ಇಲ್ಲಿ ಮನೆ, ಬ್ಯಾಂಕ್​ಗೆ ಬೀಗವಿರಲಿ ಬಾಗಿಲುಗಳೇ ಇಲ್ಲ! ಕಳ್ಳರೇ ಇಲ್ಲದ ಈ ಊರಿನ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?  
ದೇಶ

ಇಲ್ಲಿ ಮನೆ, ಬ್ಯಾಂಕ್​ಗೆ ಬೀಗವಿರಲಿ ಬಾಗಿಲುಗಳೇ ಇಲ್ಲ! ಕಳ್ಳರೇ ಇಲ್ಲದ ಈ ಊರಿನ ಬಗ್ಗೆ ಇಲ್ಲಿವೆ ಅಚ್ಚರಿ ಸಂಗತಿಗಳಿವು

ಈ ಇಡೀ ಗ್ರಾಮವೊಂದರಲ್ಲಿ ಮನೆ, ಬ್ಯಾಂಕ್​ಗಳು ಮತ್ತು ಪೊಲೀಸ್​ ಠಾಣೆಗಳಿಗೆ ಬೀಗಗಳಿರಲಿ, ಬಾಗಿಲುಗಳೇ ಇಲ್ಲ. ಇದಕ್ಕೆ ಕಾರಣ, ಬಾಗಿಲು ಮಾಡಿಸಿಕೊಳ್ಳಲು ಇಲ್ಲಿನ ಜನರಿಗೆ ಹಣದ ಬಿಕ್ಕಟ್ಟಿನ ಸಮಸ್ಯೆಯಿದೆ ಅಂತೇನಲ್ಲ.

ಮಹಾರಾಷ್ಟ್ರ: ನಾವು ಬೆಳಗ್ಗೆ ಮನೆ ಬಿಟ್ಟು ಹೋಗಿ ಸಂಜೆಯೊಳಗೆ ವಾಪಾಸ್​ ಬರುತ್ತೀವಿ ಎಂಬ ಗ್ಯಾರಂಟಿ ಇದ್ದರೂ ಮನೆಗಳ ಬಾಗಿಲನ್ನು ಬೀಗಗಳಿಂದ ಭದ್ರವಾಗಿ ಲಾಕ್​ ಮಾಡಿಯೇ ಹೋಗುತ್ತೇವೆ. ಕಾರಣ, ನಮ್ಮ ಚಿನ್ನಾಭರಣಗಳು, ದುಬಾರಿ ಮೌಲ್ಯದ ವಸ್ತುಗಳು ಖದೀಮರ ಪಾಲಾಗಿಬಿಟ್ಟರೆ ಏನು ಕಥೆ ಎಂಬ ಅತೀವ ಭಯದಿಂದ. ಅಸಲಿಗೆ, ಈ ಕಳ್ಳರ ಕಾಟ ಒಂದು ಊರಿಗೆ ಮಾತ್ರವಲ್ಲ, ದೇಶದ ಮೂಲೆ ಮೂಲೆಯಲ್ಲೂ ಇದೆ. ಆದರೆ, ಒಂದೇ ಒಂದು ರಾಜ್ಯದ ಸ್ಥಳವನ್ನು ಬಿಟ್ಟು.

ಈ ಇಡೀ ಗ್ರಾಮವೊಂದರಲ್ಲಿ ಮನೆ, ಬ್ಯಾಂಕ್​ಗಳು ಮತ್ತು ಪೊಲೀಸ್​ ಠಾಣೆಗಳಿಗೆ ಬೀಗಗಳಿರಲಿ, ಬಾಗಿಲುಗಳೇ ಇಲ್ಲ. ಇದಕ್ಕೆ ಕಾರಣ, ಬಾಗಿಲು ಮಾಡಿಸಿಕೊಳ್ಳಲು ಇಲ್ಲಿನ ಜನರಿಗೆ ಹಣದ ಬಿಕ್ಕಟ್ಟಿನ ಸಮಸ್ಯೆ ಏನಲ್ಲ. ಬದಲಿಗೆ, ಒಂದು ಅದ್ಭುತ ಶಕ್ತಿಯ ಮೇಲಿರುವ ಅಪಾರವಾದ ನಂಬಿಕೆ ಹಾಗೂ ಪವಾಡದಿಂದ ಎನ್ನಲಾಗಿದೆ. ಅಷ್ಟಕ್ಕೂ ಈ ಊರು ಬೇರಾವುದೂ ಅಲ್ಲ. ಅದೇ ಮಹಾರಾಷ್ಟ್ರದಲ್ಲಿರುವ ಶನಿ ಸಿಂಗ್ನಾಪುರ.

ಈ ಗ್ರಾಮದಲ್ಲಿ ಮನೆಗಳಿಗೆ ಬೀಗ ಹಾಕುವುದಿಲ್ಲ. ವಾಸ್ತವವಾಗಿ, ಇಲ್ಲಿನ ನಿವಾಸಿಗಳು ತಮ್ಮ ಮನೆಗಳಿಗೆ ಬಾಗಿಲುಗಳನ್ನೇ ಮಾಡಿಸಿಕೊಂಡಿಲ್ಲ. ಹೀಗಿರುವಾಗ, ಈ ಗ್ರಾಮದಲ್ಲಿ ಕಳ್ಳರಿಗೆ ಜಾಗವೇ ಇಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಬಾಗಿಲು ಅಥವಾ ಕಿಟಕಿಗಳಿಲ್ಲದ ಗ್ರಾಮದಲ್ಲಿ ಕಳ್ಳತನವು ಎಗ್ಗಿಲ್ಲದೇ ಸಾಗುತ್ತಿರಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ. ಆದರೆ, ಇಲ್ಲಿ ಯಾವುದೇ ಕಾರಣಕ್ಕೂ ಆ ರೀತಿಯ ಕಳ್ಳತನ ಅಥವಾ ದರೋಡೆ ನಡೆಯುವುದಿಲ್ಲ.

ಶನಿ ದೇವರ ಮೇಲಿನ ಅಚಲ ನಂಬಿಕೆ

ಶನಿ ಸಿಂಗ್ನಾಪುರದಲ್ಲಿ ಮನೆಗಳು, ಅಂಗಡಿಗಳು ಅಥವಾ ಪೊಲೀಸ್ ಠಾಣೆಗೆ ಬೀಗ ಹಾಕುವುದಿಲ್ಲ. ಇದಕ್ಕೆ ಕಾರಣ, ಗ್ರಾಮದ ರಕ್ಷಕನೆಂದು ನಂಬಲಾದ ಶನಿ ದೇವರ ಮೇಲಿರುವ ಜನರ ಅಪಾರ ಹಾಗೂ ಅಚಲ ನಂಬಿಕೆ. ಯಾರಾದರೂ ಕೆಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅಥವಾ ಅಧರ್ಮದ ಹಾದಿಯಲ್ಲಿ ನಡೆದರೆ, ಶನಿ ದೇವರು ಅವರನ್ನು ಶಿಕ್ಷಿಸುತ್ತಾರೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ. ಯಾರೂ ಕೂಡ ಬೇರೆಯವರ ಮನೆಗಳಿಂದ ಅಥವಾ ಬೇರೆಲ್ಲಿಂದಲೂ ಏನನ್ನೂ ಕದಿಯುವ ಧೈರ್ಯ ಮಾಡುವುದಿಲ್ಲ.

ನಾಯಿಗಳು ಅಥವಾ ಇನ್ನಿತರ ಪ್ರಾಣಿಗಳು ಮನೆಯೊಳಗೆ ಬಂದು ತೊಂದರೆ ಕೊಡಬಾರದೆಂಬ ಕಾರಣಕ್ಕಾಗಿ, ಮನೆಗಳ ಬಾಗಿಲ ಹೊಸ್ತಿಲ ಬಳಿ ತಾತ್ಕಾಲಿಕವಾಗಿ ಮರದ ಹಲಗೆಗಳನ್ನು ಇರಿಸಲಾಗಿದೆ ಅಷ್ಟೇ. ಇದಲ್ಲದೆ ಬೇರೆ ಯಾವುದೇ ರೀತಿಯಲ್ಲಿ ಮನೆಗಳಿಗೆ ಬೀಗ ಹಾಕುವುದಿಲ್ಲ. ಬೆಲೆಬಾಳುವ ಆಭರಣಗಳನ್ನು ಹೊಂದಿರುವವರ ಮನೆಗಳೂ ಕೂಡ ಇದೇ ರೀತಿಯಲ್ಲಿ ನಿರ್ಮಿಸಲ್ಪಟ್ಟಿವೆ ಎಂಬುದೇ ಅಚ್ಚರಿ.

ಬಾಗಿಲುಗಳಿಲ್ಲದ ಪೊಲೀಸ್ ಠಾಣೆ, ಬ್ಯಾಂಕ್

ಶನಿ ಶಿಂಗ್ಣಾಪುರದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿನ ಪೊಲೀಸ್ ಠಾಣೆ. ಈ ಗ್ರಾಮದಲ್ಲಿ ಸೆಪ್ಟೆಂಬರ್ 2015ರಲ್ಲಿ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಯಿತು. ಗ್ರಾಮದಲ್ಲಿ ಕಳ್ಳತನ ಅಥವಾ ದರೋಡೆಗಳೇ ನಡೆಯದ ಕಾರಣ, ಇಲ್ಲಿಗೆ ದೂರು ನೀಡಲು ಯಾರೂ ಬರುವುದಿಲ್ಲ. ಈ ಪೊಲೀಸ್ ಠಾಣೆಗೂ ಕೂಡ ಬಾಗಿಲು ಅಥವಾ ಕಿಟಕಿಗಳಿಲ್ಲ. ಇಲ್ಲಿನ ಬ್ಯಾಂಕ್ ಕೂಡ ವಿಶಿಷ್ಟವೇ. ಇದು ಭಾರತದಲ್ಲಿರುವ, ಬೀಗವಿಲ್ಲದ ಮೊದಲ ಮತ್ತು ಏಕೈಕ ಬ್ಯಾಂಕ್ ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ.

2011ರಲ್ಲಿ ಆರಂಭವಾದ 'ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್', ಜಗತ್ತಿನಲ್ಲೇ ಬೀಗ ಹಾಕದ ಏಕೈಕ ಬ್ಯಾಂಕ್ ಎಂಬ ಖ್ಯಾತಿಯನ್ನು ಹೊಂದಿದೆ. ಬ್ಯಾಂಕಿನ ಸುರಕ್ಷತೆಗಾಗಿ ಕೇವಲ ಗಾಜಿನ ಪ್ರವೇಶದ್ವಾರ ಮತ್ತು ಹೊರಗಿನಿಂದ ಕಾಣದಂತಹ ವಿದ್ಯುತ್ಕಾಂತೀಯ (ಎಲೆಕ್ಟ್ರೋಮ್ಯಾಗ್ನೆಟಿಕ್) ಬೀಗವನ್ನು ಮಾತ್ರ ಅಳವಡಿಸಲಾಗಿದೆ. ಇದು ಗ್ರಾಮಸ್ಥರ ನಂಬಿಕೆಗೆ ನೀಡಿದ ಗೌರವವಾಗಿದೆ.

ಬಾಗಿಲು ಹಾಕಿದರೆ ಸಾವು ಸಮೀಪ

ಶನಿ ದೇವರಿಗೆ ವಿರುದ್ಧವಾಗಿ ತಮ್ಮ ಮನೆಗಳಲ್ಲಿ ಬಾಗಿಲು ಅಥವಾ ಕಿಟಕಿಗಳನ್ನು ಅಳವಡಿಸಲು ಯಾರಾದರೂ ಪ್ರಯತ್ನಿಸಿದರೆ, ಅವರು ಮರಣ ಹೊಂದುತ್ತಾರೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಇಂತಹ ಅನೇಕ ಘಟನೆಗಳು ತಮ್ಮ ಅನುಭವದಲ್ಲಿ ನಡೆದಿವೆ ಎಂದು ಅಲ್ಲಿನವರು ಹೇಳಿಕೊಳ್ಳುತ್ತಾರೆ. ಶನಿ ಶಿಂಗ್ಣಾಪುರದ ಈ ಕಥೆಗಳನ್ನು ಕೇಳಿದಾಗ ಆರಂಭದಲ್ಲಿ ನಂಬುವುದು ಕಷ್ಟ ಅನಿಸಿದರೂ, ಇಲ್ಲಿಗೆ ಬಂದಾಗ, ಇಡೀ ಗ್ರಾಮಕ್ಕೆ ಶನಿ ದೇವರ ಮೇಲೆ ಎಷ್ಟೊಂದು ಗಾಢವಾದ ನಂಬಿಕೆ ಇದೆ ಎಂಬುದು ನಿಮಗೆ ಅರಿವಾಗಬಹುದು.

ಗರ್ಭಗುಡಿಯಿಲ್ಲದ ಶನಿ ದೇವಾಲಯ

ಶನಿ ಶಿಂಗ್ಣಾಪುರದ ವಿಶಿಷ್ಟ ನಂಬಿಕೆಗಳು ಮತ್ತು ಅಲ್ಲಿನ ಶಕ್ತಿಯ ಬಗ್ಗೆ ತಿಳಿದುಕೊಂಡ ನಂತರ ಅನೇಕರು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ. ಗ್ರಾಮದ ಸಮೃದ್ಧಿಗೆ ಇಲ್ಲಿನ ದೇವಾಲಯದಲ್ಲಿರುವ ಶನಿ ದೇವರೇ ಕಾರಣ ಎಂದು ಗ್ರಾಮಸ್ಥರು ನಂಬಿದ್ದಾರೆ. ಈ ಗ್ರಾಮದಲ್ಲಿರುವ ಶನಿ ದೇವ ದೇವಾಲಯದಲ್ಲಿ, ದೇವರು ನೇರವಾಗಿ ನೆಲದ ಮೇಲೆಯೇ ನೆಲೆಸಿದ್ದಾರೆ. ಹಿಂದೆ ಶನಿ ದೇವರು ನೆಲೆಸಿದ್ದ ಸ್ಥಳದ ಸುತ್ತಲೂ ಒಂದು ಗುಡಿಯನ್ನು ನಿರ್ಮಿಸಲಾಗಿತ್ತು, ಆದರೆ, ಸಿಡಿಲು ಬಡಿದು ಆ ಗುಡಿಯು ಸಂಪೂರ್ಣವಾಗಿ ನಾಶವಾಯಿತು. ಆ ಘಟನೆಯ ನಂತರ, ದೇವಾಲಯದಲ್ಲಿ ಮತ್ತೆ ಯಾವುದೇ ಗುಡಿಯನ್ನು ನಿರ್ಮಿಸುವ ಪ್ರಯತ್ನ ಮಾಡಲಾಗಿಲ್ಲ.

ಶನಿ ಶಿಂಗ್ಣಾಪುರಕ್ಕೆ ಹೋಗುವುದು ಹೇಗೆ?

ಪ್ರತಿದಿನ ಅನೇಕ ಪ್ರವಾಸಿಗರು ಶನಿ ಶಿಂಗ್ಣಾಪುರಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಇಲ್ಲಿಗೆ ಬಸ್ ಅಥವಾ ರೈಲಿನ ಮೂಲಕ ತಲುಪಬಹುದು. ಇಲ್ಲಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ (MSRTC) ಬಸ್ ಸೌಲಭ್ಯ ಲಭ್ಯವಿದೆ. ಶನಿ ಶಿಂಗ್ಣಾಪುರ ದೇವಾಲಯವು ಶಿರಡಿಯಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ದೇವಾಲಯದ ಸಮೀಪವಿರುವ ಪ್ರಮುಖ ರೈಲು ನಿಲ್ದಾಣಗಳೆಂದರೆ ರಾಹುರಿ, ಅಹಮದ್‌ನಗರ, ಶ್ರೀರಾಮಪುರ ಮತ್ತು ಶಿರಡಿ. ಔರಂಗಾಬಾದ್ ಏರ್​ಪೋರ್ಟ್​ ಈ ಗ್ರಾಮದಿಂದ 90 ಕಿ.ಮೀ ದೂರದಲ್ಲಿದೆ,(ಏಜೆನ್ಸೀಸ್).