Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಪದೇ ಪದೇ ಅಡ್ಡಿ ಮತ್ತು ಮುಂದೂಡಿಕೆಗಳೊಂದಿಗೆ ಪ್ರಾರಂಭವಾಗುತ್ತಿದ್ದಂತೆ, ಸದನದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಬಲವಾದ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದರಲ್ಲಿ ಬರೆಯುತ್ತಾ ತರೂರ್, ಸಂಸದೀಯ ಮಾನದಂಡಗಳ ನಿರಂತರ ಸವೆತವು ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುತ್ತಿದೆ. ಅಲ್ಲದೆ, ಇದನ್ನು ತುರ್ತಾಗಿ ಪರಿಹರಿಸಬೇಕು ಎಂದು ಎಚ್ಚರಿಸಿದ್ದಾರೆ.
ದೇಶದ ಅತ್ಯುನ್ನತ ಚರ್ಚೆಯ ವೇದಿಕೆಯಾಗಬೇಕಿದ್ದ ಸಂಸತ್ತನ್ನು ಅಡ್ಡಿಪಡಿಸುವ ಹಂತಕ್ಕೆ ಇಳಿಸಲಾಗಿದೆ. ಈ ಪ್ರವೃತ್ತಿ ಮುಂದುವರಿಯಲು ಅವಕಾಶ ನೀಡುವುದರಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ದುರ್ಬಲಗೊಳ್ಳುತ್ತವೆ. ಇದರಿಂದ ಸಂಸದೀಯ ಪರಿಶೀಲನೆಯ ಮೌಲ್ಯ ಕಡಿಮೆಯಾಗುತ್ತದೆ ಎಂದು ತರೂರ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ತಮ್ಮ ಲೇಖನವನ್ನು ಹಂಚಿಕೊಂಡಿರುವ ತರೂರ್, ಸಂಸದೀಯ ಮಾನದಂಡಗಳ ಸವೆತವು ನಮ್ಮ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುತ್ತಿದೆ. ವಿರೋಧ ಪಕ್ಷಗಳಿಗೆ ವಾರದಲ್ಲಿ ಒಂದು ದಿನ ಸಮಸ್ಯೆಗಳನ್ನು ಎತ್ತಲು ಅವಕಾಶ ನೀಡುವ ಮೂಲಕ ಮತ್ತು ನಂತರ ಅಡ್ಡಿಪಡಿಸುವಿಕೆಯನ್ನು ನಿಷೇಧಿಸುವ ಮೂಲಕ ನಮ್ಮ ರಾಷ್ಟ್ರದ ಚರ್ಚೆಗೆ ಪ್ರಮುಖ ವೇದಿಕೆಯನ್ನು ರಕ್ಷಿಸುವ ಬಗ್ಗೆ ಒಮ್ಮತವನ್ನು ನಾನು ಕರೆಯುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಚರ್ಚೆಯನ್ನು ಅಡ್ಡಿಪಡಿಸುವ ಸಂಸ್ಕೃತಿಯು ಬದಲಾಯಿಸಲಾಗದಂತಾಗುವ ಮೊದಲು ಅಧ್ಯಕ್ಷರು, ಸಂಸದರು ಮತ್ತು ರಾಜಕೀಯ ನಾಯಕರು ಎಲ್ಲಾ ವರ್ಗದವರೂ ಕಾರ್ಯನಿರ್ವಹಿಸಬೇಕು ಎಂದು ತರೂರ್ ತಿಳಿಸಿದರು.
ಸರ್ಕಾರ ಮತ್ತು ವಿರೋಧ ಪಕ್ಷಗಳ ಮೇಲೂ ಟೀಕೆ
ಮುಂದುವರೆದು ಮಾತನಾಡಿದ ತರೂರ್, ಬಿಜೆಪಿ ಮತ್ತು ತಮ್ಮದೇ ಪಕ್ಷವಾದ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಸ್ತುತ ಸ್ಥಿತಿಗೆ ಕಾರಣವಾಗಿವೆ. ಅಲ್ಲದೆ, ಅಡ್ಡಿಪಡಿಸುವ ಅಭ್ಯಾಸವು ಈಗ ಸಾಂಸ್ಥಿಕೀಕರಣಗೊಂಡಿದೆ. ಪ್ರತಿ ಪಕ್ಷವು ಇನ್ನೊಬ್ಬರ ಹಿಂದಿನ ಕ್ರಿಯೆಗಳನ್ನು ತೋರಿಸುವುದರ ಮೂಲಕ ತನ್ನ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.
ಯುಪಿಎ ಅಧಿಕಾರದ ವರ್ಷಗಳಲ್ಲಿ, ಬಿಜೆಪಿ ಸಂಸತ್ತನ್ನು ಆಗಾಗ್ಗೆ ಸ್ಥಗಿತಗೊಳಿಸುತ್ತಿತ್ತು. ಅಲ್ಲದೆ, 15 ನೇ ಲೋಕಸಭೆಯ ಶೇಕಡ 68 ರಷ್ಟು ಸಮಯ ಪ್ರತಿಭಟನೆಗಳಿಂದಾಗಿ ಕಳೆದುಹೋಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇಂದು, ಇಂಡಿಯಾ ಬ್ಲಾಕ್ ಕೂಡ ಇದೇ ರೀತಿಯ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಸರ್ಕಾರವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ನಿರಾಕರಿಸುತ್ತದೆ ಎಂದು ತರೂರ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಸಹಕಾರ ಏಕೆ ಮುಖ್ಯ?
ಸಂಸತ್ತಿನ ಕಾರ್ಯವೈಖರಿ ಕುಸಿತಕ್ಕೆ ಎರಡೂ ಕಡೆಯವರೂ ತಪ್ಪಿತಸ್ಥರು ಎಂದು ತರೂರ್ ಕಿಡಿಕಾರಿದ್ದಾರೆ. ಅಲ್ಲದೆ, ಆಡಳಿತ ಪಕ್ಷವು ಕಲಾಪದಲ್ಲಿ ಭಾಗವಹಿಸಲು ಇಷ್ಟವಿಲ್ಲದಿರುವುದು ಮತ್ತು ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಲು ಆದ್ಯತೆ ನೀಡುವುದರಿಂದ ಅರ್ಥಪೂರ್ಣ ಚರ್ಚೆಗೆ ವೇದಿಕೆಯಾಗಿ ಸಂಸತ್ತಿನ ಪಾತ್ರ ಕುಗ್ಗಿದೆ ಎಂದು ಕಾಂಗ್ರೆಸ್ ಸಂಸದ ತಿಳಿಸಿದ್ದಾರೆ.
ಪ್ರತಿಪಕ್ಷಗಳು ಪ್ರತಿ ವಾರ ಸಮಸ್ಯೆಗಳನ್ನು ಎತ್ತಲು ಒಂದು ದಿನವನ್ನು ನಿಗದಿಪಡಿಸುವ ಯುಕೆಯಂತೆಯೇ ಭಾರತವೂ ಒಂದು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂದು ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಎಲ್ಲಾ ಪಕ್ಷಗಳು ಅಡಚಣೆಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಒಪ್ಪಿಕೊಳ್ಳಬೇಕು ಎಂದು ತರೂರ್ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).