ಆದಾಯ ತೆರಿಗೆ ಹೆಚ್ಚಳವೇ ಮಧ್ಯಮ ವರ್ಗದ ಪ್ರಗತಿಗೆ ಸಾಕ್ಷಿ: ವಿಪಕ್ಷಗಳ ಟೀಕೆಗೆ ಹಣಕಾಸು ಸಚಿವೆ ತಿರುಗೇಟು 
ದೇಶ

ಆದಾಯ ತೆರಿಗೆ ಹೆಚ್ಚಳವೇ ಮಧ್ಯಮ ವರ್ಗದ ಪ್ರಗತಿಗೆ ಸಾಕ್ಷಿ: ವಿಪಕ್ಷಗಳ ಟೀಕೆಗೆ ಹಣಕಾಸು ಸಚಿವೆ ತಿರುಗೇಟು | Nirmala Sitharaman

ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದರೆ ಅದರರ್ಥ ದೇಶದಲ್ಲಿ ಮಧ್ಯಮ ವರ್ಗದವರನ್ನು ಹತ್ತಿಕ್ಕಲಾಗುತ್ತಿದೆ ಅಥವಾ ಶೋಷಿಸಲಾಗುತ್ತಿದೆ ಎಂದಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ನಿರ್ಮಲ, ಮಧ್ಯಮ ವರ್ಗದ ಶೋಷಣೆಗೆ ಯಾವುದೇ ಪುರಾವೆಗಳಿಲ್ಲ, ಬದಲಾಗಿ ಆ ವರ್ಗದ ವ್ಯಾಪ್ತಿ ದೇಶದಲ್ಲಿ ವೇಗವಾಗಿ ವಿಸ್ತರಿಸುತ್ತಿದೆ ಎಂಬುದಕ್ಕೆ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.

ಸ್ವಾವಲಂಬಿ ಭಾರತದ ಸಂಕಲ್ಪ

ಮುಂದುವರೆದು ಮಾತನಾಡಿದ ವಿತ್ತ ಸಚಿವೆ, 2026-27ರ ಕೇಂದ್ರ ಬಜೆಟ್ ದೇಶವನ್ನು ಸ್ಥಿತಿಸ್ಥಾಪಕ ಮತ್ತು ಸ್ವಾವಲಂಬಿ ಭಾರತವನ್ನಾಗಿ ನಿರ್ಮಿಸುವ ಸಂಕಲ್ಪವನ್ನು ಹೊಂದಿದೆ. ವಿರೋಧ ಪಕ್ಷಗಳು ಕಲ್ಯಾಣ ಯೋಜನೆಗಳ ಅನುದಾನ ಕಡಿತಗೊಳಿಸಲಾಗಿದೆ ಎಂದು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜ್ಯಗಳಿಗೆ ನೀಡುವ ಯಾವುದೇ ನಿಧಿಯನ್ನು ತಡೆಹಿಡಿಯಲಾಗಿಲ್ಲ ಅಥವಾ ಸ್ಥಗಿತಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯುಪಿಎ ಮತ್ತು ಎನ್‌ಡಿಎ ನಡುವೆ ತುಲನೆ

ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನದ ಬಗ್ಗೆ ಮಾತನಾಡಿದ ನಿರ್ಮಲ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಮೋದಿ ಸರ್ಕಾರವು ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿದೆ ಎಂದು ಸಾಬೀತುಪಡಿಸಿದರು.
ಯುಪಿಎ ಕಾಲ: 14 ಪ್ರಮುಖ ಸಾಮಾಜಿಕ ವಲಯದ ಯೋಜನೆಗಳಲ್ಲಿ ಬರೋಬ್ಬರಿ 94,000 ಕೋಟಿ ರೂಪಾಯಿ ಹಣ ಖರ್ಚಾಗದೆ ಉಳಿದಿತ್ತು.
ಎನ್‌ಡಿಎ ಕಾಲ: ಕಳೆದ 10 ವರ್ಷಗಳಲ್ಲಿ ಕೇವಲ 37,000 ಕೋಟಿ ರೂಪಾಯಿ ಮಾತ್ರ ಬಳಕೆಯಾಗದೆ ಉಳಿದಿದೆ. ಅಂದರೆ, ಯೋಜಿತ ಹಣ ಕಟ್ಟಕಡೆಯ ಫಲಾನುಭವಿಗೆ ತಲುಪುತ್ತಿದೆ ಎಂದು ಸೀತಾರಾಮನ್​ತಿಳಿಸಿದ್ದಾರೆ​.

ಡಿಬಿಟಿ ಕ್ರಾಂತಿ

ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಸರ್ಕಾರ ನೇರ ನಗದು ವರ್ಗಾವಣೆ ಮೂಲಕ ಅಚ್ಚರಿಯ ಸಾಧನೆ ಮಾಡಿದೆ.
ಈವರೆಗೆ 48 ಲಕ್ಷ ಕೋಟಿ ರೂಪಾಯಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಅಲ್ಲದೆ, ಸೋರಿಕೆಗಳನ್ನು ತಡೆಗಟ್ಟುವ ಮೂಲಕ ಸರ್ಕಾರಕ್ಕೆ 4.31 ಲಕ್ಷ ಕೋಟಿ ರೂಪಾಯಿ ಹಣ ಉಳಿತಾಯವಾಗಿದೆ ಎಂದು ನಿರ್ಮಲ ಹೇಳಿದ್ದಾರೆ.

ಇದು ಸಾರ್ವಜನಿಕರ ಬೆವರಿನ ಹಣ

ಕೇಂದ್ರ ಸರ್ಕಾರದ ಬಳಿ ಇರುವ ಹಣವು ಸುಮ್ಮನೆ ಹಂಚಲು ಇರುವ ನಿಧಿಯಲ್ಲ, ಅದು ದೇಶದ ನಾಗರಿಕರ ಕಷ್ಟಾರ್ಜಿತ ಹಣ ಎಂದು ಸೀತಾರಾಮನ್ ಪ್ರತಿಪಾದಿಸಿದರು. ಸಾಲದ ವಿಚಾರದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ನಮ್ಮ ಸರ್ಕಾರ ಅತಿಯಾಗಿ ಸಾಲ ಮಾಡುವುದಿಲ್ಲ ಎಂಬ ತತ್ವಕ್ಕೆ ಬದ್ಧವಾಗಿದೆ. ಅಂತಿಮವಾಗಿ, ಈ ಬಜೆಟ್ ಹಳೆಯ ದಿನಗಳ ಎರಡಂಕಿ ಹಣದುಬ್ಬರ ಮತ್ತು ಆರ್ಥಿಕ ದುಸ್ಥಿತಿಯನ್ನು ಮರೆಯದೆ, ಭವಿಷ್ಯದ ಭದ್ರತೆಗೆ ನಾಂದಿ ಹಾಡಿದೆ ಎಂದು ವಿತ್ತ ಸಚಿವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).