ಭಾರತದ ಜಿಡಿಪಿ  
ದೇಶ

ಭಾರತದ ಜಿಡಿಪಿಯಲ್ಲಿ ಬೆಳವಣಿಗೆ ಜಿಗಿತ! ಎರಡನೇ ತ್ರೈಮಾಸಿಕದಲ್ಲಿ ಶೇ.8.2ರಷ್ಟು ದಾಖಲು | India GDP

ಪ್ರಮುಖ ಮುಖ್ಯಾಂಶಗಳು

  • ಸಕ್ತ ಹಣಕಾಸು ವರ್ಷದ 2025-26ರ ಜುಲೈ-ಸೆಪ್ಟೆಂಬರ್‌ನ ಎರಡನೇ ತ್ರೈಮಾಸಿಕ
  • ಜಿಡಿಪಿ ಬೆಳವಣಿಗೆ ದರವು ಶೇ.8.2ರಷ್ಟು ದಾಖಲು
  • ಹಿಂದಿನ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು ಶೇ.7.8ರಷ್ಟು ದಾಖಲು
ನವದೆಹಲಿ: ಭಾರತದ ಆರ್ಥಿಕತೆಯು ಏರುಗತಿಯಲ್ಲಿದೆ. ಪ್ರಸಕ್ತ ಹಣಕಾಸು ವರ್ಷದ 2025-26ರ ಜುಲೈ-ಸೆಪ್ಟೆಂಬರ್‌ನ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ.8.2ರಷ್ಟು ದಾಖಲಾಗಿದೆ.
ಹಿಂದಿನ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು ಶೇ.7.8ರಷ್ಟು ದಾಖಲಾಯಿತು. ಇದು ಕಳೆದ ಆರು ತ್ರೈಮಾಸಿಕಗಳಲ್ಲಿ ಅತಿ ಹೆಚ್ಚು ಎಂಬುದು ಗಮನಾರ್ಹ. ಕಳೆದ ವರ್ಷ ಇದೇ ಅವಧಿಯಲ್ಲಿ ಬೆಳವಣಿಗೆ ದರವು ಶೇ.5.6ರಷ್ಟು ದಾಖಲಾಗಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ), ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂಒಎಸ್‌ಪಿಐ), ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ತ್ರೈಮಾಸಿಕ ಅಂದಾಜುಗಳನ್ನು ಬಿಡುಗಡೆಗೊಳಿಸಿದೆ.
ಜಾಗತಿಕ ವ್ಯಾಪಾರ ಅನಿಶ್ಚಿತತೆಯ ನಡುವೆ ಬಲವಾದ ಗ್ರಾಹಕ ಖರ್ಚು ಮತ್ತು ಉತ್ಪಾದನಾ ವಲಯವು ಬೆಳವಣಿಗೆಯ ದರದ ಪ್ರಮುಖ ಇಂಜಿನ್‌ಗಳಾಗಿವೆ. ದೇಶೀಯ ಆರ್ಥಿಕತೆಯನ್ನು ಹೆಚ್ಚಿಸಲು, ಕೃಷಿ ಸೇರಿದಂತೆ ಪ್ರಮುಖ ವಲಯಗಳಲ್ಲಿನ ತೆರಿಗೆ ಕಡಿತವು ಸಹ ಬೆಳವಣಿಗೆಗೆ ಕೊಡುಗೆ ನೀಡಿದೆ. ಜಿಡಿಪಿಯ ಶೇ.14ರಷ್ಟಿರುವ ಉತ್ಪಾದನಾ ವಲಯವು ಎರಡನೇ ತ್ರೈಮಾಸಿಕದಲ್ಲಿ ಶೇ.9.1ರಷ್ಟು ಬೆಳೆದಿದೆ.
ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಇದು ಶೇ.2.2 ರಷ್ಟಿತ್ತು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಲು, ಭಾರತವು ಸ್ಥಿರ ಬೆಲೆಯಲ್ಲಿ ಶೇ.8ರಷ್ಟು ಬೆಳವಣಿಗೆ ದರವನ್ನು ಸಾಧಿಸಬೇಕಾಗುತ್ತದೆ ಎಂದು ಜನವರಿ 31ರಂದು ಬಿಡುಗಡೆಯಾದ ಆರ್ಥಿಕ ಸಮೀಕ್ಷೆ 2024-25 ದಾಖಲೆ ತಿಳಿಸಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು, ಮುಂದಿನ 22 ವರ್ಷಗಳ ಕಾಲ ಸರಾಸರಿ ಶೇ.7.8ರಷ್ಟು ಬೆಳವಣಿಗೆ ಸಾಧಿಸಬೇಕಾಗುತ್ತದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ,(ಏಜೆನ್ಸೀಸ್​).