ನವದೆಹಲಿ: ಎಸ್ಐಆರ್ ವಿವಾದ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಂಗಳವಾರ(ಅ. 06) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕಿಡಿಕಾರಿರುವ ಆಡಳಿತರೂಢ ಬಿಜೆಪಿ, ಇದು ರಾಹುಲ್ ಗಾಂಧಿಯವರನ್ನು ರಿಲಾಂಚ್ ಮಾಡುವ ಮತ್ತು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಸಂಸದ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ಉಲ್ಲೇಖಿಸುವ ಮೂಲಕ ಗೊಂದಲ ಹರಡಲು ಮತ್ತು ತಮ್ಮ ರಾಜಕೀಯವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಸೋಮವಾರದ ಪಿಐಎಲ್ ವಿಚಾರಣೆ ವೇಳೆ, ಫಾರ್ಮ್ 6 ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿಲ್ಲ. ಆದರೆ ರಾಹುಲ್ ಗಾಂಧಿಯವರು ಎಕ್ಸ್ನಲ್ಲಿ ಸಿಇಸಿ ಫಾರ್ಮ್ 6 ಅನ್ನು ಕಾನೂನುಬಾಹಿರವಾಗಿ ಮತ್ತು ಏಕಪಕ್ಷೀಯವಾಗಿ ಬದಲಾಯಿಸಿದ್ದಾರೆ. ಅದು ಈಗ ಸಾಬೀತಾಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅದು ಕೇವಲ ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಈ ಕುರಿತು ಇನ್ನೂ ವಿಚಾರಣೆಯೇ ನಡೆದಿಲ್ಲ. ವಿಚಾರಣೆ ವೇಳೆ ಈ ವಿಷಯವನ್ನು ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಆದರೂ, ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ, ಸುಳ್ಳು, ವಂಚನೆ ಮತ್ತು ಗೊಂದಲದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಿಇಸಿ ವಿರುದ್ಧದ ಪ್ರತಿಭಟನೆಯನ್ನು ಟೀಕಿಸಿದ ಅವರು, ದೇಶದ ಕೆಲವು ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷವು, ಹೇಗಾದರೂ ಮಾಡಿ ಸರ್ಕಾರವನ್ನು ಬದಲಾಯಿಸಿ ರಾಹುಲ್ ಗಾಂಧಿಯವರನ್ನು ಅಧಿಕಾರಕ್ಕೆ ತರುವ ಪ್ರಾಯೋಜಿತ ಪ್ರಯತ್ನವನ್ನು ನಡೆಸುತ್ತಿದೆ. ಇದಕ್ಕಾಗಿ ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯು ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭವಾಗಿದ್ದಲ್ಲ, ಇದು ವರ್ಷಗಳಿಂದಲೂ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಆರಂಭದಿಂದಲೂ, ಕಾಂಗ್ರೆಸ್ ಪಕ್ಷವು ಯಾವುದೇ ರೀತಿಯಲ್ಲಾದರೂ ರಾಹುಲ್ ಗಾಂಧಿಯವರನ್ನು ಮುಂಚೂಣಿಗೆ ತರಲು ಪದೇ ಪದೇ ಪ್ರಯತ್ನಿಸಿದೆ. ಹಲವಾರು ಪ್ರಯತ್ನಗಳ ನಂತರವೂ ಮುಂಚೂಣಿಗೆ ತರಲು ಸಾಧ್ಯವಾಗದಿದ್ದಾಗ, ಕಾಂಗ್ರೆಸ್ ಮತ್ತು ಅದರ ಕೆಲವು ಮಿತ್ರಪಕ್ಷಗಳು ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದವು. ಅರಾಜಕತೆಯ ಮೂಲಕವಾದರೂ ಸರಿ, ದೇಶದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿಯಾದರೂ ಸರಿ, ರಾಹುಲ್ ಅವರನ್ನು ರಾಜಕೀಯವಾಗಿ ಮುಂಚೂಣಿಗೆ ತರಲೇಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ ಎಂದಿದ್ದಾರೆ.
ಈ ಪ್ರಯತ್ನಗಳ ಭಾಗವಾಗಿ, ಅವರು ಆಗಾಗ್ಗೆ ಭಾರತೀಯ ಸೇನೆ, ಸುಪ್ರೀಂ ಕೋರ್ಟ್, ಹಿಂದೂಗಳು ಮತ್ತು ಇವಿಎಂಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕಳೆದ ಕೆಲವು ವಾರಗಳಿಂದ ಅವರು ಚುನಾವಣಾ ಆಯೋಗದ ವಿರುದ್ಧವೂ ದಾಳಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).