ನವದೆಹಲಿ: ಜನರ ಮತದಾನದ ಹಕ್ಕುಗಳನ್ನು ರಕ್ಷಿಸುವ ನಿರಂತರ ಹೋರಾಟದ ಭಾಗವಾಗಿ, ಇಂಡಿಯಾ ಒಕ್ಕೂಟವು ಸೋಮವಾರ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನು (INDIA Bloc Protest) ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಶನಿವಾರ (ಅ.10) ತಿಳಿಸಿದ್ದಾರೆ.
ಮತಕಳ್ಳತನ ಕುರಿತ ತಮ್ಮ ಆರೋಪಗಳನ್ನು ಮುಂದಿಟ್ಟುಕೊಂಡು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಲು ಹಾಗೂ ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ವಿಧಾನಸಭೆ ಚುನಾವಣೆಗಳನ್ನು ರದ್ದುಪಡಿಸುವಂತೆ ಕೋರಿ ಇಂಡಿಯಾ ಒಕ್ಕೂಟದ ನಾಯಕರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.
ರಾಷ್ಟ್ರಪತಿ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ ಕಳ್ಳತನ ನಡೆಯುತ್ತಿದೆ ಎಂಬುದನ್ನು ರಾಷ್ಟ್ರಪತಿಗಳು ನಿರಾಕರಿಸುತ್ತಾರೆ, ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ಇದೆ ಎಂದು ಅವರು ಹೇಳುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ನಾವು ಹೇಳಿದ್ದನ್ನು ಅವರು ಒಪ್ಪಿಕೊಂಡಿದ್ದು ನನಗೆ ಆಘಾತ ಮತ್ತು ತೀವ್ರ ಅಚ್ಚರಿಯನ್ನುಂಟುಮಾಡಿತು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಮತ್ತು ಸಿಇಸಿ ಹಾಗೂ ಇಸಿಗಳಿಗೆ ಜೀವಾವಧಿ ವಿನಾಯಿತಿ ನೀಡುವ 2023ರ ಕಾನೂನಿನ ರದ್ದು.
ಎಸ್‌ಐಆರ್ ತಕ್ಷಣದ ಅಮಾನತು ಮತ್ತು ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಎಲ್ಲಾ 13.3 ಕೋಟಿ ಮತದಾರರ ಹೆಸರನ್ನು ಮತ್ತೆ ಸೇರಿಸುವುದು.
ಮುಂಬರುವ ಎಲ್ಲಾ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಬಳಕೆ.
ಮತ ಕಳ್ಳತನಕ್ಕೆ ನಿರ್ಣಾಯಕ ಸಾಕ್ಷ್ಯವನ್ನು ಪ್ರಸ್ತುತಪಡಿಸಲಾದ ಕಳೆದ ಎರಡು ವರ್ಷಗಳ ಎಲ್ಲಾ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸುವುದು.
ರಾಷ್ಟ್ರಪತಿಗಳು ತಮ್ಮ ಬಳಿ ಮತಕಳ್ಳತನಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕೋರಿದ್ದಾರೆ, ಅವರು ಸ್ವೀಕರಿಸಲು ಸಿದ್ಧರಾದಾಗ ತಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಅವರಿಗೆ ಹಸ್ತಾಂತರಿಸುವುದಾಗಿ ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಎಸ್‌ಪಿ ನಾಯಕ ರಾಜೀವ್ ರೈ, ಆರ್‌ಜೆಡಿ ನಾಯಕ ಮನೋಜ್ ಝಾ, ವಿಸಿಕೆ ಮುಖ್ಯಸ್ಥ ತೊಲ್ ತಿರುಮಾವಳನ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮತ್ತು ಸಿಪಿಐ ನಾಯಕ ಡಿ. ರಾಜಾ ಸೇರಿದಂತೆ ಪ್ರಮುಖ ನಾಯಕರು ಈ ನಿಯೋಗದಲ್ಲಿದ್ದರು.
ಮತ ಕಳವಿನಿಂದ ಪ್ರಜಾಪ್ರಭುತ್ವದ ಮೂಲಭೂತ ಬುನಾದಿಯೇ ನಾಶವಾಗಿದೆ ಎಂದು ಆರೋಪಿಸಿರುವ ನಾಯಕರು, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ದೆಹಲಿ ಮತ್ತು ಪಶ್ಚಿಮ ಬಂಗಾಳ ಚುನಾವಣಾ ಉದಾಹರಣೆಗಳನ್ನು ನೀಡಿ, ಮತ ಕಳ್ಳತನ ನಡೆದಿದೆ ಎಂಬುದಕ್ಕೆ ತಮ್ಮ ಬಳಿ ನೈಜ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ(ಏಜೆನ್ಸೀಸ್).