Lohagad Fort Murder | ಪುಣೆ ಕೋಟೆ ಹತ್ಯೆ ಪ್ರಕರಣ: ಭಾವಿ ಪತ್ನಿ, ಪ್ರಿಯಕರನ ಬಳಿಕ 3ನೇ ಆರೋಪಿ ಅಂದರ್​! 
ದೇಶ

ಪುಣೆ ಕೋಟೆ ಹತ್ಯೆ ಪ್ರಕರಣ: ಭಾವಿ ಪತ್ನಿ, ಪ್ರಿಯಕರನ ಬಳಿಕ 3ನೇ ಆರೋಪಿ ಅಂದರ್​! | Lohagad Fort Murder

ಪುಣೆ: ಇಲ್ಲಿನ ಲೋಹಗಡ್ ಕೋಟೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ (Lohagad Fort Murder) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಜೂನ್ 18ರಂದು ನಡೆದ ಈ ದುರ್ಘಟನೆಯು ಮೊದಲು ಆಕಸ್ಮಿಕ ಸಾವು ಎಂದು ಬಿಂಬಿತವಾಗಿತ್ತು. ಆದರೆ ಮೃತನ ಸಹೋದರಿ ಮತ್ತು ಕುಟುಂಬಸ್ಥರ ಸಂಶಯ ಹಾಗೂ ತನಿಖಾಧಿಕಾರಿಗಳ ಜಾಣ್ಮೆಯಿಂದ ಇದೊಂದು ಪೂರ್ವಯೋಜಿತ ಕೊಲೆ ಎಂಬ ಸತ್ಯ ಹೊರಬಂದಿದೆ.
ಕೇತನ್ ಅಗರ್ವಾಲ್ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಈ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ಇವರನ್ನು ಪೊಲೀಸರು ಈಗಾಗಲೇ ಜೂನ್ 23ರಂದೇ ಬಂಧಿಸಿದ್ದರು. ಇವರೊಂದಿಗೆ ಕೈಜೋಡಿಸಿದ್ದ ಮೂರನೇ ಆರೋಪಿ ರಿತೇಶ್ ಹಂಗೆಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಚೇತನ್ ಚೌಧರಿ ಸ್ನೇಹಿತನಾಗಿರುವ ರಿತೇಶ್, ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಮೊಬೈಲ್ ಫೋನ್‌ನ ತಪಾಸಣೆ ನಡೆಸಿದಾಗ ರಿತೇಶ್ ಪಾತ್ರ ಬೆಳಕಿಗೆ ಬಂದಿದೆ. ಕೇತನ್ ಕೈ ಕಾಲುಗಳನ್ನು ಮುರಿದು ನಂತರ ಕೊಲೆ ಮಾಡುವ ಬಗ್ಗೆ ಇವರು ಮೊಬೈಲ್ ಚಾಟ್‌ಗಳಲ್ಲಿ ಚರ್ಚಿಸಿರುವುದು ಪತ್ತೆಯಾಗಿದೆ. ನ್ಯಾಯಾಲಯವು ರಿತೇಶ್‌ಗೆ ಸೆಪ್ಟೆಂಬರ್ 12ರವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.

ಪ್ರೇಮ ಪ್ರಕರಣ ಮತ್ತು ಹತ್ಯೆಯ ಸಂಚು!...

ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದರು. ಜನವರಿಯಿಂದ ಜೂನ್ ನಡುವಿನ ಅವಧಿಯಲ್ಲಿ ಇವರಿಬ್ಬರು 2,000ಕ್ಕೂ ಹೆಚ್ಚು ಬಾರಿ ಮಾತನಾಡಿದ್ದು, ಸುಮಾರು 238 ಗಂಟೆಗಳಿಗೂ ಅಧಿಕ ಕಾಲ ಕರೆಗಳಲ್ಲಿ ಮಾತನಾಡಿದ್ದಾರೆ. ಸಿಯಾಳೊಂದಿಗೆ ಮದುವೆ ನಿಶ್ಚಯವಾಗಿದ್ದ ಕೇತನ್ ಅಗರ್ವಾಲ್ ತಮ್ಮ ಪ್ರೀತಿಗೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಈ ಜೋಡಿ ಹತ್ಯೆಗೆ ಸಂಚು ರೂಪಿಸಿತ್ತು.
ಮೊದಲು ಕೇತನ್ ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಕಮರಿಗೆ ಬಿದ್ದು ಮೃತಪಟ್ಟಿರುವುದಾಗಿ ಸಿಯಾ ಗೋಯಲ್ ಹೇಳಿದ್ದರು. ಪೊಲೀಸರು ಕೂಡ ಇದನ್ನು ಆಕಸ್ಮಿಕ ಸಾವು ಎಂದೇ ದಾಖಲಿಸಿದ್ದರು. ಆದರೆ ಕೇತನ್ ಅವರ ಸಹೋದರಿಗೆ ಈ ಸಾವಿನ ಬಗ್ಗೆ ತೀವ್ರ ಅನುಮಾನವಿತ್ತು. ಅಂತಿಮ ಸಂಸ್ಕಾರದ ನಾಲ್ಕು ದಿನಗಳ ಬಳಿಕ ಸಿಯಾ ಗೋಯಲ್ ಸಾಂತ್ವನ ಹೇಳಲು ಕೇತನ್ ಮನೆಗೆ ಬಂದಾಗ, ಸಹೋದರಿ ಆಕೆಯನ್ನು ವಿವರವಾಗಿ ಪ್ರಶ್ನಿಸಿದ್ದಾರೆ. ಸಿಯಾ ವರ್ತನೆ ಕುಟುಂಬದವರ ಸಂಶಯವನ್ನು ಮತ್ತಷ್ಟು ಹೆಚ್ಚಿಸಿತು. ತಕ್ಷಣವೇ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ಮರುತನಿಖೆಗೆ ಒತ್ತಾಯಿಸಿದರು.

ಬಾಲಿ ಪ್ರವಾಸದ ವೇಳೆ ಪಾಸ್‌ಪೋರ್ಟ್ ಕಳವು ನಾಟಕ!...

ಕೊಲೆಗೂ ಮುನ್ನ ಜೂನ್ 6ರಂದು ಕೇತನ್ ಮತ್ತು ಸಿಯಾ ಮುಂಬೈನಿಂದ ಇಂಡೋನೇಷ್ಯಾದ ಬಾಲಿಗೆ ಪ್ರಿ-ವೆಡ್ಡಿಂಗ್ ಶೂಟ್‌ಗಾಗಿ ತೆರಳಬೇಕಿತ್ತು. ಆದರೆ ಮುಂಬೈ ವಿಮಾನ ನಿಲ್ದಾಣ ತಲುಪಿದಾಗ ಕೇತನ್ ಅವರ ಪಾಸ್‌ಪೋರ್ಟ್ ನಾಪತ್ತೆಯಾಗಿರುವುದು ಗೊತ್ತಾಗಿ, ಅವರು ವಾಪಸ್ ಬರಬೇಕಾಯಿತು. ಕಾರಿನಲ್ಲಿ ಎಲ್ಲರ ಪಾಸ್‌ಪೋರ್ಟ್‌ಗಳು ಒಂದೇ ಪೌಚ್‌ನಲ್ಲಿದ್ದವು. ಮಾರ್ಗಮಧ್ಯೆ ಫುಡ್ ಮಾಲ್‌ನಲ್ಲಿ ನಿಲುಗಡೆ ಮಾಡಿದ್ದಾಗ, ಸಿಯಾ ಮೊಬೈಲ್ ಮರೆತುಹೋಗಿದೆ ಎಂದು ಕಾರಿಗೆ ವಾಪಸ್ ಹೋಗಿದ್ದರು. ಇದೇ ವೇಳೆ ಕೇತನ್ ಪಾಸ್‌ಪೋರ್ಟ್ ಮಾತ್ರ ಕಳುವಾಗಿರುವುದು ವ್ಯವಸ್ಥಿತ ಸಂಚಿನ ಭಾಗವಾಗಿರಬಹುದು ಎಂದು ಮೃತನ ತಂದೆ ವಿಶಾಲ್ ಅಗರ್ವಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರ ತನಿಖೆಯಿಂದ ಸಿಕ್ಕಿಬಿದ್ದ ಆರೋಪಿಗಳು

ಕುಟುಬಸ್ಥರ ಒತ್ತಾಯದ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜೂನ್ ಬಿಸಿಲಿನಲ್ಲೂ ವ್ಯಕ್ತಿಯೊಬ್ಬ ಹುಡಿ ಧರಿಸಿ ಕೇತನ್ ಮತ್ತು ಸಿಯಾಳ ಚಲನವಲನಗಳನ್ನು ಹಿಂಬಾಲಿಸುತ್ತಿರುವುದು ಕಂಡುಬಂತು. ಇದು ಚೇತನ್ ಚೌಧರಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯವಾಯಿತು. ಕೇತನ್ ಮತ್ತು ಸಿಯಾ ಮೇ 31, ಜೂನ್ 14 ಮತ್ತು ಜೂನ್ 18ರಂದು ಲೋಹಗಡ್ ಕೋಟೆಗೆ ಮೂರು ಬಾರಿ ಟೆಕ್ಕಿಂಗ್ ತೆರಳಿದ್ದರು. ಅಂತಿಮವಾಗಿ ಜೂನ್ 18ರಂದು ಇಬ್ಬರೂ ಸೇರಿ ಕೇತನ್ ಅವರನ್ನು ದೂಡಿ ಕೊಲೆ ಮಾಡಿ, ಅದನ್ನು ಆಕಸ್ಮಿಕ ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದರು. ಸದ್ಯ ಪೊಲೀಸರು ಈ ಪ್ರಕರಣದ ಸಂಪೂರ್ಣ ಜಾಡನ್ನು ಕಲೆಹಾಕುತ್ತಿದ್ದು, ಬಂಧಿತ ಮೂವರು ಆರೋಪಿಗಳ ವಿಚಾರಣೆ ಮುಂದುವರಿದಿದೆ(ಏಜೆನ್ಸೀಸ್).