K Selvaperunthagai | ತಮಿಳುನಾಡು ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ( ಸಂಗ್ರಹ ಚಿತ್ರ) 
ದೇಶ

ಟಿವಿಕೆ ಜೊತೆಗಿನ ಮೈತ್ರಿ...ಮಹತ್ವದ ವಿಷಯ ಬಹಿರಂಗಪಡಿಸಿದ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ | K Selvaperunthagai

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ಮೈತ್ರಿಕೂಟದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ.
  • ಇಂಡಿಯಾ ಒಕ್ಕೂಟ ಯಾವಾಗಲೂ ಒಟ್ಟಿಗೆ ಇರುತ್ತದೆ.
  • ಟಿವಿಕೆಯೊಂದಿಗಿನ ಮೈತ್ರಿಯನ್ನು ತಳ್ಳಿ ಹಾಕಿದ ತಮಿಳುನಾಡು ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ.
ಚೆನ್ನೈ: ತಮಿಳುನಾಡಿನ ಮೈತ್ರಿಕೂಟದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ, ನಾವೆಲ್ಲಾ ಒಗ್ಗಟ್ಟಿನಿಂದ ಇದ್ದು, ಈ ಬಂಧ ಹೀಗೆ ಮುಂದುವರೆಯುತ್ತದೆ ಎಂದು ತಮಿಳುನಾಡು ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಆಡಳಿತರೂಢ ಡಿಎಂಕೆಯೊಂದಿಗಿನ ಸಖ್ಯ ತೊರೆದು, ನಟ ವಿಜಯ್​​ರ ಟಿವಿಕೆ ಜೊತೆ ಕೈ ಜೋಡಿಸಲಿದೆ ಎಂಬ ಗುಸು ಗುಸು ಮಾತುಗಳು ರಾಜ್ಯದ ಅನೇಕ ಕಡೆಗಳಲ್ಲಿ ಕೇಳಿ ಬರುತ್ತಿದ್ದವು, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸಮ್ಮುಖದಲ್ಲಿ ಇದ್ಕಕೆಲ್ಲಾ ತೆರೆ ಎಳೆದಿರುವ ಸೆಲ್ವಪೆರುಂಥಗೈ, ಟಿವಿಕೆಯೊಂದಿಗಿನ ಮೈತ್ರಿಯನ್ನು ತಳ್ಳಿ ಹಾಕಿದರು.
ನಮ್ಮ ಈ ಮೈತ್ರಿಕೂಟ ಏನಾಗಲಿದೆ ಮತ್ತು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಕುರಿತು ಕಳೆದ ಎರಡು ತಿಂಗಳಿನಿಂದ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ, ಹಬ್ಬಿರುವ ವದಂತಿಗಳಿಗೆ ಅಂತ್ಯ ಹಾಡಲು ಮುಂದಿನ ದಿನಗಳಲ್ಲಿ ದೊಡ್ಡ ಘೋಷಣೆಗಳನ್ನು ಮಾಡಲಾಗುವುದು ಎಂದು ಹೇಳಿದರು.
ಇಂಡಿಯಾ ಮೈತ್ರಿಕೂಟದಲ್ಲಿ ಒಗ್ಗಟ್ಟಿದೆ ಎಂದು ಪುನರುಚ್ಚರಿಸಿದ ತಮಿಳುನಾಡು ಕಾಂಗ್ರೆಸ್​ ಘಟಕದ ಅಧ್ಯಕ್ಷರು, ರಾಜ್ಯದಲ್ಲಿನ ತಮ್ಮ ಮಿತ್ರಪಕ್ಷಗಳಲ್ಲಿ ಬಿರುಕು ಉಂಟಾಗಬಹುದೆಂಬ ಮಾತುಗಳನ್ನು ತಳ್ಳಿಹಾಕಿ, ಇಂಡಿಯಾ ಒಕ್ಕೂಟ ಯಾವಾಗಲೂ ಒಟ್ಟಿಗೆ ಇರುತ್ತದೆ ಎಂದರು.
ಕೆಲ ದಿನಗಳ ಹಿಂದೆ, ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ತಮಿಳುನಾಡಿನಲ್ಲಿ INDI ಮೈತ್ರಿಕೂಟಕ್ಕೆ ಸವಾಲು ಹಾಕುವ ದೊಡ್ಡ ಶಕ್ತಿಯಾಗಿ ನಟ ವಿಜಯ್ ಹೊರಹೊಮ್ಮುತ್ತಿದ್ದಾರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿರೋಧಿಸುವ ಯಾರನ್ನಾದರು ಕಾಂಗ್ರೆಸ್ ಪಕ್ಷ ಗೌರವದಿಂದ ಕಾಣುತ್ತದೆ ಎಂದು ಹೇಳುತ್ತಾ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಗಡಿನಿರ್ಣಯದ ವಿರುದ್ಧ ಟಿವಿಕೆ ವಿಜಯ್ ತೆಗೆದುಕೊಂಡಿದ್ದ ನಿಲುವನ್ನು ಸ್ವಾಗತಿಸಿದರು ಮತ್ತು ಟಿವಿಕೆ ಜೊತೆ ಮೈತ್ರಿಯ ಬಗ್ಗೆ ಚರ್ಚಿಸಲು ಇದು ತುಂಬಾ ಮುಂಚೆಯೇ ಆದರೂ, ಆ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದರು.
ಕಾಂಗ್ರೆಸ್​​ನ ಕೆಲ ಹಿರಿಯ ನಾಯಕರು ಟಿವಿಕೆ ಬಗ್ಗೆ ಒಲವು ತೋರುತ್ತಿದ್ದಾರೆ ಮತ್ತು ಚುನಾವಣೆಗೂ ಮುನ್ನ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಜಯ್​​ರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಪಕ್ಷದ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳ ಬಳಿಕ ಸೆಲ್ವಪೆರುಂಥಗೈ ಅವರ ಈ ಹೇಳಿಕೆಗಳು ಬಂದಿವೆ(ಏಜೆನ್ಸೀಸ್​).