ಭಾರತ-ನೇಪಾಳ ಗಡಿ ವಿವಾದ: 3ನೇ ದೇಶಕ್ಕೆ ಇಲ್ಲಿ ಜಾಗವಿಲ್ಲ, ಶೇ. ೯೮ ರಷ್ಟು ಗಡಿ ಈಗಾಗಲೇ ಫೈನಲ್! ಬಾಲೆನ್ ಶಾ ಹೇಳಿಕೆಗೆ MEA ಖಡಕ್ ವಾರ್ನಿಂಗ್!
ನವದೆಹಲಿ: ನೆರೆದೇಶ ನೇಪಾಳದ ಪ್ರಧಾನಿ ಬಾಲೆನ್ ಶಾ ಭಾರತದೊಂದಿಗಿನ ಗಡಿ ವಿವಾದದ ವಿಷಯದಲ್ಲಿ ಚೀನಾ ಮತ್ತು ಬ್ರಿಟನ್ ದೇಶಗಳನ್ನು ಎಳೆದು ತರಲು ಯತ್ನಿಸಿದ ರಾಜತಾಂತ್ರಿಕ ಕುತಂತ್ರಕ್ಕೆ ಭಾರತ ಸರ್ಕಾರ(India-Nepal Border Issue) ತಿರುಗೇಟು ನೀಡಿದೆ. ಭಾರತ ಮತ್ತು ನೇಪಾಳ ನಡುವಿನ ಗಡಿ ಬಿಕ್ಕಟ್ಟು ಕೇವಲ ದ್ವಿಪಕ್ಷೀಯ ವಿಷಯವಾಗಿದ್ದು, ಇದರಲ್ಲಿ ಯಾವುದೇ 3ನೇ ದೇಶದ ಹಸ್ತಕ್ಷೇಪ ಸಹಿಸುವುದಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅತ್ಯಂತ ಕಠಿಣ ಶಬ್ದಗಳಲ್ಲಿ ಎಚ್ಚರಿಸಿದೆ.
ಯಾರದ್ದೋ ಪ್ರಚೋದನೆಗೆ ಇಲ್ಲಿ ಜಾಗವಿಲ್ಲ!- ನೇಪಾಳಕ್ಕೆ ಭಾರತದ ನೇರ ಎಚ್ಚರಿಕೆ
ನೇಪಾಳದ ಪ್ರಧಾನಿ ಬಾಲೆನ್ ಶಾ ಮತ್ತು ಅಲ್ಲಿನ ವಿದೇಶಾಂಗ ಸಚಿವಾಲಯ ಇತ್ತೀಚೆಗೆ ಗಡಿ ವಿಷಯವಾಗಿ ನೀಡಿರುವ ಅಧಿಕೃತ ಹೇಳಿಕೆಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಭಾರತ ಮತ್ತು ನೇಪಾಳ ನಡುವಿನ ಗಡಿಯ ಸುಮಾರು ಶೇ. ೯೮ ರಷ್ಟು ಭಾಗವನ್ನು ಈಗಾಗಲೇ ಸಂಪೂರ್ಣವಾಗಿ ಗುರುತಿಸಿ, ಗಡಿ ರೇಖೆ ಎಳೆಯಲಾಗಿದೆ. ಕೇವಲ ಕೆಲವು ಸಣ್ಣ ಪ್ರದೇಶಗಳು ಮಾತ್ರ ಇತ್ಯರ್ಥವಾಗಬೇಕಿದೆ. ಗಂಡಕ ನದಿಯ ಹರಿವಿನ ದಿಕ್ಕು ಸತತವಾಗಿ ಬದಲಾಗುತ್ತಿರುವುದರಿಂದ ಈ ಗಡಿ ಗೊಂದಲ ಸೃಷ್ಟಿಯಾಗಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ವಿವಾದವಿಲ್ಲ ಎಂದು ಕಠಿಣವಾಗಿ ಹೇಳಿದೆ.
ಮುಂದುವರಿದು, ಗಡಿ ಭಾಗದ ಕೆಲವು ನಿಯೋಜಿತ ಪ್ರದೇಶಗಳಲ್ಲಿ ನೋ-ಮ್ಯಾನ್ಸ್ ಲ್ಯಾಂಡ್ ಅತಿಕ್ರಮಣವಾಗಿರುವ ಪ್ರಕರಣಗಳು ವರದಿಯಾಗಿದ್ದು, ಉಭಯ ದೇಶಗಳ ಅಧಿಕಾರಿಗಳು ಜಂಟಿಯಾಗಿ ಮ್ಯಾಪಿಂಗ್ ಮಾಡುತ್ತಿದ್ದಾರೆ. ಗಡಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಬಗೆಹರಿಸಲು ನಮ್ಮ ನಡುವೆ ಈಗಾಗಲೇ ಬಲಿಷ್ಠ ದ್ವಿಪಕ್ಷೀಯ ವ್ಯವಸ್ಥೆ ಜಾರಿಯಲ್ಲಿದೆ. ಹೀಗಿರುವಾಗ ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ದೇಶಕ್ಕೆ ಯಾವುದೇ ಪಾತ್ರವಿಲ್ಲ ಎಂಬುದು ಸಂಬಂಧಪಟ್ಟ ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿರಲಿ ಎಂದು ಭಾರತ ಚೀನಾ ಹಾಗೂ ಬ್ರಿಟನ್ ಹೆಸರೆತ್ತದೆ ತೀಕ್ಷ್ಣವಾಗಿ ಗುಡುಗಿದೆ.
ಭಾರತ ಮಾತ್ರವಲ್ಲ, ನಾವು ಕೂಡ ಅತಿಕ್ರಮಣ ಮಾಡಿದ್ದೇವೆ! -ನೇಪಾಳ ಸಂಸತ್ತಿನಲ್ಲಿ ಬಾಲೆನ್ ಶಾ ಅಚ್ಚರಿ
ಇನ್ನೊಂದೆಡೆ, ನೇಪಾಳದ ಪ್ರಧಾನಿ ಬಾಲೆನ್ ಶಾ ಅವರು ಪ್ರಧಾನಿಯಾದ ನಂತರ ಮೊದಲ ಬಾರಿಗೆ ಅಲ್ಲಿನ ಸಂಸತ್ ಅಧಿವೇಶನದಲ್ಲಿ ಭಾಗವಹಿಸಿ ಗಡಿ ವಿವಾದದ ಬಗ್ಗೆ ಮಾತನಾಡುತ್ತಾ ಸ್ಫೋಟಕ ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ. ನಾನು ಪ್ರಧಾನಿಯಾದ ನಂತರವಷ್ಟೇ ನನಗೆ ಒಂದು ಆಘಾತಕಾರಿ ಸತ್ಯ ತಿಳಿದುಬಂದಿದೆ. ಕೇವಲ ಭಾರತ ಮಾತ್ರ ನೇಪಾಳದ ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ, ಬದಲಿಗೆ ನೇಪಾಳ ಕೂಡ ಭಾರತದ ಹಲವು ಪ್ರದೇಶಗಳನ್ನು ಅತಿಕ್ರಮಣ ಮಾಡಿದೆ. ಈಗ ಉಭಯ ದೇಶಗಳು ಸತ್ಯಾಂಶಗಳನ್ನು ಅಧ್ಯಯನ ಮಾಡಿ, ಸೌಹಾರ್ದಯುತವಾಗಿ ಕುಳಿತು ಇದನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ಸಂಸತ್ತಿನಲ್ಲಿ ಸಂಸದರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಆದರೆ, ಇದೇ ವೇಳೆ ವಿವಾದವನ್ನು ಜಾಗತೀಕರಣಗೊಳಿಸಲು ಯತ್ನಿಸಿದ ಬಾಲೆನ್ ಶಾ, ಇತಿಹಾಸಕಾರರು, ಸರ್ವೇಯರ್‌ಗಳು ಮತ್ತು ತಜ್ಞರ ಸಹಾಯದಿಂದ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ನೇಪಾಳ ಒಪ್ಪಿಕೊಂಡಿವೆ ಎಂದು ಹೇಳುತ್ತಲೇ, ಈ ಗಡಿ ವಿಷಯವನ್ನು ತಾವು ಈಗಾಗಲೇ ಚೀನಾ ಮತ್ತು ಬ್ರಿಟನ್ ಸರ್ಕಾರದ ಮುಂದೆಯೂ ಪ್ರಸ್ತಾಪಿಸಿದ್ದಾಗಿ ಹೇಳಿಕೆ ನೀಡಿ ಭಾರತದ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ನೇಪಾಳದಲ್ಲಿ ಚೀನಾದ ಪ್ರಭಾವ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತದ ರಕ್ಷಣಾ ವಲಯ, ಗಡಿ ವಿಷಯದಲ್ಲಿ ಯಾವುದೇ ಹೊರಗಿನ ಶಕ್ತಿಗಳು ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಸಂದೇಶ ರವಾನಿಸಿದೆ,(ಏಜೆನ್ಸೀಸ್).