Nanda Devi 
ದೇಶ

ಯುದ್ಧದ ಕಿಚ್ಚಿನ ನಡುವೆ ಭಾರತಕ್ಕೆ ನಿರಾಳ: ಶಿವಲಿಕ್ ಬೆನ್ನಲ್ಲೇ ಗುಜರಾತ್ ತೀರಕ್ಕೆ ಬಂದಿಳಿದ 'ನಂದಾದೇವಿ'! | Nanda Devi

ಭುಜ್ (ಗುಜರಾತ್): ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಭೀಕರ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಅಪಾಯಕಾರಿ ಜಲಮಾರ್ಗವಾಗಿ ಮಾರ್ಪಟ್ಟಿರುವ 'ಹೋರ್ಮುಜ್ ಜಲಸಂಧಿ'ಯನ್ನು ಯಶಸ್ವಿಯಾಗಿ ದಾಟಿ, ಭಾರತದ ಎರಡು ಪ್ರಮುಖ ಎಲ್‌ಪಿಜಿ (LPG) ನೌಕೆಗಳು ಗುಜರಾತ್ ತೀರವನ್ನು ಸುರಕ್ಷಿತವಾಗಿ ತಲುಪಿವೆ.
ಮಂಗಳವಾರ ಬೆಳಗ್ಗೆ 11:25ಕ್ಕೆ ಭಾರತದ ಧ್ವಜ ಹೊತ್ತ 'ನಂದಾದೇವಿ'(Nanda Devi) ನೌಕೆಯು ಗುಜರಾತ್‌ನ ವಾದಿನಾರ್ ಬಂದರಿಗೆ ಬಂದಿಳಿಯಿತು. ಇದಕ್ಕೂ ಒಂದು ದಿನ ಮೊದಲು ಅಂದರೆ ಸೋಮವಾರ ಸಂಜೆ, ಸುಮಾರು 46,000 ಟನ್ ಎಲ್‌ಪಿಜಿ ಹೊತ್ತ 'ಶಿವಲಿಕ್' ನೌಕೆಯು ಮುದ್ರಾ ಬಂದರನ್ನು ತಲುಪಿತ್ತು. ಕತಾರ್‌ನಿಂದ ಹೊರಟಿದ್ದ ಈ ನೌಕೆಗಳು ಕಳೆದ ಒಂಬತ್ತು ದಿನಗಳಿಂದ ಯುದ್ಧ ಪೀಡಿತ ಸಮುದ್ರ ಮಾರ್ಗದಲ್ಲಿ ಸಂಚರಿಸಿ ಭಾರತಕ್ಕೆ ಬಂದಿವೆ.

ಬಂದರುಗಳಲ್ಲಿ ತುರ್ತು ಆದೇಶ

ದೇಶದಾದ್ಯಂತ ಅಡುಗೆ ಅನಿಲದ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು, ಕೇಂದ್ರ ಬಂದರು ಮತ್ತು ಹಡಗು ಸಚಿವಾಲಯವು ವಿಶೇಷ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಡ್ಲಾ ಮತ್ತು ಮುದ್ರಾ ಬಂದರುಗಳಲ್ಲಿ ಅನಿಲ ಹೊತ್ತ ನೌಕೆಗಳಿಗೆ 'ಪ್ರಿಯಾರಿಟಿ ಬರ್ಥಿಂಗ್' (ಆದ್ಯತೆಯ ಮೇರೆಗೆ ನಿಲುಗಡೆ) ನೀಡಲಾಗುತ್ತಿದೆ. ಇದರಿಂದಾಗಿ ನೌಕೆಗಳು ಬಂದರಿಗೆ ಬಂದ ಕೂಡಲೇ ಸರಕನ್ನು ಇಳಿಸಲು ಮತ್ತು ವಿತರಣೆ ಮಾಡಲು ವೇಗ ಸಿಗುತ್ತಿದೆ.

ಸಮುದ್ರದಲ್ಲಿ ಇನ್ನೂ 22 ನೌಕೆಗಳು!

ಸದ್ಯದ ವರದಿಗಳ ಪ್ರಕಾರ, ಪರ್ಷಿಯನ್ ಕೊಲ್ಲಿಯ ಹೋರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಇನ್ನೂ 22 ಭಾರತೀಯ ನೌಕೆಗಳು ಸಿಲುಕಿಕೊಂಡಿವೆ. ಇವುಗಳಲ್ಲಿ ಸುಮಾರು 611 ಭಾರತೀಯ ನಾವಿಕರಿದ್ದಾರೆ. ಇವರ ಸುರಕ್ಷತೆಗಾಗಿ ಭಾರತ ಸರ್ಕಾರವು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದೆ. ಈ ನಡುವೆ ಯುಎಇಯಿಂದ 81,000 ಟನ್ ಕಚ್ಚಾ ತೈಲ ಹೊತ್ತ 'ಜಗ್ ಲಾಡ್ಕಿ' ಎಂಬ ಬೃಹತ್ ನೌಕೆ ಕೂಡ ಭಾರತದತ್ತ ಪ್ರಯಾಣ ಬೆಳೆಸಿದೆ.
ಭಾರತದ ನೌಕಾಪಡೆ ಮತ್ತು ರಾಜತಾಂತ್ರಿಕ ಅಧಿಕಾರಿಗಳು ನಿರಂತರವಾಗಿ ಈ ನೌಕೆಗಳ ಸಂಚಾರವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಎಲ್ಲಾ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ,(ಎಜೆನ್ಸೀಸ್​).