ಪತಿಯೊಂದಿಗೆ ರಷ್ಯನ್ ಮಹಿಳೆ ಓಲ್ಗಾ
- ಪ್ರೀತಿ ಹೆಸರಲ್ಲಿ ರಷ್ಯನ್ ಮಹಿಳೆಗೆ ದ್ರೋಹ ಬಗೆದ ಪತಿ
- ಪತ್ನಿಯಿಂದ ತಪ್ಪಿಸಿಕೊಳ್ಳು ಸಾವಿನ ನಾಟಕವಾಡಿದ ಪತಿ
- ಪಿಎಚ್ಡಿಗಾಗಿ ಬಂದವಳಿಗೆ ಪಂಜರದಂತಾದ ಭಾರತ
ನವದೆಹಲಿ: ಪ್ರೀತಿ, ಪ್ರೇಮದ ಹೆಸರಿನಲ್ಲಿ ವಂಚನೆ ನಡೆಯುವುದು ಹೊಸತೇನಲ್ಲ. ಆದರೆ ಇಲ್ಲೊಬ್ಬ ಭೂಪ ತನ್ನ ಪತ್ನಿಯಿಂದ ದೂರ ಸರಿಯಲು ಸಾವಿನ ನಾಟಕವನ್ನೇ ಆಡಿದ್ದಾನೆ.
ಇಂದು ನಾವು ಹೇಳ ಹೊರಟಿರುವುದು ಯಾವುದೋ ಸಿನಿಮಾ ಕಥೆಯಲ್ಲ, ಬದಲಾಗಿ ಭಾರತಕ್ಕೆ ಉನ್ನಂತ ವ್ಯಾಸಂಗ ಮಾಡಲಿಕ್ಕೆ ಬಂದು ಪ್ರೇಮ ಪಾಶದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ರಷ್ಯನ್ ಮಹಿಳೆ (Russian Women) ಓಲ್ಗಾ ಅವರ ನೈಜ ಘಟನೆಯಾಗಿದೆ.
ಸುಮಾರು 10 ವರ್ಷಗಳ ಹಿಂದೆ ಪಿಎಚ್‌ಡಿ ಮಾಡಲು ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಬಂದ ರಷ್ಯನ್ ಸಂಶೋಧಕಿ ಓಲ್ಗಾ, ಭಾರತೀಯನೊಬ್ಬನ ಮೇಲೆ ಪ್ರೀತಿ ಹುಟ್ಟಿದೆ. 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಓಲ್ಗಾ, ಈತನೇ ನನ್ನ ಪ್ರಪಂಚ, ಈ ದೇಶವೇ ನನ್ನ ಮನೆ ಎಂದು ಸಂಭ್ರಮಿಸಿದ್ದರು. ಆದರೆ ಆ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ.
ದಿಢೀರ್ ನಾಪತ್ತೆಯಾದ ಪತಿ, ತಿಂಗಳುಗಟ್ಟಲೆ ಕಣ್ಣೀರು!
2023ರ ನವೆಂಬರ್‌ನಲ್ಲಿ ಓಲ್ಗಾ ತನ್ನ ಪತಿಯ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಜನವರಿ 2024ರಲ್ಲಿ ಯಾವುದೇ ಸುಳಿವು ನೀಡದೆ ಆತ ಕಣ್ಮರೆಯಾದ. ತನ್ನ ಪತಿ ಸತ್ತಿರಬಹುದು ಎಂದು ಹೆದರಿದ ಓಲ್ಗಾ, ಪೊಲೀಸರಿಗೆ ದೂರು ನೀಡಿ ಆರು ತಿಂಗಳ ಕಾಲ ಕಣ್ಣೀರಿನಲ್ಲಿ ಕೈತೊಳೆದಿದ್ದಾಳೆ. ಕೈಯಲ್ಲಿ ಹಣವಿಲ್ಲದೆ, ಭಾಷೆ ತಿಳಿಯದೆ, ತನ್ನ ವೀಸಾ ಸಮಸ್ಯೆಗಳಿಂದಾಗಿ ದೇಶವನ್ನೂ ಬಿಡಲಾಗದೆ ಆಕೆ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ.
ಇನ್‌ಸ್ಟಾಗ್ರಾಮ್‌ನಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!
ಜುಲೈ ತಿಂಗಳಲ್ಲಿ ಓಲ್ಗಾ ಇನ್‌ಸ್ಟಾಗ್ರಾಮ್ ಸ್ಕ್ರಾಲ್ ಮಾಡುತ್ತಿದ್ದಾಗ ಕಂಡ ದೃಶ್ಯ ಅವರ ಪಾದದ ಕೆಳಗಿನ ನೆಲವನ್ನೇ ಕುಸಿಯುವಂತೆ ಮಾಡಿತು. ಆಕೆಯ ಪತಿ ಹಿಮಾಚಲ ಪ್ರದೇಶದ ಬೆಟ್ಟಗಳಲ್ಲಿ ಸಾಧು ವೇಷ ಧರಿಸಿ ಪ್ರವಾಸಿಗರೊಂದಿಗೆ ನಗುತ್ತಾ ತಿರುಗಾಡುತ್ತಿದ್ದ! ಪತಿ ಸತ್ತಿದ್ದಾನೆಂದು ತಿಳಿದಿದ್ದ ಓಲ್ಗಾಗೆ ಆತ ಜೀವಂತವಾಗಿರುವುದು ಕಂಡು ಆಘಾತವಾಯಿತು.
ಮತ್ತೆ ಬಂದ, ಮತ್ತೆ ವಂಚಿಸಿದ!
ಅವನು ಮರಳಿ ಬಂದು ಕ್ಷಮೆ ಕೇಳಿದಾಗ, ಪ್ರೀತಿಯ ಅಮಲಿನಲ್ಲಿ ಓಲ್ಗಾ ಆತನನ್ನು ಮತ್ತೆ ನಂಬಿದಳು. ಹಿಮಾಚಲ ಪ್ರದೇಶದಲ್ಲಿ ಕೆಲಸ ಪಡೆದು ಪುನಃ ಸಂಸಾರ ಹೂಡಲು ಮುಂದಾದರು. ಆದರೆ ಇಲ್ಲೂ ಆಕೆಗೊಂದು ವಂಚನೆ ಕಾದಿತ್ತು. ಪತಿ ಕೇವಲ 15 ಕಿ.ಮೀ ದೂರದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದಾಗ, ಆತ ಓಲ್ಗಾ ಅವರ ಬಾಸ್‌ಗೆ ಕರೆ ಮಾಡಿ ಈಕೆ ಮಾನಸಿಕವಾಗಿ ಅಸ್ಥಿರವಾಗಿದ್ದಾಳೆ ಎಂದು ಸುಳ್ಳು ಹೇಳಿ ಆಕೆಯ ಕೆಲಸವನ್ನೂ ಕಸಿದುಕೊಂಡಿದ್ದಾನೆ.
ವಿಮಾನದಿಂದ ಕೆಳಗಿಳಿಸಿದ ದುರಂತ!
ಎಲ್ಲವನ್ನೂ ಕಳೆದುಕೊಂಡ ಓಲ್ಗಾ ತನ್ನ ದೇಶಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಹೋದಾಗ ಮತ್ತೊಂದು ವಿಘ್ನ ಎದುರಾಯಿತು. ಆಕೆಯ ಪತಿಯೇ ಆಕೆಯ ವಿರುದ್ಧ ಸುಳ್ಳು ನಾಪತ್ತೆ ದೂರು ನೀಡಿದ್ದ ಕಾರಣ, ಅಧಿಕಾರಿಗಳು ಆಕೆಯನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ. ಈಗ ಓಲ್ಗಾಗೆ ಅತ್ತ ರಷ್ಯಾಗೂ ಹೋಗಲಾಗುತ್ತಿಲ್ಲ, ಇತ್ತ ಭಾರತದಲ್ಲಿಯೂ ಇರಲಾರದ ಪರಿಸ್ಥಿತಿ ಎದುರಾಗಿದೆ.
ಅವನು ನನ್ನ ಅಸ್ತಿತ್ವನ್ನೇ ಅಳಿಸಿಹಾಕಲು ಪ್ರಯತ್ನಿಸಿದ, ಆದರೆ ನಾನು ಈಗ ಹೆಚ್ಚು ಶಕ್ತಿಯುತವಾಗಿದ್ದೇನೆ. ನನ್ನ ದೇಶಕ್ಕೆ ಹೋಗುವವರೆಗೂ ನಾನು ಹೋರಾಟ ನಿಲ್ಲಿಸುವುದಿಲ್ಲ ಎಂದು ಓಲ್ಗಾ ಬರೆದುಕೊಂಡಿದ್ದಾರೆ. ಈದೀಗ ಓಲ್ಗಾ ಅವರ ಕಥೆ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರನ್ನು ತಲುಪುತ್ತಿದ್ದು, ಪ್ರೀತಿಯ ಹೆಸರಲ್ಲಿ ಇಷ್ಟು ದೊಡ್ಡ ವಂಚನೆಯನ್ನು ಯಾರು ಸಹಿಕೊಂಡಾರು? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ,(ಏಜನ್ಸೀಸ್).