ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ಮತ್ತು ರಾಹುಲ್ ಗಾಂಧಿ
ನವದೆಹಲಿ: ಸೋಮವಾರ(ಜೂ. 08) ನಡೆಯಲಿರುವ ಇಂಡಿಯಾ ಮೈತ್ರಿಕೂಟದ(INDIA Block) ಸಭೆಗೂ ಮುನ್ನ ವಿಘ್ನ ಎದುರಾಗಿದ್ದು, ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎಡಪಕ್ಷವೂ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಸ್ಪಷ್ಟೀಕರಣ ನೀಡುವಂತೆ ಕಾಂಗ್ರೆಸ್ ಅನ್ನು ಸಿಪಿಐ(ಎಂ) ಒತ್ತಾಯಿಸಿದೆ.
ಕೇರಳದ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸದ್ ಎಡಪಂಥೀಯರು ಮತ್ತು ಬಿಜೆಪಿ ರಾಜಕೀಯ ಒಪ್ಪಂದಕ್ಕೆ ಬಂದಿವೆ. ಆಗಿನ ಸಿಎಂ ಆಗಿದ್ದ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವ್ಯವಸ್ಥಿತ ಪ್ರಚಾರ ನಡೆಸಿತ್ತು.
ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ, ಪಕ್ಷದ ಮೇಲಿನ ಆರೋಪಗಳ ಬಗ್ಗೆ ತೀವ್ರವಾಗಿ ಟೀಕಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದು, ಅದನ್ನು ಇಂಡಿಯಾ ಕೂಟದ ಇತರೆ ನಾಯಕರಿಗೂ ಕಳುಹಿಸಿದ್ದಾರೆ ಎನ್ನಲಾಗಿದೆ.
ಕೇರಳ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಖರ್ಗೆ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಸಾಮಾನ್ಯ ಚುನಾವಣಾ ವಾಕ್ಚಾತುರ್ಯವನ್ನು ಮೀರಿ, ಬಿಜೆಪಿ ವಿರುದ್ಧ ಹೋರಾಟ ಮಾಡುವ ಇಂಡಿಯಾ ಕೂಟದ ಪಕ್ಷಗಳ ಮೇಲೆ ದಾಳಿ ಮಾಡುವುದು ಸರಿಯಲ್ಲ. ಅದು ಸಹಕಾರದ ಮನೋಭಾವಕ್ಕೆ ಹೊಂದಾಣಿಕೆಯಾಗಲ್ಲ ಎಂದಿದ್ದಾರೆ.
ಬಿಜೆಪಿ ವಿರುದ್ಧ ರಾಜಕೀಯವಾಗಿ ಹೋರಾಡಲು ಇಂಡಿಯಾ ಕೂಟವನ್ನು ವಿಶಾಲ ವೇದಿಕೆಯಾಗಿ ರಚಿಸಲಾಗಿದೆ. ಹಲವಾರು ರಾಜ್ಯಗಳಲ್ಲಿ ಚುನಾವಣಾ ಪ್ರತಿಸ್ಪರ್ಧಿಗಳಾಗಿರುವ ವೈವಿಧ್ಯಮಯ ಸಿದ್ಧಾಂತಗಳು ಮತ್ತು ಕಾರ್ಯಕ್ರಮಗಳ ಪಕ್ಷಗಳು ಈ ಉದ್ದೇಶಕ್ಕಾಗಿ ಒಗ್ಗೂಡಿವೆ. ಸಿಪಿಐ(ಎಂ) 2023ರಲ್ಲಿ ಮೈತ್ರಿಕೂಟ ಪ್ರಾರಂಭವಾದಾಗಿನಿಂದ ವಿರೋಧ ಪಕ್ಷಗಳ ಏಕತೆಯನ್ನು ಬಲಪಡಿಸಲು ಸ್ಥಿರವಾಗಿ ಕೆಲಸ ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಸಿಪಿಐ(ಎಂ) ಜೊತೆ ಏಕಕಾಲದಲ್ಲಿ ಪಾಲುದಾರಿಕೆ ಹೊಂದಿದ್ದು, ಕೇರಳದಲ್ಲಿ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದೆ. ಇದನ್ನೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ವಿಷಯವು ವಿರೋಧ ಪಕ್ಷದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ಜೂನ್ 8 ರಂದು ನಡೆಯಲಿರುವ ಇಂಡಿಯಾ ಬ್ಲಾಕ್ ಸಭೆಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ, ಮೈತ್ರಿಕೂಟದ ಉದ್ದೇಶವೇ ಪ್ರಶ್ನಾರ್ಹವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಇನ್ನೂ ಬಿಜೆಪಿ ನೇತೃತ್ವದ ಸರ್ಕಾರವನ್ನು ಎದುರಿಸಲು ಮತ್ತು ವಿರೋಧ ಪಕ್ಷದ ಏಕತೆಯನ್ನು ಬಲಪಡಿಸಲು ಜಂಟಿ ಕಾರ್ಯತಂತ್ರವನ್ನು ಚರ್ಚಿಸಲು ಇಂಡಿಯಾ ಬ್ಲಾಕ್ ಹಿರಿಯ ನಾಯಕರು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಸಭೆ ಸೇರಲಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಮತ್ತು ಖರ್ಗೆ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ (ಏಜೆನ್ಸೀಸ್).