Narendra Modi | ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ಧದ ವಿಷಯದಲ್ಲಿ ಭಾರತ ತಟಸ್ಥವಾಗಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ನಾವು ಶಾಂತಿಯ ಪರವಾಗಿದ್ದು, ಮಾತುಕತೆಯ ಮೂಲಕ ಈ ಸಂಘರ್ಷ ಅಂತ್ಯವಾಗಲಿ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದರು ಎಂದು ವರದಿಯಾಗಿದೆ.
ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ರಷ್ಯಾ ಅಧ್ಯಕ್ಷರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಪುಟಿನ್ ಅವರನ್ನು ದೂರದೃಷ್ಟಿಯ ನಾಯಕ ಎಂದು ಹೊಗಳಿದ ಮೋದಿ, ಇದು ಶಾಂತಿಯ ಯುಗ ಎಂದರು. ರಷ್ಯಾ ಮತ್ತು ಉಕ್ರೇನ್ ಕಲ್ಯಾಣವು ಶಾಂತಿಯ ಹಾದಿಯಲ್ಲಿದೆ ಎಂದಿರುವ ಪ್ರಧಾನಿ ಮೋದಿ, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳುತ್ತವೆ, ಭಾರತ ಮತ್ತು ರಷ್ಯಾ ಒಟ್ಟಾಗಿ ಜಗತ್ತನ್ನು ಆ ಹಾದಿಯತ್ತ ಕೊಂಡೊಯ್ಯಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಕ್ರೇನ್ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ, ನಾವು ನಿರಂತರ ಚರ್ಚೆಯಲ್ಲಿದ್ದೇವೆ. ಕಾಲಕಾಲಕ್ಕೆ ನೀವು ಕೂಡ ನಿಜವಾದ ಸ್ನೇಹಿತರಾಗಿ ಎಲ್ಲದರ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದೀರಿ. ನಂಬಿಕೆ ಎನ್ನುವುದು ದೊಡ್ಡ ಶಕ್ತಿ ಎನ್ನುವುದು ನನ್ನ ನಂಬಿಕೆ, ಯುದ್ಧದ ವಿಷಯವಾಗಿ ನಿಮ್ಮೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ ಮತ್ತು ಅದನ್ನು ಪ್ರಪಂಚದ ಮುಂದೆಯೂ ಪ್ರಸ್ತುತಪಡಿಸಿದ್ದೇನೆ ಎಂದು ಪ್ರಧಾನಿ ಮೋದಿ ಪುಟಿನ್ಗೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ, ನಾನು ಜಾಗತಿಕ ನಾಯಕರೊಂದಿಗೆ ಮಾತನಾಡುವಾಗಲೆಲ್ಲಾ ಈ ವಿಷಯದ ಬಗ್ಗೆ ವಿವರವಾಗಿ ಚರ್ಚಿಸುತ್ತಾ ಭಾರತ ತಟಸ್ಥವಾಗಿಲ್ಲ ಎನ್ನುವ ಸಂದೇಶ ಕಳುಹಿಸಿದ್ದೇನೆ, ಈ ಸಂಘರ್ಷದ ಕುರಿತು ಭಾರತ ಸ್ಪಷ್ಟವಾದ ನಿಲುವು ಹೊಂದಿದೆ ಮತ್ತು ಆ ನಿಲುವು ಶಾಂತಿಯಾಗಿದೆ. ಶಾಂತಿಯ ಕಡೆಗಿನ ಪ್ರತಿಯೊಂದು ಪ್ರಯತ್ನವನ್ನೂ ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.
ರಾಜ್‌ಘಾಟ್‌ನಲ್ಲಿ ಪುಟಿನ್...
ರಾಷ್ಟ್ರಪತಿ ಭವನದ ಆವರಣದಲ್ಲಿ ಪುಟಿನ್ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜ್‌ಘಾಟ್‌ಗೂ ಭೇಟಿ ನೀಡಿದ ಪುಟಿನ್, ಮಹಾತ್ಮ ಗಾಂಧಿಯವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಆಧುನಿಕ ಭಾರತದ ಸ್ಥಾಪಕರಲ್ಲಿ ಒಬ್ಬರಾದ, ಮಹಾನ್ ತತ್ವಜ್ಞಾನಿ ಮತ್ತು ಮಾನವತಾವಾದಿ ಮಹಾತ್ಮ ಗಾಂಧಿಯವರು ವಿಶ್ವ ಶಾಂತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ, ಒಳ್ಳೆಯತನ ಮತ್ತು ಮಾನವೀಯತೆಯ ಬಗ್ಗೆ ಅವರ ವಿಚಾರಗಳು ಇಂದಿಗೂ ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ ಎಂದು ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ(ಏಜೆನ್ಸೀಸ್).