Iran Envoy Mohammad Fathali | ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ
ನವದೆಹಲಿ: ಭಾರತದ ಪ್ರಭಾವದ ವಲಯದಲ್ಲಿರುವ ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾ ಮೇಲೆ ಅಮೆರಿಕ ನಡೆಸಿದ ಟಾರ್ಪಿಡೊ ದಾಳಿ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯ ಬೆನ್ನಲ್ಲೇ, ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ (Iran Envoy Mohammad Fathali) ಶನಿವಾರ ನಡೆದ ಇಂಡಿಯಾ ಟುಡೇ ಕಾನ್ಕ್ಲೇವ್ 2026ರಲ್ಲಿ ಮಾತನಾಡುತ್ತಾ, ಬಿಕ್ಕಟ್ಟಿನ ಸಮಯದಲ್ಲಿ ಭಾರತ ನೀಡಿದ ಮಾನವೀಯ ನೆರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಭಾರತದಲ್ಲಿ ನಡೆದ ಬಹುಪಕ್ಷೀಯ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿ ವಿಶಾಖಪಟ್ಟಣದಿಂದ ಇರಾನ್‌ಗೆ ಮರಳುತ್ತಿದ್ದ ಐರಿಸ್ ದೇನಾ ಯುದ್ಧನೌಕೆಯ ಮೇಲೆ ಮಾರ್ಚ್ 4 ರಂದು ಅಮೆರಿಕ ದಾಳಿ ನಡೆಸಿತ್ತು. ಶ್ರೀಲಂಕಾದ ಗ್ಯಾಲೆಯಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ನಡೆದ ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಇರಾನ್ ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಭಾರತದ ಆಹ್ವಾನದ ಮೇರೆಗೆ ಬಂದಿದ್ದ ಹಡಗಿನ ಮೇಲೆ ಈ ದಾಳಿ ನಡೆದಿದ್ದರಿಂದ, ದೇಶದ ನೈತಿಕ ಜವಾಬ್ದಾರಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿತ್ತು.
ಭಾರತದ ನೆರವಿಗೆ ಇರಾನ್ ರಾಯಭಾರಿ ಕೃತಜ್ಞತೆ
ಕಾನ್ಕ್ಲೇವ್ನಲ್ಲಿ ಮಾತನಾಡಿದ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ, ಭಾರತ ಸರ್ಕಾರವು ನಮಗೆ ಎಲ್ಲಾ ರೀತಿಯ ನೆರವು ನೀಡಿದೆ, ನಮ್ಮ ವಿನಂತಿಯನ್ನು ಒಪ್ಪಿಕೊಂಡು ಇರಾನಿನ ಹಡಗುಗಳಿಗೆ ಆಶ್ರಯ ನೀಡಿದೆ. ಆದರೆ ದುರದೃಷ್ಟವಶಾತ್ ಕೆಲವು ದೇಶಗಳು ಸಹಕರಿಸಲು ನಿರಾಕರಿಸಿದವು ಎಂದು ಹೇಳಿದರು. ಅಮೆರಿಕದ ದಾಳಿಯನ್ನು ಖಂಡಿಸಿದ ಫತಾಲಿ, ಇರಾನ್ ಯಾವುದೇ ಕ್ರಮವನ್ನು ಪ್ರತಿಕ್ರಿಯೆಯಿಲ್ಲದೆ ಬಿಡುವುದಿಲ್ಲ. ಶೀಘ್ರದಲ್ಲೇ ನೀವು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಲವನ್ ನೌಕೆಗೆ ಭಾರತದ ಆಶ್ರಯ
ಐರಿಸ್ ದೇನಾ ಮುಳುಗಡೆಯಾದ ಸಮಯದಲ್ಲಿ, ಭಾರತವು ಮತ್ತೊಂದು ಇರಾನಿನ ಯುದ್ಧನೌಕೆ ಐರಿಸ್ ಲವನ್ಗೆ ಕೊಚ್ಚಿ ಬಂದರಿನಲ್ಲಿ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಶನಿವಾರವಷ್ಟೇ ಭಾರತವು ಲವನ್ ನೌಕೆಯ 183 ಸಿಬ್ಬಂದಿಗಳ ಪೈಕಿ 50ಕ್ಕೂ ಹೆಚ್ಚು ಸದಸ್ಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಿಕೊಟ್ಟಿದೆ.
ಜಾಗತಿಕ ಕಾನೂನು ಮತ್ತು ನೈತಿಕತೆಯ ಪ್ರಶ್ನೆ
ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸೆ ಮಾತನಾಡಿ, ಈ ದಾಳಿಯು ಅಂತರರಾಷ್ಟ್ರೀಯ ಕಡಲ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹಿಂದೂ ಮಹಾಸಾಗರದ ನೈತಿಕ ಮೌಲ್ಯಗಳು ಇಲ್ಲಿ ಮುರಿಯಲ್ಪಟ್ಟಿವೆ. ಈ ಪ್ರದೇಶದಲ್ಲಿ ಸ್ಥಿರತೆ ಕಾಪಾಡಲು ಭಾರತದ ಪಾತ್ರ ನಿರ್ಣಾಯಕ ಎಂದರು.
ಇದೇ ವೇಳೆ ಭಾರತದ ರಕ್ಷಣಾ ತಜ್ಞರು ದೇಶದ ನಿಲುವನ್ನು ಸಮರ್ಥಿಸಿಕೊಂಡಿದ್ದು, ಹಡಗು ನಮ್ಮ ಪ್ರಾದೇಶಿಕ ಜಲಪ್ರದೇಶದಿಂದ ಹೊರಹೋದ ಬಳಿಕ ನಮ್ಮ ಜವಾಬ್ದಾರಿ ಮುಗಿಯುತ್ತದೆ. ಆದರೂ ಭಾರತವು ಮಾನವೀಯ ನೆಲೆಯಲ್ಲಿ ಇರಾನ್ ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ನೆರವು ನೀಡಿದೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಮತ್ತು ಲೆ.ಜ. ಡಿಪಿ ಪಾಂಡೆ ತಿಳಿಸಿದ್ದಾರೆ.
ಇರಾನ್ ರಾಯಭಾರಿಯ ಹೇಳಿಕೆಯು ಭಾರತದ ವಿರುದ್ಧ ಕೇಳಿಬರಬಹುದಾಗಿದ್ದ ರಾಜತಾಂತ್ರಿಕ ಟೀಕೆಗಳಿಗೆ ತೆರೆ ಎಳೆದಿದ್ದು, ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭಾವ ಮತ್ತು ಜವಾಬ್ದಾರಿಯುತ ನಡೆಯನ್ನು ಎತ್ತಿಹಿಡಿದಿದೆ(ಏಜೆನ್ಸೀಸ್).