ಪ್ರಧಾನಿ ನರೇಂದ್ರ ಮೋದಿ 
ದೇಶ

ಪಶ್ಚಿಮ ಏಷ್ಯಾದ ಬಿಕ್ಕಟ್ಟನ್ನು ಭಾರತ ಸರಿಯಾಗಿ ನಿರ್ವಹಿಸಿದೆ; ಆದರೆ ವಿಪಕ್ಷಗಳು ಅರಾಜಕತೆ ಹರಡಲೆತ್ನಿಸುತ್ತಿವೆ: ಪ್ರಧಾನಿ ಮೋದಿ | PM Modi

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಬಿಕ್ಕಟ್ಟಿನ ಪರಿಣಾಮವನ್ನು ಭಾರತ ಸರಿಯಾಗಿ ನಿರ್ವಹಿಸಿದ್ದು, ಇಂಧನ ಕೊರತೆ ಮತ್ತು ಬೆಲೆ ಏರಿಕೆಯ ಬಗ್ಗೆ ಭೀತಿಯನ್ನು ಸೃಷ್ಟಿಸುವ ಮೂಲಕ ವಿಪಕ್ಷಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಮಂಗಳವಾರ(ಮಾ. 31) ಪ್ರಧಾನಿ ಮೋದಿ(PM Modi) ಆರೋಪಿಸಿದ್ದಾರೆ.
ಗುಜರಾತ್‌ನ ವಾವ್-ಥರಡ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಅವರು, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದಿಂದ ಉಂಟಾದ ಜಾಗತಿಕ ಅಡೆತಡೆಗಳು ವಿಶ್ವಾದ್ಯಂತ ಇಂಧನ ಪೂರೈಕೆಯ ಮೇಲೆ, ವಿಶೇಷವಾಗಿ ಡೀಸೆಲ್, ಪೆಟ್ರೋಲ್ ಹಾಗೂ ಎಲ್​ಪಿಜಿ ಮೇಲೆ ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಬಲವಾದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಏಕತೆಯಿಂದಾಗಿ ಭಾರತ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ. ಜಾಗತಿಕ ತೊಂದರೆಗಳ ಹೊರತಾಗಿಯೂ, ಭಾರತವು ದೊಡ್ಡ ಅಡಚಣೆಯನ್ನು ತಪ್ಪಿಸಿದೆ ಎಂದಿದ್ದಾರೆ.
ಮುಂದುವರೆದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ದೇಶಕ್ಕೆ ಒಗ್ಗಟ್ಟಿನ ಅಗತ್ಯವಿರುವ ಸಮಯದಲ್ಲಿ ಕಾಂಗ್ರೆಸ್ ನಾಯಕರು ವದಂತಿಗಳು ಮತ್ತು ಭಯವನ್ನು ಹರಡುತ್ತಿದ್ದಾರೆ. ಇಂಧನ ಪಂಪ್‌ಗಳ ಮುಂದೆ ಜನರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಪಡೆಯಲು ನೋಡ್ತಿದೆ ಎಂದು ಕಿಡಿಕಾರಿದ್ದಾರೆ.
ಭಾರತವು ಯಾವುದೇ ಬಿಕ್ಕಟ್ಟನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).