Mohan Bhagwat | ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
Mohan Bhagwat: ಡೆಹ್ರಾಡೂನ್‌ನಲ್ಲಿ ನಡೆದ ಜನಾಂಗೀಯ ದಾಳಿಯ ಬಳಿಕ ವಲಸಿಗರ ಮೇಲಿನ ದೌರ್ಜನ್ಯಗಳು ಮತ್ತು ಇತ್ತೀಚೆಗೆ ತ್ರಿಪುರಾ ವಿದ್ಯಾರ್ಥಿಯ ಸಾವಿನ ಬಗ್ಗೆ ಹೆಚ್ಚುತ್ತಿರುವ ಕಳವಳದ ಮಧ್ಯೆ, ಏಕತೆ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಕರೆ ನೀಡಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಭಾರತ ಎಲ್ಲರಿಗೂ ಸೇರಿದ್ದು ಎಂದಿದ್ದಾರೆ.
ಬುಧವಾರ ಛತ್ತೀಸ್‌ಗಢದ ಸೋನ್‌ಪೈರಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಭಾಗವತ್, ಜಾತಿ, ಸಂಪತ್ತು, ಭಾಷೆ ಅಥವಾ ಪ್ರದೇಶದ ಆಧಾರದಲ್ಲಿ ಜನರನ್ನು ನಿರ್ಣಯಿಸುವ ಬದಲು ಎಲ್ಲರನ್ನೂ ನಮ್ಮವರಂತೆ ನೋಡಿಕೊಳ್ಳಬೇಕು, ಇಡೀ ಭಾರತ ನನ್ನದು ಎಂದು ಹೇಳಿದರು.
ಸಾಮರಸ್ಯದತ್ತ ಸಾಗುವ ಮೊದಲ ಹೆಜ್ಜೆ ಎಂದರೆ ಒಬ್ಬರ ಮನಸ್ಸಿನಿಂದ ಪ್ರತ್ಯೇಕತೆ ಮತ್ತು ತಾರತಮ್ಯದ ಭಾವನೆಗಳನ್ನು ತೆಗೆದುಹಾಕುವುದು, ಎಲ್ಲರನ್ನೂ ನಮ್ಮವರಂತೆ ಪರಿಗಣಿಸಬೇಕು, ಈ ಇಡೀ ದೇಶ ಎಲ್ಲರಿಗೂ ಸೇರಿದ್ದು ಎಂಬ ಮನೋಭಾವವೇ ನಿಜವಾದ ಸಾಮಾಜಿಕ ಸಾಮರಸ್ಯ ಸಂಕೇತ ಎಂದರು.
ಸಾರ್ವಜನಿಕ ಸೌಲಭ್ಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಮುಕ್ತ ಪ್ರವೇಶವನ್ನು ಪ್ರತಿಪಾದಿಸಿದ ಭಾಗವತ್, ಭೇದವಿಲ್ಲದೆ ಎಲ್ಲರಿಗೂ ಲಭ್ಯವಿರಬೇಕು ಎಂದರು. ಈ ರೀತಿಯ ಕ್ರಮಗಳನ್ನು ಸಂಘರ್ಷದ ಮೂಲಗಳಲ್ಲ, ಏಕತೆಯ ಕ್ರಿಯೆಗಳಾಗಿವೆ. ಇದು ಸಾರ್ವಜನಿಕ ಜೀವನದಲ್ಲಿನ ಸಮಾನ ಅವಕಾಶದ ಮಹತ್ವವನ್ನು ಸೂಚಿಸುತ್ತದೆ ಎಂದು ಹೇಳಿದರು.
ಬಾಂಗ್ಲಾ ಬಗ್ಗೆ ಉಲ್ಲೇಖ...
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಉಲ್ಲೇಖಿಸಿದ ಭಾಗವತ್, ನಾವು ಹಿಂದೂಗಳು ಮತ್ತು ಎಲ್ಲೇ ಸಮಸ್ಯೆಗಳನ್ನು ನೋಡಿದರೂ ಅದು ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿರಲಿ ಅಥವಾ ರಾಷ್ಟ್ರೀಯತೆಗೆ ಸಂಬಂಧಿಸಿರಲಿ. ಅದರ ಕುರಿತು ಚರ್ಚೆಗಳು ಎಂದಿಗೂ ಯಾವುದೇ ಒಳ್ಳೆಯದನ್ನು ತರುವುದಿಲ್ಲ. ಅದರ ಬದಲು ಪರಿಹಾರಗಳ ಬಗ್ಗೆ ಯೋಚಿಸಬೇಕು. ನಾವು ಸ್ಥಿರವಾಗಿದ್ದರೆ ಯಾವುದೇ ಬಿಕ್ಕಟ್ಟು ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಹಿಂದೂ ಸಮಾಜಕ್ಕೆ ಅಂತಹ ಬುದ್ಧಿಶಕ್ತಿ ಇದ್ದು, ಯಾರು ಕೂಡ ತಮ್ಮೊಳಗೆ ತಾರತಮ್ಯ ಮಾಡಬಾರದು ಎಂದರು.
ಧಾರ್ಮಿಕ ಮತಾಂತರ..
ಧಾರ್ಮಿಕ ಮತಾಂತರದ ವಿಷಯ ಪ್ರಸ್ತಾಪಿಸಿದ ಭಾಗವತ್, ಸಮಾಜದೊಳಗಿನ ನಂಬಿಕೆಯ ನಷ್ಟವೇ ಈ ಪ್ರವೃತ್ತಿಗೆ ಕಾರಣ ಎಂದು ಅಭಿಪ್ರಾಯಪಟ್ಟರು. ಇದನ್ನು ಹಿಮ್ಮೆಟ್ಟಿಸಬೇಕಾದರೆ ತಳಮಟ್ಟದ ಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸುವುದು ಇಂದಿನ ಅಗತ್ಯವಾಗಿದೆ ಎಂದರು(ಏಜೆನ್ಸೀಸ್).