ದೇಶ

ದೆಹಲಿಯಲ್ಲಿ ನಿರಂತರ ಮಳೆ ಹಿನ್ನೆಲೆ ಇಂಡಿಯಾ ಕೂಟದ ಅಣಕು ಸಂಸತ್ ನಾಳೆಗೆ ಮುಂದೂಡಿಕೆ | Mock Parliament

ಎಸ್​ಐಆರ್​ನಲ್ಲಿ ಅಕ್ರಮ ಆರೋಪ ಮತ್ತು ಚುನಾವಣಾ ಆಯೋಗದ ವಿರುದ್ಧದ ಹೋರಾಟದ ಭಾಗವಾಗಿ ಇಂದು(ಅ. 30) ಇಂಡಿಯಾ ಕೂಟದ ವಿಪಕ್ಷಗಳು ಅಣಕು ಸಂಸತ್​ ಅನ್ನು ಆಯೋಜಿಸಿದ್ದವು. ಆದರೆ ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಮಳೆ ಹಿನ್ನೆಲೆ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ನವದೆಹಲಿ: ಎಸ್​ಐಆರ್​ನಲ್ಲಿ ಅಕ್ರಮ ಆರೋಪ ಮತ್ತು ಚುನಾವಣಾ ಆಯೋಗದ ವಿರುದ್ಧದ ಹೋರಾಟದ ಭಾಗವಾಗಿ ಇಂದು(ಅ. 30) ಇಂಡಿಯಾ ಕೂಟದ ವಿಪಕ್ಷಗಳು ಅಣಕು ಸಂಸತ್​ ಅನ್ನು ಆಯೋಜಿಸಿದ್ದವು. ಆದರೆ ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಮಳೆ ಹಿನ್ನೆಲೆ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕೃತ ನಿವಾಸದ ಹುಲ್ಲುಹಾಸಿನಲ್ಲಿ ಮಧ್ಯಾಹ್ನ 3:30ಕ್ಕೆ ಅಣಕು ಸಂಸತ್ ಆಯೋಜಿಸಲಾಗಿತ್ತು. ಸಿಇಸಿ ಜ್ಞಾನೇಶ್ ಕುಮಾರ ಅವರ ಸಾರ್ವಜನಿಕ ಮಹಾಭಿಯೋಗ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮಳೆ ಹಿನ್ನೆಲೆ ಕಾರ್ಯಕ್ರಮವನ್ನು ನಾಳೆ(ಅ. 31) ಇದೇ ಸಮಯಕ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಅಣಕು ಸಂಸತ್​ನ ಅಧ್ಯಕ್ಷತೆ ವಹಿಸಲಿದ್ದಾರೆ. ಒಟ್ಟು ಮೂರು ಗಂಟೆಗಳ ಕಾಲ ಅಣಕು ಸಂಸತ್ ನಡೆಯಲಿದೆ. ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಖರ್ಗೆ ಅವರು ಕುಮಾರ್ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವವನ್ನು ಮಂಡಿಸಲಿದ್ದಾರೆ. ಇತ್ತ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಮಾರೋಪ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಕುರಿತು ಖರ್ಗೆ ನಿವಾಸದಲ್ಲಿ ಸಭೆ ನಡೆದಿದ್ದು, ಜ್ಞಾನೇಶ್ ಕುಮಾರ್ ಅವರ ಸಾರ್ವಜನಿಕ ದೋಷಾರೋಪಣೆ ಪ್ರಕ್ರಿಯೆ ರೂಪರೇಷೆಗಳನ್ನು ಚರ್ಚಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್ ಮತ್ತು ಕೆ.ಸಿ. ವೇಣುಗೋಪಾಲ್, ಮೀರಾ ಕುಮಾರ್, ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್, ಸಮಾಜವಾದಿ ಪಕ್ಷದ ಹರೇಂದ್ರ ಮಲಿಕ್ ಮತ್ತು ಜೆಎಂಎಂನ ಮಹುವಾ ಮಾಜಾ ಇತರರು ಭಾಗವಹಿಸಿದ್ದರು.

21 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಕನಿಷ್ಠ 30 ಭಾಷಣಕಾರರು ಅಣಕು ಸಂಸತ್​ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಿಜೆಡಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ, ಆದರೆ ಪಕ್ಷವು ಇನ್ನೂ ಭಾಗವಹಿಸುವಿಕೆಯನ್ನು ದೃಢೀಕರಿಸಿಲ್ಲ (ಏಜೆನ್ಸೀಸ್).