ನವದೆಹಲಿ: "ನಾನು ಭಾರತವನ್ನು ಅಪಾರವಾಗಿ ಪ್ರೀತಿಸುತ್ತೇನೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆಪ್ತ ಸ್ನೇಹಿತ ಮತ್ತು ನಾನವರ ದೊಡ್ಡ ಅಭಿಮಾನಿ. ಭಾರತವು ಯಾವುದೇ ಸಂದರ್ಭದಲ್ಲೂ ಅಮೆರಿಕವನ್ನು ಶೇಕಡಾ 100 ರಷ್ಟು ನಂಬಬಹುದು," ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಆಯೋಜಿಸಲಾಗಿದ್ದ(India-US) ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಮಾರಂಭದಲ್ಲಿ ಅವರು ವಾಷಿಂಗ್ಟನ್‌ನಿಂದ ವರ್ಚುವಲ್ (ವಿಡಿಯೋ ಕಾನ್ಫರೆನ್ಸ್) ಮೂಲಕ ಭಾಗವಹಿಸಿ ಮಾತನಾಡಿದರು. ಜುಲೈ 4, 1776 ರಂದು ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನೆನಪಿಗಾಗಿ ಅಮೆರಿಕ ಈ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸುತ್ತಿದ್ದು, ಭಾರತದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಾಯಿತು.
ಮೋದಿ ಶ್ರೇಷ್ಠ ನಾಯಕ: ಟ್ರಂಪ್ ಶ್ಲಾಘನೆ
ಸಂವಾದದಲ್ಲಿ ಭಾರತದೊಂದಿಗಿನ ಒಡನಾಟವನ್ನು ನೆನೆದ ಟ್ರಂಪ್, "ನಮ್ಮ ದೇಶದ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆ ಈಗ ಹೊಸ ದಾಖಲೆಗಳನ್ನು ಬರೆಯುತ್ತಿವೆ. ಭಾರತಕ್ಕೆ ಏನು ಬೇಕಿದ್ದರೂ ನಮ್ಮಿಂದ ಸಿಗಲಿದೆ. ಪ್ರಧಾನಿ ಮೋದಿ ಶ್ರೇಷ್ಠ ನಾಯಕರಾಗಿದ್ದು, ನಮ್ಮ ನಡುವಿನ ಸ್ನೇಹ ಅತ್ಯಂತ ಗಟ್ಟಿಯಾಗಿದೆ" ಎಂದರು. ಇದೇ ವೇಳೆ ಭಾರತಕ್ಕೆ ಆಗಮಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಶ್ಲಾಘಿಸಿದ ಅವರು, "ರೂಬಿಯೊ ಅಮೆರಿಕ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿಯಾಗಲಿದ್ದಾರೆ" ಎಂದು ಬಣ್ಣಿಸಿದರು.
ಎ.ಆರ್. ರೆಹಮಾನ್ ಸಂಗೀತದ ರಂಗು
ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಮ್ಮಿಲನದಂತಿದ್ದ ಈ ಭವ್ಯ ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಉಪಸ್ಥಿತರಿದ್ದರು. ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಸಂಗೀತ ಕಛೇರಿ ಗಮನ ಸೆಳೆಯಿತು. ಅವರ ಪ್ರಸಿದ್ಧ 'ಜೈ ಹೋ' ಗೀತೆಯ ಪ್ರದರ್ಶನ ಇಡೀ ಸಂಜೆಗೆ ವಿಶೇಷ ಕಳೆ ತಂದಿತು.
ಅಮೆರಿಕ ಫಸ್ಟ್ ಎಂದರೆ ಅಮೆರಿಕ ಮಾತ್ರವಲ್ಲ!
ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್, ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆ ‘ಹೊಸ ಯುಗದ ಅಡಿಪಾಯ’ ಎಂದು ಕರೆದರು. "ಅಧ್ಯಕ್ಷ ಟ್ರಂಪ್ ಮತ್ತು ನಾನು ಮಾತನಾಡುವಾಗಲೆಲ್ಲಾ ಅವರು ಮೊದಲು ಕೇಳುವುದೇ 'ನನ್ನ ಸ್ನೇಹಿತ ಮೋದಿ ಹೇಗಿದ್ದಾರೆ?' ಎಂದು. ವಾಷಿಂಗ್ಟನ್‌ನ 'ಅಮೆರಿಕ ಫಸ್ಟ್' ನೀತಿ ಎಂದರೆ ಅಮೆರಿಕ ಮಾತ್ರ ಎಂದಲ್ಲ. ಅದು ಜಾಗತಿಕ ಪಾಲುದಾರಿಕೆಯನ್ನು ಒಳಗೊಂಡಿದೆ" ಎಂದು ಸ್ಪಷ್ಟಪಡಿಸಿದರು.
ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಅಮೆರಿಕಕ್ಕೆ ಬರೋಬ್ಬರಿ 20.5 ಶತಕೋಟಿ ಡಾಲರ್ (ಸುಮಾರು 20.5 ಬಿಲಿಯನ್ ಡಾಲರ್) ಹೊಸ ಹೂಡಿಕೆಯನ್ನು ತರುವ ಮೂಲಕ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ ಎಂದು ಗೋರ್ ಹೆಮ್ಮೆಯಿಂದ ತಿಳಿಸಿದರು. ಮುಂದಿನ ಕೆಲವು ವಾರಗಳಲ್ಲಿ ಉಭಯ ದೇಶಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಅವರು ಇದೇ ವೇಳೆ ಆಶಾವಾದ ವ್ಯಕ್ತಪಡಿಸಿದರು.
ನಾಳೆ ದೆಹಲಿಯಲ್ಲಿ ಹೈವೋಲ್ಟೇಜ್ 'ಕ್ವಾಡ್' ಸಭೆ
ಮಾರ್ಕೊ ರೂಬಿಯೊ ಅವರ ನಾಲ್ಕು ದಿನಗಳ ಭಾರತ ಭೇಟಿಯ ನಡುವೆಯೇ ಈ ಹೇಳಿಕೆಗಳು ಹೊರಬಿದ್ದಿರುವುದು ರಾಜತಾಂತ್ರಿಕವಾಗಿ ಮಹತ್ವ ಪಡೆದಿದೆ. ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಮತ್ತು ಪಶ್ಚಿಮ ಏಷ್ಯಾದ ಪ್ರಸ್ತುತ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಲು ಮೇ 26 ರಂದು ನವದೆಹಲಿಯಲ್ಲಿ 'ಕ್ವಾಡ್' (ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್) ದೇಶಗಳ ವಿದೇಶಾಂಗ ಸಚಿವರ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇದರ ಅಧ್ಯಕ್ಷತೆ ವಹಿಸಲಿದ್ದಾರೆ,(ಏಜೆನ್ಸೀಸ್).