ವಾರಣಾಸಿ: 2030ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ಬಳಿಕ, 2036ರಲ್ಲಿ ಭಾರತ ಪೂರ್ಣ ಪ್ರಮಾಣದಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸಲು ಸಿದ್ದತೆ ನಡೆಸಿದೆ ಎಂದು ಭಾನುವಾರ(ಜ. 04) ಪ್ರಧಾನಿ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ 72ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಹಾಕಿ ವಿಶ್ಚಕಪ್, ಚೆಸ್ ಪಂದ್ಯಾವಳಿ ಹಾಗೂ ಅಂಡರ್-17 FIFA ವಿಶ್ವಕಪ್ ಸೇರಿ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ದೇಶದ ನಾನಾ ನಗರಗಳಲ್ಲಿ ನಡೆಸಲಾಗಿದೆ. 2030ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಲಿದೆ. 2036ರಲ್ಲಿ ಪೂರ್ಣ ಪ್ರಮಾಣದಲ್ಲಿ ಒಲಿಂಪಿಕ್ಸ್ ಆಯೋಜಿಸಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
72ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಇಂದಿನಿಂದ ಜ. 11ವರೆಗೆ ನಡೆಯಲಿದೆ. ದೇಶಾದ್ಯಂತ 58 ತಂಡಗಳು ಭಾಗವಹಿಸಲಿದ್ದು, ಸಾವಿರಕ್ಕೂ ಅಧಿಕ ಆಟಗಾರರು ಆಡಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್, ವಾರಣಾಸಿಯಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುವುದು ನಗರದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಕ್ರೀಡಾ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯಾಗಿದೆ ಎಂದು ಹೇಳಿದೆ (ಏಜೆನ್ಸೀಸ್).