ಭಾರತ-ಇಯು ವ್ಯಾಪಾರ ಒಪ್ಪಂದ: ಮದರ್ ಆಫ್ ಆಲ್ ಡೀಲ್ಸ್ ಮೂಲಕ ಭಾರತಕ್ಕೆ ಬಂಪರ್ ಲಾಭ; ಅಮೆರಿಕ ಪ್ರತಿಕ್ರಿಯೆ 
ದೇಶ

ಭಾರತ-ಇಯು ವ್ಯಾಪಾರ ಒಪ್ಪಂದ: ಮದರ್ ಆಫ್ ಆಲ್ ಡೀಲ್ಸ್ ಮೂಲಕ ಭಾರತಕ್ಕೆ ಬಂಪರ್ ಲಾಭ; ಅಮೆರಿಕ ಪ್ರತಿಕ್ರಿಯೆ | America

ನ್ಯೂಯಾರ್ಕ್: ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ ಮಂಗಳವಾರ ನಡೆದ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಡೀ ಜಗತ್ತು ಬೆರಗಾಗಿದೆ. ಈ ಒಪ್ಪಂದದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅಮೆರಿಕದ(America) ಟ್ರಂಪ್ ಆಡಳಿತವು, ಈ ವ್ಯವಹಾರದಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ ಎಂದು ಬಣ್ಣಿಸಿದೆ.

ಭಾರತಕ್ಕೆ ಒಲಿದ ಅದೃಷ್ಟ..!

ಈ ಬಗ್ಗೆ ಫಾಕ್ಸ್ ಬಿಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗ್ರೀರ್, ಒಪ್ಪಂದದ ವಿವರಗಳನ್ನು ನಾನು ಗಮನಿಸಿದ್ದೇನೆ. ನಿಸ್ಸಂದೇಹವಾಗಿ ಭಾರತ ಈ ವ್ಯವಹಾರದಲ್ಲಿ ಮೇಲುಗೈ ಸಾಧಿಸಿದೆ. ಅವರಿಗೆ ಯುರೋಪಿನ ಮಾರುಕಟ್ಟೆಗೆ ಈಗ ಅಭೂತಪೂರ್ವ ಪ್ರವೇಶ ಸಿಗಲಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಭಾರತದ ಅಗ್ಗದ ಕಾರ್ಮಿಕ ಶಕ್ತಿ ಮತ್ತು ಬಲಿಷ್ಠ ರಫ್ತು ವಲಯಕ್ಕೆ ಇದು ಸುವರ್ಣಯುಗವನ್ನು ತರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಯುರೋಪಿಯನ್ ಯೂನಿಯನ್ ನಡೆಯ ಬಗ್ಗೆ ಟೀಕೆ

ಅಮೆರಿಕವು ತನ್ನ ದೇಶದ ಉತ್ಪಾದನೆಗೆ ಆದ್ಯತೆ ನೀಡುತ್ತಾ ಜಾಗತೀಕರಣದ ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದರೆ, ಯುರೋಪಿಯನ್ ಯೂನಿಯನ್ ಮಾತ್ರ ಹಳೆಯ ಜಾಗತೀಕರಣದ ನೀತಿಗಳನ್ನೇ ಅಪ್ಪಿಕೊಳ್ಳುತ್ತಿದೆ. ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವುದು ದುಬಾರಿಯಾಗುತ್ತಿರುವಾಗ, ಯುರೋಪ್ ತನ್ನ ಉತ್ಪನ್ನಗಳಿಗೆ ಭಾರತದಂತಹ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ ಎಂದು ಗ್ರೀರ್ ಕಿಡಿಕಾರಿದ್ದಾರೆ.

ಕಾರ್ಮಿಕರು ಮತ್ತು ವಲಸೆ ಹಕ್ಕುಗಳು

ಭಾರತದ ಬಳಿ ಅಗ್ಗದ ಕಾರ್ಮಿಕ ಶಕ್ತಿಯಿದೆ. ಇಯು ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರು ಭಾರತೀಯ ಕಾರ್ಮಿಕರ ಮೊಬಿಲಿಟಿ ಬಗ್ಗೆ ಮಾತನಾಡಿದ್ದಾರೆ. ಇದರರ್ಥ ಭಾರತೀಯ ಉದ್ಯೋಗಿಗಳಿಗೆ ಯುರೋಪಿನಲ್ಲಿ ಹೆಚ್ಚಿನ ವಲಸೆ ಅಥವಾ ಕೆಲಸದ ಹಕ್ಕುಗಳು ಸಿಗಬಹುದು ಎಂದು ತೋರುತ್ತದೆ ಎಂದು ಜೇಮಿಸನ್ ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ ತೈಲ ಮತ್ತು ಅಮೆರಿಕದ ಸುಂಕಗಳು

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಕಡಿಮೆ ಮಾಡುವಲ್ಲಿ ಪ್ರಗತಿ ಸಾಧಿಸಿದೆ ಎಂಬುದು ನಿಜವಾಗಿದೆ. ಆದರೆ, ರಷ್ಯಾದ ತೈಲದ ಮೇಲಿನ ರಿಯಾಯಿತಿಯನ್ನು ಅವರು ಇಷ್ಟಪಡುತ್ತಾರೆ. ಆದರೂ, ಭಾರತದ ಮೇಲಿನ ಹೆಚ್ಚುವರಿ ಶೇ.25 ಶಿಕ್ಷಾರ್ಹ ಸುಂಕಗಳು ಸದ್ಯಕ್ಕೆ ಮುಂದುವರಿಯಲಿವೆ. ನಾವು ಭಾರತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಗ್ರೀರ್ ಹೇಳಿದ್ದಾರೆ.

ಹೊಸ ಜಾಗತಿಕ ವ್ಯವಸ್ಥೆ

ನಾವು ಹೊಸ ಆರ್ಥಿಕ ವ್ಯವಸ್ಥೆಯನ್ನು ಪ್ರವೇಶಿಸುತ್ತಿದ್ದೇವೆ. ಹಳೆಯ ಕಾಲದ ಆರ್ಥಿಕ ನಿಯಮಗಳು ಈಗ ಪರಿಣಾಮಕಾರಿಯಾಗಿಲ್ಲ. ಯುರೋಪಿಯನ್ ಅಧಿಕಾರಿಗಳು ಸಹ ಈ ಬದಲಾವಣೆಯನ್ನು ಈಗ ಗುರುತಿಸಲು ಶುರು ಮಾಡಿದ್ದಾರೆ ಎಂದು ಜೇಮಿಸನ್​​ ತಿಳಿಸಿದ್ದಾರೆ.

ಮದರ್ ಆಫ್ ಆಲ್ ಡೀಲ್ಸ್ ವಿಶೇಷತೆಗಳು

ಶೂನ್ಯ ಸುಂಕ: ಭಾರತದ ಸುಮಾರು ಶೇ.99 ರಫ್ತು ಸರಕುಗಳ ಮೇಲೆ ಯುರೋಪ್ ಸುಂಕವನ್ನು ರದ್ದುಗೊಳಿಸಲಿದೆ.
ಉದ್ಯೋಗ ಮತ್ತು ವಲಸೆ: ಭಾರತೀಯ ಕಾರ್ಮಿಕರಿಗೆ ಮತ್ತು ವೃತ್ತಿಪರರಿಗೆ ಯುರೋಪಿನಲ್ಲಿ ಹೆಚ್ಚಿನ ಉದ್ಯೋಗಾವಕಾಶ ಹಾಗೂ ವಲಸೆ ಹಕ್ಕು ಸಿಗುವ ಸಾಧ್ಯತೆ ಇದೆ.
ಕ್ಷೇತ್ರಗಳ ಲಾಭ: ಜವಳಿ, ಚರ್ಮೋದ್ಯೋಗ, ಆಭರಣ ಮತ್ತು ಕೃಷಿ ಉತ್ಪನ್ನಗಳಿಗೆ ಯುರೋಪ್ ದೊಡ್ಡ ಮಾರುಕಟ್ಟೆಯಾಗಲಿದೆ. ಇದಕ್ಕೆ ಪ್ರತಿಯಾಗಿ ಭಾರತವು ಯುರೋಪಿನ ಕಾರುಗಳು, ವೈನ್ ಮತ್ತು ಯಂತ್ರೋಪಕರಣಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿದೆ.

ಅಮೆರಿಕದ ಎಚ್ಚರಿಕೆ ಮತ್ತು ವಿಶ್ಲೇಷಣೆ

ಒಂದೆಡೆ ಭಾರತದ ಯಶಸ್ಸನ್ನು ಒಪ್ಪಿಕೊಂಡರೂ, ಯುರೋಪಿಯನ್ ಯೂನಿಯನ್ ಜಾಗತೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದನ್ನು ಗ್ರೀರ್ ಟೀಕಿಸಿದ್ದಾರೆ. ಟ್ರಂಪ್ ಆಡಳಿತವು ಅಮೆರಿಕದ ಉತ್ಪಾದನೆಗೆ ಆದ್ಯತೆ ನೀಡುತ್ತಿರುವಾಗ, ಯುರೋಪ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಭಾರತದ ಮೊರೆ ಹೋಗಿದೆ ಎಂಬುದು ಅಮೆರಿಕದ ವಾದವಾಗಿದೆ. ಅಲ್ಲದೆ, ರಷ್ಯಾದ ತೈಲ ಖರೀದಿ ವಿಚಾರದಲ್ಲಿ ಭಾರತದ ಮೇಲೆ ವಿಧಿಸಲಾಗಿರುವ ಶೇ.25 ಸುಂಕದ ಬಗ್ಗೆಯೂ ಅಮೆರಿಕದ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಒಟ್ಟಾರೆಯಾಗಿ, ಈ ಒಪ್ಪಂದವು ಭಾರತದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮುನ್ಸೂಚನೆ ನೀಡಿದ್ದು, ವಿಶ್ವ ವ್ಯಾಪಾರ ರಂಗದಲ್ಲಿ ಭಾರತ ಈಗ ಬಾಸ್ ಆಗಿ ಹೊರಹೊಮ್ಮುತ್ತಿದೆ,(ಏಜೆನ್ಸೀಸ್).