ಭಾರತೀಯರ ಪಾಲಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಪ್ಯಾಷನ್ ಮತ್ತು ಆಪತ್ಕಾಲದ ಆಸ್ತಿ. ಆದರೆ 2025ರಲ್ಲಿ ಚಿನ್ನದ ಬೆಲೆ ಸಾಮಾನ್ಯ ಜನರ ಕೈಗೆಟುಕದ ಮಟ್ಟಕ್ಕೆ ಏರಿದ್ದು ಕಳವಳಕಾರಿ ಸಂಗತಿ. ವಿಶ್ವ ಚಿನ್ನ ಮಂಡಳಿ (ವರ್ಲ್ಡ್ ಗೋಲ್ಡ್ ಕೌನ್ಸಿಲ್- ಡಬ್ಲ್ಯೂಜಿಸಿ) ಗುರುವಾರ ಬಿಡುಗಡೆ ಮಾಡಿರುವ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿರುವ ಪ್ರಕಾರ, 2024ರಲ್ಲಿ 802.8 ಟನ್ಗಳಷ್ಟಿದ್ದ ಭಾರತದಲ್ಲಿನ ಚಿನ್ನದ ಬೇಡಿಕೆ, 2025ರಲ್ಲಿ 710.9 ಟನ್ಗಳಿಗೆ ಇಳಿಕೆಯಾಗಿದೆ.
ಅಂದರೆ ಸುಮಾರು ಶೇ. 11ರಷ್ಟು ಬೇಡಿಕೆ ಕುಸಿದಿದೆ. ಬೆಲೆ ಏರಿಕೆಯ ಪ್ರಮಾಣ ಎಷ್ಟಿತ್ತೆಂದರೆ, 2024ರ ಜನವರಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 70,754 ರೂ. ಇತ್ತು. ಆದರೆ 2025ರ ಜನವರಿ ವೇಳೆಗೆ ಇದು ಶೇ. 67ರಷ್ಟು ಜಿಗಿತ ಕಂಡು 1,01,572 ರೂ.ಗೆ ತಲುಪಿತು. ಈ ಬೆಲೆ ಏರಿಕೆಯ ಬಿಸಿಯಿಂದಾಗಿ ಆಭರಣಗಳ ಬೇಡಿಕೆ ಶೇ. 24ರಷ್ಟು ಕುಸಿದು 430.5 ಟನ್ಗಳಿಗೆ ಬಂದು ನಿಂತಿತು. ಮದುವೆ ಸೀಸನ್ ಇದ್ದರೂ, ಬೆಲೆ ಹೆಚ್ಚಾದ ಕಾರಣ ಜನ ಆಭರಣ ಖರೀದಿಸಲು ಹಿಂದೇಟು ಹಾಕಿದ್ದಾರೆ ಎಂಬುದು ಅಂಕಿಅಂಶಗಳಿಂದ ದೃಢಪಟ್ಟಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಚಿನ್ನದ ಬೇಡಿಕೆ ಪ್ರಮಾಣ (ವಾಲ್ಯೂಮ್ ಕುಸಿದಿದ್ದರೂ, ಅದರ ಒಟ್ಟು ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ, 2024ರಲ್ಲಿ 5,75,930 ಕೋಟಿ ರೂ.ಗಳಷ್ಟಿದ್ದ ಚಿನ್ನದ ವಹಿವಾಟು ಮೌಲ್ಯ, 2025ರಲ್ಲಿ ಶೇ. 30ರಷ್ಟು ವೃದ್ಧಿಸಿ 7,51,490 ಕೋಟಿ ರೂ.ಗಳಿಗೆ ತಲುಪಿದೆ. ಡಬ್ಲೂ್ಯಜಿಸಿ ಇಂಡಿಯಾ ಪ್ರಾದೇಶಿಕ ಸಿಇಒ ಸಚಿನ್ ಜೈನ್ ಅವರ ಪ್ರಕಾರ, 2025ರ ಕೊನೆಯ ತ್ರೖೆಮಾಸಿಕದಲ್ಲಿ ಆಭರಣಗಳ ಪ್ರಮಾಣ ಶೇ. 23ರಷ್ಟು ಇಳಿಕೆಯಾಗಿದ್ದರೂ, ಹೂಡಿಕೆ ರೂಪದ ಬೇಡಿಕೆ ಶೇ. 26ರಷ್ಟು ಏರಿಕೆಯಾಗಿದೆ. ಜನರು ಬಂಗಾರವನ್ನು ಕೇವಲ ಅಲಂಕಾರಕ್ಕೆ ಬಳಸದೆ, ಸುರಕ್ಷಿತ ಹೂಡಿಕೆಯಾಗಿ ನೋಡುತ್ತಿರುವುದು ಇಲ್ಲಿ ಗಮನಾರ್ಹ.
ಭಾರತದಲ್ಲಿ ಬೇಡಿಕೆ ತಗ್ಗಿದ್ದರೆ, ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆಯ ಹವಾ ಜೋರಾಗಿದೆ. 2025ರಲ್ಲಿ ಪ್ರಪಂಚದಾದ್ಯಂತ ಚಿನ್ನದ ಬೇಡಿಕೆ 5,002 ಟನ್ಗಳನ್ನು ತಲುಪುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಅಮೆರಿಕನ್ ಡಾಲರ್ ಮೌಲ್ಯದ ಕುಸಿತ ಮತ್ತು ಷೇರು ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದಾಗಿ ಜಾಗತಿಕ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ. ಹೂಡಿಕೆ ರೂಪದ ಬೇಡಿಕೆ 2024ರಲ್ಲಿ 1,185 ಟನ್ಗಳಷ್ಟಿದ್ದರೆ, 2025ರಲ್ಲಿ ಇದು 2,175 ಟನ್ಗಳಿಗೆ ಏರಿಕೆಯಾಗಿದೆ.
ವಿಶ್ವದ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ತಮ್ಮ ಮೀಸಲು ನಿಧಿಯಲ್ಲಿ ಚಿನ್ನವನ್ನು ಸಂಗ್ರಹಿಸಲು ಹೆಚ್ಚಿನ ಆಸಕ್ತಿ ತೋರುತ್ತಿವೆ. 2025ರಲ್ಲಿ ಈ ಬ್ಯಾಂಕ್ಗಳು ಒಟ್ಟು 863 ಟನ್ ಚಿನ್ನ ಖರೀದಿಸಿವೆ. ಇದರಲ್ಲಿ ಪೋಲೆಂಡ್ ರಾಷ್ಟ್ರೀಯ ಬ್ಯಾಂಕ್ 102 ಟನ್ ಖರೀದಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಕಜಕಿಸ್ತಾನ್, ಬ್ರೆಜಿಲ್, ಅಜೆರ್ಬೆಜಾನ್ ಮತ್ತು ಚೀನಾ ಕೂಡ ಗಣನೀಯ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸಿ ಇಟ್ಟುಕೊಂಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೂಡ ಈ ವರ್ಷ 4 ಟನ್ ಚಿನ್ನವನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದೆ.
ಬೆಲೆ ಹೆಚ್ಚಾದಾಗ ಸಾಮಾನ್ಯವಾಗಿ ಜನರು ತಮ್ಮ ಬಳಿ ಇರುವ ಹಳೆಯ ಚಿನ್ನವನ್ನು ಮಾರಿ ಲಾಭ ಮಾಡಿಕೊಳ್ಳುತ್ತಾರೆ. ಆದರೆ 2025ರಲ್ಲಿ ಈ ಪ್ರವೃತ್ತಿ ಶೇ. 27ರಷ್ಟು ಕಡಿಮೆಯಾಗಿದೆ. ಅಂದರೆ, ಬೆಲೆ ಇನ್ನೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಅಥವಾ ಚಿನ್ನದ ಮೇಲಿನ ಮೋಹದಿಂದಾಗಿ ಜನರು ತಮ್ಮ ಬಳಿ ಇರುವ ಚಿನ್ನವನ್ನು ಮಾರಾಟ ಮಾಡಲು ಇಷ್ಟಪಡುತ್ತಿಲ್ಲ. ಚಿನ್ನ ಅತ್ಯಂತ ವಿಶ್ವಾಸಾರ್ಹ ಆಸ್ತಿ ಎಂಬುದನ್ನು ಇದು ಮತ್ತೊಮ್ಮೆ ದೃಢಪಡಿಸುತ್ತದೆ.
2026ರಲ್ಲಿ ಭಾರತದ ಚಿನ್ನದ ಬೇಡಿಕೆ 600ರಿಂದ 700 ಟನ್ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ಅಸ್ಥಿರತೆ ಮುಂದುವರಿಯುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ಚಿನ್ನದ ಬೆಲೆ ಏರುಗತಿಯಲ್ಲೇ ಇರಲಿದೆ. 2026ರ ಆರಂಭದಲ್ಲೇ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 5,000 ಡಾಲರ್ ಗಡಿ ದಾಟುವ ಮೂಲಕ ಹೊಸ ಸಂಚಲನ ಮೂಡಿಸಿದೆ. ಡಿಜಿಟಲ್ ಗೋಲ್ಡ್ ಮತ್ತು ಇಟಿಎಫ್ಗಳ ಮೇಲಿನ ಹೂಡಿಕೆ ಈ ವರ್ಷ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಡಬ್ಲೂ್ಯಜಿಸಿ ವಿಶ್ಲೇಷಕಿ ಲೂಯಿಸ್ ಸ್ಟ್ರೀಟ್. ಒಟ್ಟಾರೆ ಹೇಳುವುದಾದರೆ, 2025 ಚಿನ್ನದ ಮಾರುಕಟ್ಟೆಗೆ ಐತಿಹಾಸಿಕ ವರ್ಷವಾಗಿ ದಾಖಲಾಗಿದೆ. ಬೆಲೆ ಏರಿಕೆ ಸಾಮಾನ್ಯ ಗ್ರಾಹಕರನ್ನು ಕಂಗೆಡಿಸಿದ್ದರೂ, ಹೂಡಿಕೆದಾರರಿಗೆ ಮಾತ್ರ ಚಿನ್ನ ‘ಅಕ್ಷಯ ಪಾತ್ರೆ’ಯಾಗಿ ಪರಿಣಮಿಸಿದೆ.