ದೇಶದ ಶೇಕಡಾ 95 ರಷ್ಟು ಭಾಗ ನುಂಗಿದ ಕಪ್ಪು ಮೋಡಗಳು ಇಸ್ರೋ ಉಪಗ್ರಹ ಚಿತ್ರ ರವಾನಿಸಿದ ಎಚ್ಚರಿಕೆ
  • ಭಾರತಕ್ಕೆ ಕವಿದಿದೆ ದಟ್ಟ ಮೋಡಗಳ ಆವರಣ ದೇಶಾದ್ಯಂತ ಪ್ರಚಂಡ ಮಳೆ ಸೂಚನೆ ನೀಡಿದ ಇಸ್ರೋ ಚಿತ್ರಗಳು
  • ಶೇಕಡಾ 95 ರಷ್ಟು ಭಾರತವನ್ನು ಆವರಿಸಿದ ಮಾನ್ಸೂನ್ ಮೋಡಗಳು ಮುಂದಿನ ದಿನಗಳಲ್ಲಿ ಕಾಯುತ್ತಿದೆ ಭಾರಿ ಮಳೆ
  • ಟ್ರೋಪೋಪಾಸ್ ಮುಟ್ಟಿದ ಕ್ಯುಮುಲೋನಿಂಬಸ್ ಮೋಡಗಳು ಭಾರತದಾದ್ಯಂತ ಭಾರಿ ಬಿರುಗಾಳಿ ಮಳೆ ಸಾಧ್ಯತೆ
Monsoon Trough : ಆಗಸದ ತುತ್ತತುದಿಯಿಂದ ಭಾರತವನ್ನು ಇಸ್ರೋ ಉಪಗ್ರಹ ಕಣ್ಣುತುಂಬಿಕೊಳ್ಳಲು ಯತ್ನಿಸಿದಾಗ, ಅಲ್ಲಿ ಕಂಡದ್ದು ನಕ್ಷೆಯಲ್ಲಿದ್ದ ಗೆರೆಗಳಲ್ಲ, ಬದಲಿಗೆ ಇಡೀ ದೇಶವನ್ನು ಹೊದ್ದು ಮಲಗಿದ್ದ ಮುಂಗಾರು ಮೋಡಗಳ ಬೃಹತ್ ಹಾಸಿಗೆ! ಹೌದು, ಜುಲೈ 22ರ ಮುಂಜಾನೆ, ದೇಶವಾಸಿಗಳು ಇನ್ನೂ ನಿದ್ರಾದೇವಿಯ ಮಡಿಲಲ್ಲಿದ್ದಾಗ ಭೂಮಧ್ಯರೇಖೆಯಿಂದ ಬರೋಬ್ಬರಿ 36,000 ಕಿಲೋಮೀಟರ್ ಎತ್ತರದಲ್ಲಿದ್ದ ಇಸ್ರೋ ಉಪಗ್ರಹ ಸೆರೆಹಿಡಿದ ಆ ಅದ್ಭುತ ಚಿತ್ರ, ಭಾರತದ ಮುಂಗಾರಿನ ವೈಭವ ಹಾಗೂ ತೀವ್ರತೆಯನ್ನು ಕಣ್ಣಿಗೆ ಕಟ್ಟುವಂತೆ ಜಗತ್ತಿನ ಮುಂದೆ ತೆರೆದಿಟ್ಟಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಇನ್‌ಸ್ಯಾಟ್-3ಡಿಆರ್ ಮತ್ತು ಇನ್‌ಸ್ಯಾಟ್-3ಡಿಎಸ್ ಉಪಗ್ರಹಗಳನ್ನು ಬಳಸಿ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಮುಂಜಾನೆ 2.15 ರಿಂದ 3.27 ರ ನಡುವೆ ತೆಗೆದಿರುವ ಇನ್‌ಫ್ರಾರೆಡ್ ಚಿತ್ರಗಳು ದೇಶದ ಶೇ. 95 ಕ್ಕಿಂತ ಹೆಚ್ಚಿನ ಭಾಗವು ಮೋಡಗಳಿಂದ ಆವೃತವಾಗಿರುವುದನ್ನು ಸ್ಪಷ್ಟಪಡಿಸಿದ್ದು, ಇದರ ಪರಿಣಾಮವಾಗಿ ದೇಶಾದ್ಯಂತ ಭಾರಿ ಮಳೆ ಹಾಗೂ ಗುಡುಗು ಸಹಿತ ಬಿರುಗಾಳಿ ಉಂಟಾಗುವ ತೀವ್ರ ಸಾಧ್ಯತೆಯನ್ನು ಈ ಚಿತ್ರಗಳು ಎಚ್ಚರಿಸಿವೆ.
ಉಪಗ್ರಹಗಳು ರವಾನಿಸುವ ಇನ್‌ಫ್ರಾರೆಡ್ ಅಲೆಗಳು ಹಗಲು-ರಾತ್ರಿಯ ಭೇದವಿಲ್ಲದೆ ರಾತ್ರಿ ವೇಳೆಯಲ್ಲೂ ಹವಾಮಾನದ ನಿಖರ ಚಿತ್ರಣವನ್ನು ನೀಡಲು ಅತ್ಯಂತ ಪ್ರಮುಖವಾಗಿದ್ದು, ಇದರಲ್ಲಿರುವ 'ಥರ್ಮಲ್ ಇನ್‌ಫ್ರಾರೆಡ್ ಫ್ರೇಮ್' ವಾತಾವರಣದ ತಾಪಮಾನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುತ್ತದೆ. ಇತ್ತೀಚಿನ ಚಿತ್ರಗಳ ಪ್ರಕಾರ, ಉತ್ತರ ಬಂಗಾಳ ಕೊಲ್ಲಿಯಿಂದ ಪ್ರಾರಂಭವಾಗಿ ಒಡಿಶಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್ ಹಾಗೂ ಅರೇಬಿಯನ್ ಸಮುದ್ರದವರೆಗೆ ಬೃಹತ್ ಪ್ರಮಾಣದ ಮೋಡಗಳು ಚಾಚಿಕೊಂಡಿದ್ದು, ಪಶ್ಚಿಮ ರಾಜಸ್ಥಾನ ಮತ್ತು ಕಚ್ ಪ್ರದೇಶದ ಸಣ್ಣ ಭಾಗಗಳನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳು ಸಂಪೂರ್ಣವಾಗಿ ಮೋಡಗಳಿಂದ ಆವೃತವಾಗಿವೆ.
ವಾತಾವರಣದಲ್ಲಿರುವ ತೇವಾಂಶದ ಪ್ರಮಾಣವನ್ನು ಬಹಿರಂಗಪಡಿಸುವ 'ವಾಟರ್ ವೇಪರ್ ಫ್ರೇಮ್' ಅರೇಬಿಯನ್ ಸಮುದ್ರದಿಂದ ಹಿಮಾಲಯ ಪರ್ವತ ಶ್ರೇಣಿಯವರೆಗಿನ ಬೃಹತ್ ಪ್ರದೇಶವು ಭಾರಿ ಪ್ರಮಾಣದ ತೇವಾಂಶದಿಂದ ತುಂಬಿರುವುದನ್ನು ತೋರಿಸಿದ್ದು, ಈ ಅತಿಯಾದ ತೇವಾಂಶವೇ ಕೆಲವು ಗಂಟೆಗಳ ಬದಲು ದಿನಗಟ್ಟಲೆ ಸುರಿಯುವ ಸುದೀರ್ಘ ಮಳೆಗೆ ಕಾರಣವಾಗಿದೆ. ಇದರ ಜೊತೆಗೆ, ಹವಾಮಾನ ತಜ್ಞರು ಹೆಚ್ಚು ನೆಚ್ಚಿಕೊಳ್ಳುವಂತಹ 'ಮೋಡದ ಎತ್ತರ ಮತ್ತು ತಾಪಮಾನ'ದ ಮಾದರಿಯು ಮೋಡಗಳ ಮೇಲ್ಭಾಗದ ತಾಪಮಾನವನ್ನು ಅಳೆದು ಅವುಗಳ ನಿಖರವಾದ ಎತ್ತರವನ್ನು ಅಂದಾಜಿಸಲು ನೆರವಾಗುತ್ತದೆ.
ಅಂದಹಾಗೆ, ವಾತಾವರಣದಲ್ಲಿ ಗಾಳಿಯು ಮೇಲೇರಿದಂತೆ ಅದರ ತಾಪಮಾನ ಕಡಿಮೆಯಾಗುವುದರಿಂದ, ಮೋಡಗಳು ಎಷ್ಟು ಎತ್ತರಕ್ಕೆ ಬೆಳೆಯುತ್ತವೆಯೋ ಅವುಗಳ ಮೇಲ್ಭಾಗವು ಅಷ್ಟೇ ತಂಪಾಗಿರುತ್ತದೆ. ನೆಲದ ಮೇಲಿಂದಲೇ ಮೋಡಗಳ ಎತ್ತರವನ್ನು ಅಳೆಯಲು ವಿಜ್ಞಾನಿಗಳು ಬಳಸುವ ಅತ್ಯಂತ ಹಳೆಯ ಹಾಗೂ ಸರಳ ವಿಧಾನ ಇದಾಗಿದ್ದು, ಇತ್ತೀಚಿನ ಚಿತ್ರಗಳಲ್ಲಿ ಬಿಹಾರ, ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯದ ಪ್ರದೇಶಗಳಲ್ಲಿ ಕಂಡುಬರುವ ಕೆಂಪು ಹಾಗೂ ಗುಲಾಬಿ ಬಣ್ಣದ ಗುರುತುಗಳು ಅಲ್ಲಿನ ಮೋಡಗಳ ಮೇಲ್ಭಾಗದ ತಾಪಮಾನವು ಮೈನಸ್ 60 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಿರುವುದನ್ನು ಹಾಗೂ ಕೆಲವು ಕಡೆ ಮೈನಸ್ 80 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿರುವುದನ್ನು ಸೂಚಿಸುತ್ತವೆ, ಇದು ಅತ್ಯಂತ ತೀವ್ರ ಸ್ವರೂಪದ ಮಳೆಗೆ ನೇರ ಸಂಪರ್ಕ ಹೊಂದಿದೆ.
ತಾಪಮಾನದಲ್ಲಿನ ಈ ಅತಿಯಾದ ಕುಸಿತವು ಮೋಡಗಳು ವಾತಾವರಣದ 12 ರಿಂದ 16 ಕಿಲೋಮೀಟರ್ ಎತ್ತರಕ್ಕೆ ಬೆಳೆದಿರುವುದನ್ನು ಸೂಚಿಸುತ್ತದೆ, ಅಂದರೆ ಇವು ವಾತಾವರಣದ ಹವಾಮಾನ ಬದಲಾವಣೆಗಳು ಸಂಭವಿಸುವ 'ಟ್ರೋಪೋಪಾಸ್' ಸ್ತರವನ್ನು ತಲುಪಿವೆ, ಪ್ರಸ್ತುತ ದೇಶದಾದ್ಯಂತ ಆವರಿಸಿರುವ ಈ ಬೃಹತ್ 'ಕ್ಯುಮುಲೋನಿಂಬಸ್' ಮಾದರಿಯ ಮೋಡಗಳು ಭಾರಿ ಗುಡುಗು-ಸಿಡಿಲು ಸಹಿತ ಪ್ರಚಂಡ ಮಳೆಯನ್ನು ತರುವ ಸಾಮರ್ಥ್ಯ ಹೊಂದಿದ್ದು, ಇತ್ತೀಚೆಗೆ ಮೇಘಾಲಯದ ವಿಲಿಯಂನಗರದಲ್ಲಿ ಒಂದೇ ದಿನದಲ್ಲಿ 37 ಸೆಂ.ಮೀ ಹಾಗೂ ಉತ್ತರಾಖಂಡದ ಶ್ಯಾಮಾದಲ್ಲಿ 22 ಸೆಂ.ಮೀ ಭಾರಿ ಮಳೆ ದಾಖಲಾಗಿರುವುದು ಉಪಗ್ರಹ ನೀಡಿದ ಈ ಹವಾಮಾನ ದತ್ತಾಂಶವನ್ನು ಸಂಪೂರ್ಣವಾಗಿ ದೃಢೀಕರಿಸುತ್ತದೆ.
ಭಾರತದ ಮುಂಗಾರು ಅವಧಿಯಲ್ಲಿ ಉತ್ತರ ಭಾರತದಾದ್ಯಂತ ರೂಪುಗೊಳ್ಳುವ ಕಡಿಮೆ ಒತ್ತಡ ಪ್ರದೇಶವಾದ 'ಮಾನ್ಸೂನ್ ಟ್ರಫ್' (Monsoon Trough) ಮಳೆಯ ವಿತರಣೆಯನ್ನು ಪ್ರಮುಖವಾಗಿ ನಿರ್ಧರಿಸಲಿದ್ದು, ಹವಾಮಾನ ಇಲಾಖೆಯ ಇತ್ತೀಚಿನ ವರದಿಯಂತೆ ಪ್ರಸ್ತುತ ಈ ಟ್ರಫ್ ತನ್ನ ಸಾಮಾನ್ಯ ಸ್ಥಾನದಲ್ಲೇ ಮುಂದುವರಿದಿದೆ. ಪಂಜಾಬ್, ದಕ್ಷಿಣ ಉತ್ತರ ಪ್ರದೇಶ, ಜಾರ್ಖಂಡ್-ಬಿಹಾರ ಗಡಿ, ನೈಋತ್ಯ ರಾಜಸ್ಥಾನ ಹಾಗೂ ಅಸ್ಸಾಂ ಮೇಲ್ಭಾಗದಲ್ಲಿ ವಾಯು ಪರಿಚಲನೆ ಗೋಚರಿಸುತ್ತಿದ್ದು, ಮಧ್ಯ ವಾತಾವರಣದಲ್ಲಿ ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಿಂದ ಈಶಾನ್ಯ ಅರೇಬಿಯನ್ ಸಮುದ್ರದವರೆಗೆ ವಿಸ್ತರಿಸಿರುವ ಟ್ರಫ್‌ನ ಪರಿಣಾಮವಾಗಿಯೇ ಉಪಗ್ರಹ ಚಿತ್ರಗಳಲ್ಲಿ ಭಾರತದಾದ್ಯಂತ ಓರೆಯಾದ ಮೋಡದ ಸಾಲು ಸ್ಪಷ್ಟವಾಗಿ ಗೋಚರಿಸುತ್ತಿದೆ.
ದೇಶದ ಶೇ. 95 ಕ್ಕಿಂತ ಹೆಚ್ಚು ಭಾಗದಲ್ಲಿ ಮೋಡಗಳು ಆವರಿಸಿದ್ದರೂ, ಇದು ಮುಂಗಾರು ಮಳೆಯ ಒಟ್ಟಾರೆ ಕೊರತೆಯನ್ನು ಸಂಪೂರ್ಣವಾಗಿ ಸರಿದೂಗಿಸಲು ಸಾಕಾಗುತ್ತದೆಯೇ ಎಂಬುದು ಸಂಶಯಾಸ್ಪದವಾಗಿದೆ. ಈ ವರ್ಷದ ಜೂನ್ ತಿಂಗಳಿನಲ್ಲಿ ಭಾರತವು ಕೇವಲ 99.5 ಮಿ.ಮೀ ಮಳೆಯನ್ನು ಪಡೆದಿದ್ದು, ಇದು ಸಾಧಾರಣ ಮಳೆಗಿಂತ ಶೇ. 40 ರಷ್ಟು ಕಡಿಮೆಯಾಗಿದೆ ಹಾಗೂ 1901 ರ ನಂತರದ ಐದನೇ ಅತ್ಯಂತ ಒಣ ಜೂನ್ ತಿಂಗಳು ಎನಿಸಿಕೊಂಡಿದೆ. ಮುಂಬರುವ 4 ರಿಂದ 5 ದಿನಗಳಲ್ಲಿ ವಾಯುವ್ಯ ಮತ್ತು ಈಶಾನ್ಯ ರಾಜ್ಯಗಳಲ್ಲಿ ಭಾರಿ ಮುಂಗಾರು ಮಳೆಯನ್ನು ನಿರೀಕ್ಷಿಸಲಾಗಿದೆಯಾದರೂ, ಪಶ್ಚಿಮ-ಮಧ್ಯ ಭಾರತ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಮಳೆಯ ತೀವ್ರತೆಯು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಉಪಗ್ರಹ ಚಿತ್ರಗಳು ತೋರಿಸುವಂತೆ ದೇಶಾದ್ಯಂತ ರಾತ್ರಿಯ ವೇಳೆ ಕಂಡುಬಂದಿರುವ ಈ ದಟ್ಟ ಮೋಡಗಳ ಆವರಣವು ಮುಂಗಾರಿಗೆ ಅತ್ಯಂತ ಸಾಲುವಂತಹ ಅನುಕೂಲಕರ ವಾತಾವರಣವನ್ನು ನಿರ್ಮಿಸಿದ್ದು, ಕೆಲವು ಪ್ರದೇಶಗಳಲ್ಲಿ ದಿಢೀರ್ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿಗೆ ಕಾರಣವಾಗಬಹುದು, ಆದಾಗ್ಯೂ, ಹಿಂದಿನ ತಿಂಗಳುಗಳಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆಯನ್ನು ಸರಿದೂಗಿಸಿ ಈ ವರ್ಷದ ಮುಂಗಾರು ಋತುವನ್ನು ಸಂಪೂರ್ಣ ಯಶಸ್ವಿಗೊಳಿಸಲು ಮುಂಬರುವ ದಿನಗಳಲ್ಲೂ ಇಂತಹ ಮೋಡ ಕವಿದ ವಾತಾವರಣವು ಸುದೀರ್ಘವಾಗಿ ಮುಂದುವರಿಯುವುದು ತೀರಾ ಅಗತ್ಯವಾಗಿದೆ,(ಏಜೆನ್ಸೀಸ್​).