ಶೀಘ್ರವೇ ಭಾರತದ ಮೊದಲ ಬುಲೆಟ್​ ರೈಲು ಸಂಚಾರ  
ದೇಶ

2 ಗಂಟೆ, 508 ಕಿ.ಮೀ! ಈ ದಿನಾಂಕದಂದು ಭಾರತದಲ್ಲಿ ಸಂಚರಿಸಲಿದೆ ಮೊದಲ ಬುಲೆಟ್​ ರೈಲು

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್ 15, 2027ಕ್ಕೆ ಭಾರತದಲ್ಲಿ ಮೊದಲ ಬುಲೆಟ್ ರೈಲು ಸಂಚಾರ
  • 2 ಗಂಟೆಗೆ 508 ಕಿ.ಮೀ ವೇಗದಲ್ಲಿ ಸಂಚಾರ
  • ಸೂರತ್​ನಿಂದ ಬಿಲಿಮೋರಾಗೆ ಮೊದಲ ಸೇವೆ
ನವದೆಹಲಿ: ಚೀನಾ, ಜಪಾನ್​ನಂತಹ ದೇಶಗಳು ಬುಲೆಟ್​ ರೈಲುಗಳ ಪ್ರಯೋಗ ಮತ್ತು ಸಂಚಾರಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿವೆ. ಪ್ರಸ್ತುತ, ತಮ್ಮ ದೇಶಗಳಲ್ಲಿ ಜನರಿಗೆ ಸೇವೆಯನ್ನು ಒದಗಿಸುತ್ತಿವೆ. ಆದರೀಗ, ಭಾರತದ ಸಮಯ. ಇಷ್ಟು ವರ್ಷಗಳ ಕಾಲ ಭಾರತೀಯರು ತೀವ್ರ ಕುತೂಹಲ, ಕಾತರದಿಂದ ಕಾಯುತ್ತಿದ್ದ ದಿನ ಕಡೆಗೂ ಸನ್ನಿಹಿತವಾಗಿದೆ.
ಜನರ ಸೇವಗೆ ಸಿದ್ಧವಾಗಿರುವ ಬುಲೆಟ್ ರೈಲು, 2027ರಲ್ಲಿ ಭಾರತದಲ್ಲಿ ಸಂಚಾರ ನಡೆಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತವಾಗಿ ಘೋಷಿಸಿದರು. "ಆಗಸ್ಟ್ 15, 2027ರಂದು ಭಾರತದ ಮೊದಲ ಬುಲೆಟ್ ರೈಲು ಸಿದ್ಧವಾಗಲಿದೆ. ಆರಂಭದಲ್ಲಿ ಸೂರತ್​ನಿಂದ ಬಿಲಿಮೋರಾಗೆ ಸೇವೆಗಳು ಶುರುವಾಗಲಿದ್ದು, ನಂತರದಲ್ಲಿ ವಾಪಿಯಿಂದ ಸೂರತ್​, ಅಹಮದಾಬಾದ್​, ಥಾಣೆಯಿಂದ ಅಹಮದಾಬಾದ್​ಗೆ. ಅಂತಿಮವಾಗಿ, ಮುಂಬೈನಿಂದ ಅಹಮದಾಬಾದ್​ಗೆ ಸೇವೆಗಳು ಇರಲಿವೆ" ಎಂದು ತಿಳಿಸಿದರು.
"ನೀವು ಈಗ ಬುಲೆಟ್ ರೈಲಿಗೆ ಟಿಕೆಟ್ ಖರೀದಿಸಬಹುದು. ಅದು 2027ರ ವೇಳೆಗೆ ಸೇವೆಗೆ ಬರಲಿದೆ" ಎಂದು ಅಶ್ವಿನಿ ವೈಷ್ಣವ್ ನಗೆ ಚಟಾಕಿ ಹಾರಿಸಿದರು. ಈ ಪ್ರಾಜೆಕ್ಟ್​ ಅಂತಿಮವಾಗಿ 508 ಕಿಮೀ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್​ಗೆ ಸಾಕ್ಷಿಯಾಗಲಿದೆ. ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಈ ಬುಲೆಟ್​ ರೈಲು, 2 ಗಂಟೆಯ ಅವಧಿಯಲ್ಲಿ ಬರೋಬ್ಬರಿ 508 ಕಿ.ಮೀ ಕ್ರಮಿಸಲಿದೆ.
ಬುಲೆಟ್ ರೈಲು ಮುಂಬೈನಿಂದ ಅಹಮದಾಬಾದ್​ಗೆ 1 ಗಂಟೆ 58 ನಿಮಿಷಗಳಲ್ಲಿ ಕ್ರಮಿಸಲಿದೆ, ಅದು ನಾಲ್ಕು ನಿಲ್ದಾಣಗಳ ನಿಲ್ಲುಗಡೆಯನ್ನು ಆಧರಿಸಿ. ಎಲ್ಲಾ 12 ಸ್ಟೇಷನ್​ಗಳಲ್ಲಿ ನಿಂತರೆ, ಪ್ರಯಾಣದ ಸಮಯವು 2 ಗಂಟೆ 17 ನಿಮಿಷಕ್ಕೆ ತಲುಪಲಿದೆ. ರೈಲಿನ ಮಾರ್ಗದ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ಭೂಸ್ವಾಧೀನ, ಸುರಂಗ ನಿರ್ಮಾಣ, ಸ್ಟೇಷನ್​ ನಿರ್ಮಾಣ ಮತ್ತು ವಿದ್ಯುದ್ದೀಕರಣ ಕಾರ್ಯಗಳು ಏಕಕಾಲದಲ್ಲಿ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).