Seva Teerth | ಪ್ರಧಾನ ಮಂತ್ರಿ ಕಚೇರಿಯ ಹೊಸ ಕಟ್ಟಡವಾದ ಸೇವಾ ತೀರ್ಥವನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಇರುವ ಹೊಸ ಸಂಯೋಜಿತ ಸಂಕೀರ್ಣವಾದ ಸೇವಾ ತೀರ್ಥ (Seva Teert) ಕಟ್ಟಡವನ್ನು ಉದ್ಘಾಟಿಸಿದ್ದು, ಈ ಕಾರ್ಯಕ್ರಮದ ಬಳಿಕ ಸೇವಾ ತೀರ್ಥಕ್ಕೆ ತೆರಳಿದ ಪ್ರಧಾನಿಯವರು, ರೈತರು, ಮಹಿಳೆಯರು, ಯುವಕರು ಮತ್ತು ದುರ್ಬಲ ನಾಗರಿಕರಿಗೆ ಅನುಕೂಲವಾಗುವ ಪ್ರಮುಖ ಉಪಕ್ರಮಗಳನ್ನು ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.
ಪಿಎಂ ರಹತ್ ಯೋಜನೆ: ಇದು ರಸ್ತೆ ಅಪಘಾತಕ್ಕೊಳಗಾದವರಿಗೆ ತುರ್ತು ಸಂದರ್ಭದಲ್ಲಿ ಉಚಿತ ಮತ್ತು ತಕ್ಷಣದ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿದೆ.
ಅಪಘಾತಕ್ಕೊಳಗಾದ ವ್ಯಕ್ತಿಗೆ ಆಸ್ಪತ್ರೆಯಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ನಿರ್ಣಾಯಕ ಸಮಯದಲ್ಲಿ ಹಣದ ಕೊರತೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಬಾರದು ಎನ್ನುವುದು ಈ ಯೋಜನೆಯ ಮೂಲ ಉದ್ದೇಶವಾಗಿದ್ದು, ದೇಶದ ಯಾವುದೇ ಭಾಗದಲ್ಲಿ ಅಪಘಾತಕ್ಕೊಳಗಾದವರಿಗೆ ತಕ್ಷಣದ ವೈದ್ಯಕೀಯ ನೆರವು ಒದಗಿಸಲು ಇದು ಸಹಕಾರಿಯಾಗುತ್ತದೆ.
ಲಖ್ಪತಿ ದೀದಿ: ಕೇಂದ್ರ ಸರ್ಕಾರವು ಈ ಹಿಂದೆ 2027 ರ ಮಾರ್ಚ್ ವೇಳೆಗೆ 3 ಕೋಟಿ ಮಹಿಳೆಯರನ್ನು ಲಖ್ಪತಿ ದೀದಿಯನ್ನಾಗಿ ಮಾಡುವ ಗುರಿ ಹೊಂದಿತ್ತು. ಆದರೆ, ನಿಗದಿತ ಸಮಯಕ್ಕಿಂತ ಒಂದು ವರ್ಷ ಮೊದಲೇ (ಅಂದರೆ ಈಗಲೇ) ದೇಶದಲ್ಲಿ 3 ಕೋಟಿಗೂ ಹೆಚ್ಚು ಮಹಿಳೆಯರು ವಾರ್ಷಿಕ 1 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವ ಸಾಧನೆ ಮಾಡಿದ್ದಾರೆ. ಈ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತರಾದ ಪ್ರಧಾನಿಯವರು, 2029 ರ ಮಾರ್ಚ್ ವೇಳೆಗೆ ಈ ಗುರಿಯನ್ನು 6 ಕೋಟಿಗೆ ಏರಿಸಿದ್ದಾರೆ ಎನ್ನಲಾಗಿದೆ.
ಕೃಷಿ ಮೂಲಸೌಕರ್ಯ ನಿಧಿ
ಇದು ಕೊಯ್ಲಿನ ನಂತರದ ನಿರ್ವಹಣೆ ಮತ್ತು ಕೃಷಿ ಆಸ್ತಿಗಳ ನಿರ್ಮಾಣಕ್ಕಾಗಿ ದೀರ್ಘಕಾಲೀನ ಸಾಲದ ಸೌಲಭ್ಯ ಒದಗಿಸಲು ನೆತವಾಗಲಿದ್ದು, ರೈತರು ತಾವು ಬೆಳೆದ ಬೆಳೆಯನ್ನು ಸಂರಕ್ಷಿಸಲು ಮತ್ತು ಉತ್ತಮ ಬೆಲೆಗೆ ಮಾರಾಟ ಮಾಡಲು ಮತ್ತು ಬೇಕಾದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಇದು ನೆರವಾಗುತ್ತದೆ. ಇದರ ವೆಚ್ಚವನ್ನು 1 ಲಕ್ಷ ಕೋಟಿ ರೂ.ಗಳಿಂದ 2 ಲಕ್ಷ ಕೋಟಿ ರೂ.ಗಳಿಗೆ ದ್ವಿಗುಣಗೊಳಿಸಲಾಗಿದೆ.
ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0
ಇದು ನೇರವಾಗಿ ಸ್ಟಾರ್ಟ್ಅಪ್‌ಗಳಲ್ಲಿ ಹೂಡಿಕೆ ಮಾಡುವ ಬದಲು, ಸೆಬಿ (SEBI) ನೋಂದಾಯಿತ 'ಆಲ್ಟರ್ನೇಟಿವ್ ಇನ್ವೆಸ್ಟ್‌ಮೆಂಟ್ ಫಂಡ್'ಗಳಿಗೆ (AIFs) ಬಂಡವಾಳ ಒದಗಿಸುವ ಒಂದು ವ್ಯವಸ್ಥೆಯಾಗಿದೆ. ಈ ಎಐಎಫ್‌ಗಳು ಮುಂದೆ ಆಯ್ದ ಸ್ಟಾರ್ಟ್ಅಪ್‌ಗಳಲ್ಲಿ ಹೂಡಿಕೆ ಮಾಡುತ್ತವೆ.
ಈ ನಿಧಿಯಿಂದ ಹಣ ಪಡೆಯುವ ಎಐಎಫ್‌ಗಳು ತಾವು ಪಡೆದ ಮೊತ್ತದ ಕನಿಷ್ಠ ಎರಡು ಪಟ್ಟು ಹಣವನ್ನು ಭಾರತೀಯ ಸ್ಟಾರ್ಟ್ಅಪ್‌ಗಳಲ್ಲಿ ಹೂಡಿಕೆ ಮಾಡುವುದು ಕಡ್ಡಾಯವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಖಾಸಗಿ ಹೂಡಿಕೆಯೂ ಹೆಚ್ಚಾಗುತ್ತದೆ ಎನ್ನಲಾಗಿದೆ.
ರೈತರು ಮತ್ತು ಯುವಕರಿಗೆ ಏನು ಪ್ರಯೋಜನ?
ಪ್ರಧಾನಿ ಮೋದಿಯವರ ನಾಲ್ಕು ಪ್ರಮುಖ ನಿರ್ಧಾರಗಳಲ್ಲಿ, ರೈತರು ಸಹ ಲಾಭ ಪಡೆಯಲಿದ್ದು, ಕೃಷಿ ಮೂಲಸೌಕರ್ಯ ನಿಧಿಯನ್ನು 1 ಲಕ್ಷ ಕೋಟಿ ರೂ.ಗಳಿಂದ 2 ಲಕ್ಷ ಕೋಟಿ ರೂ.ಗಳಿಗೆ ದ್ವಿಗುಣಗೊಳಿಸುವ ಪ್ರಸ್ತಾವನೆಗೆ ಪ್ರಧಾನಿ ಮೋದಿ ಶುಕ್ರವಾರ ಅನುಮೋದನೆ ನೀಡಿದ್ದಾರೆ. ಇದು ಕೃಷಿ ಪೂರೈಕೆ ಸರಪಳಿಯನ್ನು ಮತ್ತಷ್ಟು ಬಲಪಡಿಸುತ್ತದೆ.
ಪ್ರಧಾನಿ ಮೋದಿ 10,000 ಕೋಟಿ ರೂ.ಗಳ ನಿಧಿಯೊಂದಿಗೆ ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 ಅನ್ನು ಅನುಮೋದಿಸಿದರು. ಆರಂಭಿಕ ಹಂತಗಳಲ್ಲಿ ಪ್ರಗತಿಪರ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ಅಪ್‌ಗಳನ್ನು ಕೈಜೋಡಿಸುವುದು ಇದರ ಪ್ರಮುಖ ಗುರಿಯಾಗಿದೆ.
ಪ್ರಧಾನ ಮೋದಿಯವರು ತಮ್ಮ ಹೊಸ ಕಚೇರಿಯಿಂದ ತೆಗೆದುಕೊಂಡ ನಿರ್ಧಾರಗಳು ಅವರ ಸರ್ಕಾರದ ಪ್ರಮುಖ ಮಹತ್ವ ಕ್ಷೇತ್ರಗಳಾದ ಮಹಿಳಾ ಸಬಲೀಕರಣ, ಯುವಕರಿಗೆ ಬೆಂಬಲ ಮತ್ತು ರೈತರಿಗೆ ನೆರವಾಗುತ್ತದೆ(ಏಜೆನ್ಸೀಸ್).