ಅಮರಾವತಿ: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅಸಭ್ಯ ಪದ ಬಳಸಿದ ಹಿನ್ನೆಲೆ ಇಂದು(ಜ. 31) ವೈಎಸ್ಆರ್ ಕಾಂಗ್ರೆಸ್ ಮಾಜಿ ಮಂತ್ರಿ ಅಂಬಟಿ ರಾಂಬಾಬು ಮನೆ ಮೇಲೆ ಟಿಡಿಪಿ ಕಾರ್ಯಕರ್ತರಿಂದ ದಾಳಿ ನಡೆದಿದ್ದು, ಮನೆಯ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಗುಂಟೂರಿನ ನವ ಭಾರತನಗರದಲ್ಲಿರುವ ಮಾಜಿ ಸಚಿವ ಅಂಬಟಿ ರಾಂಬಾಬು ಅವರ ಮನೆಯ ಮೇಲೆ ಟಿಡಿಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಗುಂಟೂರು ಪಶ್ಚಿಮ ಶಾಸಕಿ ಗಲ್ಲಾ ಮಾಧವಂ ನೇತೃತ್ವದ ಕಾರ್ಯಕರ್ತರು ದಾಳಿ ನಡೆಸಿದ್ದು, 24 ಗಂಟೆಯೊಳಗೆ ರಾಂಬಾಬು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ತಿರುಮಲ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ಆರೋಪದ ತನಿಖೆ ನಡೆಸಿದ್ದ ಸಿಬಿಐ, ತನ್ನ ಚಾರ್ಜ್ಶೀಟ್ನಲ್ಲಿ ಲಡ್ಡುವಿನಲ್ಲಿ ಅಂತಹದ್ದು ಯಾವುದೇ ಬೆರಸಿಲ್ಲ, ಆದರೆ ತುಪ್ಪದಲ್ಲಿ ಬೇರೆ ಅಂಶಗಳನ್ನು ಬೆರೆಸಲಾಗಿದೆ ಎಂದು ಆರೋಪಿಸಿದೆ. ಈ ಹಿನ್ನೆಲೆ ಇಂದು ವೈಎಸ್‌ಆರ್‌ಸಿಪಿ ರಾಜ್ಯಾದ್ಯಂತ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯಕ್ರಮವನ್ನು ಆಯೋಜಿಸಿ, ತಮ್ಮ ಪಕ್ಷದ ಸರ್ಕಾರದ ವಿರುದ್ಧ ಮಾಡಿದ್ದ ಆರೋಪಗಳನ್ನ ತಿರಸ್ಕರಿಸಿ ಪ್ರತಿಭಟನೆ ನಡೆಸಲಾಗಿತ್ತು.
ಅದರ ಭಾಗವಾಗಿ ಗುಂಟೂರಿನಲ್ಲಿ ತಿರುಮಲ ಲಡ್ಡುವಿನ ಬಗ್ಗೆ ಸತತವಾಗಿ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಬಟಿ ರಾಂಬಾಬು ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಚಂದ್ರಬಾಬು ಅವರ ಗ್ಯಾಂಗ್ ರಾಜ್ಯದಲ್ಲಿ ದೌರ್ಜನ್ಯ ಎಸಗುತ್ತಿದೆ ಆರೋಪಿಸುವ ಬರದಲ್ಲಿ ಅಸಭ್ಯ ಪದ ಬಳಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆ ರಾಂಬಾಬು ಗುಂಟೂರಿನ ಗೋರಂಟ್ಲಾಕ್ಕೆ ಹೋಗುತ್ತಿದ್ದಾಗ, ಟಿಡಿಪಿ ಕಾರ್ಯಕರ್ತರು ಅವರಿಗೆ ಕಾರಿಗೆ ಅಡ್ಡ ಹಾಕಿದ್ದು, ಈ ವೇಳೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಮತ್ತು ಟಿಡಿಪಿ ಕಾರ್ಯಕರ್ತರ ಮಧ್ಯ ಘರ್ಷಣೆ ಜರುಗಿದೆ. ಈ ವೇಳೆ ಪೊಲೀಸರ ಭದ್ರತೆಯಲ್ಲಿ ರಾಂಬಾಬು ಸ್ಥಳದಿಂದ ತೆರಳಿದ್ದಾರೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ಟಿಡಿಪಿ ನಾಯಕರು ಗುಂಟೂರು ಎಸ್ಪಿಗೆ ದೂರು ನೀಡಿದ್ದಾರೆ (ಏಜೆನ್ಸೀಸ್).