ಪಾಕಿಸ್ತಾನ ಡ್ರೋನ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಗಣರಾಜ್ಯೋತ್ಸವ ಪರೇಡ್
- ಭಾರತದ ಗಡಿಯಲ್ಲಿ ನಿರಂತರ ಪಾಕಿಸ್ತಾನದ ಡ್ರೋನ್ ಹಾರಾಟ
- ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
- ಭಾರತ-ಪಾಕಿಸ್ತಾನ ಗಡಿಯಲ್ಲಿ ಹೆಚ್ಚಾದ ಭದ್ರತೆ
ನವದೆಹಲಿ: ಎಂಟು ತಿಂಗಳ ಹಿಂದೆ ಆಪರೇಷನ್ ಸಿಂದೂರ್ ದಾಳಿಯಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಪಾಕಿಸ್ತಾನ, ಭಾರತದ ಗಡಿ ಪ್ರದೇಶದಲ್ಲಿ ಪದೇ ಪದೇ ತನ್ನ ಡ್ರೋನ್ (Drone) ಗಳನ್ನು ಹಾರಿಬಿಡುತ್ತಿದೆ.
ಜನವರಿ 9 ರಿಂದ, ಜಮ್ಮು ಮತ್ತು ಕಾಶ್ಮೀರದ ಗಡಿ ವಲಯಗಳಲ್ಲಿ ಹಲವಾರು ಪಾಕಿಸ್ತಾನಿ ಡ್ರೋನ್‌ಗಳು ಪತ್ತೆಯಾಗಿದ್ದು, ಈ ಕ್ರಮವನ್ನು ನಿಲ್ಲಿಸುವಂತೆ ಭಾರತ ಪಾಕಿಸ್ತಾನಕ್ಕೆ ತಿಳಿ ಹೇಳಿದೆ. ಆದರೂ, ಗುರುವಾರ ರಾತ್ರಿ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿದ್ದರಿಂದ ಪಾಕಿಸ್ತಾನಕ್ಕೆ ಮತ್ತೆ ಬೀಸಿ ಮುಟ್ಟಿಸುವ ಅಗತ್ಯತೆ ಕಂಡುಬರುತ್ತಿದೆ.
ಆದರೆ ಇಷ್ಟು ದಿನ ಸುಮ್ಮನಿದ್ದ ಪಾಕಿಸ್ತಾನ ಇದ್ದಕ್ಕಿದ್ದಂತೆ ತನ್ನ ಡ್ರೋನ್‌ಗಳನ್ನು ಗಡಿಯಾಚೆಗೆ ಕಳುಹಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ?
ಆದರೆ ಪಾಕಿಸ್ತಾನದಿಂದ ಬರುತ್ತಿರುವ ಡ್ರೋನ್‌ಗಳು ಕಾಮಿಕೇಜ್-ವರ್ಗದ ಡ್ರೋನ್‌ಗಳಲ್ಲ. ಕಾಮಿಕೇಜ್-ವರ್ಗದ ಡ್ರೋನ್ ಎಂದರೆ ಇವು ದಾಳಿ ನಡೆಸುವ ಮೊದಲು ಪ್ರದೇಶದ ಸೂಕ್ಷ್ಮತೆ, ಭದ್ರತೆ ಮತ್ತು ತನಗೆ ಎದುರಾಗುವ ತೊಂದರೆಗಳನ್ನು ಗ್ರಹಿಸಿ ನಂತರ ದಾಳಿ ಮಾಡುವ ಆತ್ಮಹತ್ಯಾ ಡ್ರೋನ್‌ಗಳನ್ನು ಕಾಮಿಕೇಜ್-ವರ್ಗದ ಡ್ರೋನ್ ಎಂದು ಕರೆಯುತ್ತಾರೆ.
ಇದನ್ನು ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ ಬಳಸಲಾಗಿತ್ತು. ಆದರೆ ಈಗ ಪಾಕಿಸ್ತಾನದಿಂದ ಬರುತ್ತಿರುವ ಡ್ರೋನ್‌ಗಳು ಈ ಮಾದರಿಯದಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.
ಸ್ಥಳಾನ್ವೇಷಣೆಗೆಗಾಗಿ ಬಂದವೇ ಪಾಕ್ ಡ್ರೋನ್ಸ್?
ಇತ್ತೀಚೆಗೆ ಪತ್ತೆಯಾದ ಪಾಕಿಸ್ತಾನದ ಡ್ರೋನ್‌ಗಳು ಗಾತ್ರದಲ್ಲಿ ಸಣ್ಣದಾಗಿದ್ದು ಸ್ಥಳಾನ್ವೇಷಣೆಗೆಗಾಗಿ ಬಳಸುವ ಡ್ರೋನ್‌ಗಳಾಗಿವೆ ಎಂದು ಸೇನಾ ದಿನದಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಪಾಕಿಸ್ತಾನದ ಡ್ರೋನ್‌ಗಳಿಂದ ಇವರೆಗೆ ಯಾವುದೇ ಅಹಿತಕಾರಿ ಘಟನೆಗಳು ನಡೆದಿಲ್ಲ, ಒಂದಾಣುವೇಳೆ ಏನಾದರೂ ಹೆಚ್ಚು ಕಡಿಮೆಯಾದರೆ ಭಾರತೀಯ ಸೇನೆ ದಿಟ್ಟ ಪ್ರತಿಕ್ರಿಯೆ ನೀಡಲಿದೆ ಎಂದು ಅವರು ತಿಳಿಸಿದರು. ಹೀಗೆ ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಓಡಾಟ ನಡೆಸುತ್ತಿವೆ ಎಂದು ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಈ ಡ್ರೋನ್‌ಗಳ ಓಡಾಟವು ಸೇನಾ ದಿನ (ಜ.15) ಅಥವಾ ಗಣರಾಜ್ಯೋತ್ಸವ (ಜ.26) ನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆ ಎಂದು ಸೇನೆ ಅಂದಾಜಿಸಿದೆ, ಆದರೆ ಈ ಡ್ರೋನ್‌ಗಳು ತನ್ನ ಲೈಟ್ನ್ನು ಆನ್ ಮಾಡಿಕೊಂಡೇ ಹಾರಾಟ ನಡೆಸಿವೆ ಮತ್ತು ಇವು ಗಾತ್ರದಲ್ಲಿ ತೀರಾ ಚಿಕ್ಕದಿದ್ದು, ಹೆಚ್ಚು ಎತ್ತರದಲ್ಲಿ ಹಾರಾಟ ನಡೆಸಲಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ಜನವರಿ 9 ರಿಂದ, ಪಾಕಿಸ್ತಾನವು ಅಂತರರಾಷ್ಟ್ರೀಯ ಗಡಿ (IB) ಮತ್ತು ನಿಯಂತ್ರಣ ರೇಖೆ (LoC) ಉದ್ದಕ್ಕೂ ವಿವಿಧ ವಲಯಗಳಲ್ಲಿ ಕನಿಷ್ಠ 10-12 ಡ್ರೋನ್‌ಗಳನ್ನು ಕಳುಹಿಸಿದೆ. ಗುರುವಾರ, ಪೂಂಚ್ ಮೇಲೆ ಮತ್ತು ಸಾಂಬಾದ ರಾಮ್‌ಗಢ ವಲಯದಲ್ಲಿ ಡ್ರೋನ್‌ಗಳು ಕಂಡುಬಂದವು. ಇದಕ್ಕೂ ಮೊದಲು, ನೌಶೇರಾ ಮತ್ತು ರಾಜೌರಿ ವಲಯಗಳು ಸಹ ಡ್ರೋನ್ ಚಟುವಟಿಕೆಯನ್ನು ಕಂಡವು, ಆಗ ಮಾನವರಹಿತ ವೈಮಾನಿಕ ರಕ್ಷಣಾ ವ್ಯವಸ್ಥೆ ಮೂಲಕ ಗುಂಡುಗಳನ್ನು ಹಾರಿಸಲಾಯಿತು.
ಜನವರಿ 9 ರಂದು, ಪಾಕಿಸ್ತಾನದ ಡ್ರೋನ್ ಸಾಂಬಾ ಜಿಲ್ಲೆಯಲ್ಲಿ ಎರಡು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು, 16 ಗುಂಡುಗಳು ಮತ್ತು ಒಂದು ಗ್ರೆನೇಡ್ ಅನ್ನು ಬೀಳಿಸಿದೆ ಎಂದು ಶಂಕಿಸಲಾಗಿದೆ. ಗಣರಾಜ್ಯೋತ್ಸವ ಆಚರಣೆಗೂ ಮುನ್ನ ತೀವ್ರ ನಿಗಾ ವಹಿಸಿದ್ದರ ನಡುವೆ ನಡೆಸಿದ ಶೋಧದ ವೇಳೆ ಪಡೆಗಳು ಇವುಗಳನ್ನು ವಶಪಡಿಸಿಕೊಂಡಿವೆ. ಸೋಮವಾರ(ಜ.12)ರಾತ್ರಿ ರಾಜಸ್ಥಾನದ ಜೈಸಲ್ಮೇರ್ ಮೇಲೆ ಶಂಕಿತ ಪಾಕಿಸ್ತಾನಿ ಡ್ರೋನ್ ಕೂಡ ಕಾಣಿಸಿಕೊಂಡಿತ್ತು.
ಪಾಕಿಸ್ತಾನ ಡ್ರೋನ್‌ಗಳನ್ನು ಕಳುಹಿಸಲು ಕಾರಣವೇನು?
ಪಾಕಿಸ್ತಾನದ ಡ್ರೋನ್ ಹಾರಾಟ ಮುಖ್ಯವಾಗಿ ಭಾರತದ ರಕ್ಷಣೆಯಲ್ಲಿನ ದೌರ್ಬಲ್ಯಗಳನ್ನು ತಿಳಿಯಲಾಗಿದೆ ಎಂದು ಮಿಲಿಟರಿ ವಿಶ್ಲೇಷಕರು ನಂಬುತ್ತಾರೆ. ಪಾಕಿಸ್ತಾನವು ಮುಂದೆ ಭಾರತದೊಂದಿಗೆ ಘರ್ಷಣೆ ಉಂಟಾದರೆ ತಮಗೆ ಯಾವುದು ಸುರಕ್ಷಿತ ಸ್ಥಳ ಎಂದು ತಿಳಿಯಲು ಮತ್ತು ಭಾರತದ ಭದ್ರತಾ ಲೋಪಗಳನ್ನು ಗುರುತಿಸುವಿಕೆಗಾಗಿ ಈ ಕಾರ್ಯಾಚೆಣೆ ನಡೆಯುತ್ತಿದೆ ಎನ್ನುವುದು ಭೂರಾಜಕೀಯ ತಜ್ಞ ಸುಮಿತ್ ರಾಜ್ ಅವರ ಅಭಿಪ್ರಾಯವಾಗಿದೆ.
ಶಸ್ತ್ರಾಸ್ತ್ರಗಳನ್ನು ತಲುಪಿಸುವ ಪ್ರಯತ್ನವೇ?
ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಅಧಿಕಾರಿ ಎಸ್‌ಪಿ ವೈದ್, ಪಾಕಿಸ್ತಾನವು ಹೆಚ್ಚುತ್ತಿರುವ ಉದ್ವಿಗ್ನತೆಗೆ ಗುರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಬಹುತೇಕ ಮುಜಾಹಿದ್ದೀನ್ಗಳು ನೇಮಕಾತಿ ನಿಂತು ಹೋಗಿರುವ ಹಿನ್ನಲೆಯಲ್ಲಿ, ಅಲ್ಲಿ ಮತ್ತೆ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನವು ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ತಲುಪಿಸಲು ಪ್ರಯತ್ನಿಸುತ್ತಿರಬಹುದು ಎಂದು ಹೇಳಿದ್ದಾರೆ.
ಭಾರತದ ಎಚ್ಚರಿಕೆ ಮತ್ತು ದಾಳಿಯಿಂದ ಇನ್ನೂ ಪಾಠ ಕಲಿಯದ ಪಾಕಿಸ್ತಾನ ತನ್ನ ಪ್ರಚೋದನಾಕಾರಿ ನೀತಿಯನ್ನು ದ್ವಿಗುಣಗೊಳಿಸುತ್ತಿರುವಂತೆ ತೋರುತ್ತಿದ್ದು, ಗಣರಾಜ್ಯೋತ್ಸವದ ಮೊದಲು ನವದೆಹಲಿ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ,(ಏಜನ್ಸೀಸ್).