Chhatrapati Shivaji Maharaj | ಇಸ್ರೇಲ್‌ನಲ್ಲಿ ಅನಾವರಣಗೊಳ್ಳಲಿದೆ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ 
ದೇಶ

ಇಸ್ರೇಲ್‌ನಲ್ಲಿ ಅನಾವರಣಗೊಳ್ಳಲಿದೆ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ; ಮಹಾರಾಷ್ಟ್ರ ಸರ್ಕಾರದ ಪೂರ್ಣ ಬೆಂಬಲ! | Chhatrapati Shivaji Maharaj

ಮುಂಬೈ/ಟೆಲ್ ಅವಿವ್: ಭಾರತ ಮತ್ತು ಇಸ್ರೇಲ್​ ನಡುವೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಬಾಂಧವ್ಯದ ಸಂಕೇತವಾಗಿ, ಇಸ್ರೇಲ್​ನಲ್ಲಿ ಮರಾಠಾ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಭವ್ಯ ಪ್ರತಿಮೆಯನ್ನು ಸ್ಥಾಪಿಸಲು ಇಸ್ರೇಲ್ ಸರ್ಕಾರ ನಿರ್ಧರಿಸಿದೆ. ಮುಂಬೈನಲ್ಲಿರುವ ಇಸ್ರೇಲ್ ಕಾನ್ಸುಲ್ ಜನರಲ್ ಯಾನಿವ್ ರೆವಾಚ್ ಅವರು ಶಿವರಾಜ್ಯಾಭಿಷೇಕ ದಿನದ ಶುಭ ಸಂದರ್ಭದಲ್ಲಿ ಈ ಐತಿಹಾಸಿಕ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್​ಐ ಜೊತೆ ಮಾತನಾಡಿದ ಯಾನಿವ್ ರೆವಾಚ್, ಭಾರತೀಯರಿಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರಭಾವ ಎಷ್ಟಿದೆ ಮತ್ತು ಅವರು ಎಷ್ಟು ಮುಖ್ಯ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಭಾರತದಲ್ಲಿ ತಯಾರಾಗಲಿರುವ ಮಹಾರಾಜರ ಬೃಹತ್ ಪ್ರತಿಮೆಯನ್ನು ಇಸ್ರೇಲ್‌ಗೆ ಕೊಂಡೊಯ್ದು ಅಲ್ಲಿನ ಪ್ರಮುಖ ನಗರವೊಂದರಲ್ಲಿ ಸ್ಥಾಪಿಸುವುದು ನಮ್ಮ ಆಲೋಚನೆಯಾಗಿದೆ. ಇದು ಕೇವಲ ಒಂದು ಸಾಮಾನ್ಯ ಯೋಜನೆಯಲ್ಲ, ಬದಲಿಗೆ ದೀರ್ಘಕಾಲದವರೆಗೆ ಭಾರತ ಮತ್ತು ಇಸ್ರೇಲ್ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಮಹತ್ವದ ಕೊಂಡಿಯಾಗಲಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ನೆರವು

ಶಿವಾಜಿ ಮಹಾರಾಜರ ಭವ್ಯ ಪರಂಪರೆಗೆ ತಕ್ಕಂತೆ ಈ ಸ್ಮಾರಕವನ್ನು ನಿರ್ಮಿಸಲು ಇಸ್ರೇಲ್ ಮುಂದಾಗಿದೆ. ಪ್ರತಿಮೆಯ ಕಲಾತ್ಮಕ ವಿನ್ಯಾಸ ಮತ್ತು ನಿಖರ ಐತಿಹಾಸಿಕ ಉಲ್ಲೇಖಗಳಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರ ಸಹಕಾರವನ್ನು ಇಸ್ರೇಲ್ ಕೋರಿದ್ದು, ಮುಖ್ಯಮಂತ್ರಿಗಳು ತಕ್ಷಣವೇ ಇದಕ್ಕೆ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಫಡ್ನವಿಸ್ ಅವರಿಗೆ ಪತ್ರ ಬರೆದಿರುವ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿ, ಇಸ್ರೇಲ್‌ನಲ್ಲಿ ಸ್ಥಾಪನೆಯಾಗಲಿರುವ ಶಿವಾಜಿ ಮಹಾರಾಜರ ಪ್ರತಿಮೆಯು ಉಭಯ ದೇಶಗಳ ಸ್ನೇಹಕ್ಕೆ ಸಾಕ್ಷಿಯಾಗಲಿದೆ. ಮಹಾರಾಷ್ಟ್ರ ಮತ್ತು ಭಾರತೀಯ ಯಹೂದಿ ಸಮುದಾಯದ ನಡುವೆ ಐತಿಹಾಸಿಕ ಸಂಬಂಧವಿದೆ. ಇಂದು ಈ ಸಮುದಾಯದ ವಂಶಸ್ಥರು ಇಸ್ರೇಲ್‌ನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಾನು ಭಾರತದಲ್ಲಿ ಎಲ್ಲಿಗೆ ಪ್ರವಾಸ ಮಾಡಿದರೂ ಇಸ್ರೇಲ್ ಮತ್ತು ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಭಾರತೀಯರ ಕಣ್ಣುಗಳಲ್ಲಿ ಅಪಾರ ಗೌರವವನ್ನು ಕಂಡಿದ್ದೇನೆ. ಅದೇ ರೀತಿ ಇಸ್ರೇಲ್ ಜನರಿಗೂ ಶಿವಾಜಿ ಮಹಾರಾಜರ ಶೌರ್ಯ ಮತ್ತು ಸಾಧನೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪೂರ್ಣ ಬೆಂಬಲ ಘೋಷಿಸಿದ ಸಿಎಂ ಫಡ್ನವಿಸ್

ಇಸ್ರೇಲ್ ಸರ್ಕಾರದ ಈ ಅದ್ಭುತ ನಿರ್ಧಾರಕ್ಕೆ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇದು ಅತ್ಯಂತ ಹೆಮ್ಮೆಯ ಮತ್ತು ಅದ್ಭುತವಾದ ಸುದ್ದಿ. ಶಿವರಾಜ್ಯಾಭಿಷೇಕ ದಿನದ ಶುಭ ಸಂದರ್ಭದಲ್ಲಿ ಇಸ್ರೇಲ್ ಕಾನ್ಸುಲ್ ಜನರಲ್ ಯಾನಿವ್ ರೆವಾಚ್ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಸ್ಥಾಪಿಸುವ ಈ ಐತಿಹಾಸಿಕ ಕಾರ್ಯಕ್ಕೆ ಮಹಾರಾಷ್ಟ್ರ ಸರ್ಕಾರವು ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಲಿದೆ. ಜೈ ಭವಾನಿ, ಜೈ ಶಿವಾಜಿ! ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​).