CM Vijay | ಮುಖ್ಯಮಂತ್ರಿ ಜೋಸೆಫ್ ವಿಜಯ್
ಚೆನ್ನೈ: ತಮಿಳುನಾಡು ಗಡಿಯ ಸಮೀಪವಿರುವ ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲು ಕರ್ನಾಟಕ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಈ ಪತ್ರ ಬರೆದಿದ್ದು, ಈ ವಿಷಯದ ಕುರಿತು ಚರ್ಚಿಸಲು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ.
ದಶಕಗಳ ಇತಿಹಾಸವಿರುವ ಕಾವೇರಿ ನೀರು ಹಂಚಿಕೆ ವಿವಾದದ ಮಧ್ಯೆಯೇ, ರಾಮನಗರ ಜಿಲ್ಲೆಯ ಕನಕಪುರ ಸಮೀಪವಿರುವ ಮೇಕೆದಾಟು ಎಂಬಲ್ಲಿ ಸಮತೋಲನ ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಯೋಜಿಸಿದೆ. ಆದರೆ, ಕರ್ನಾಟಕದ ಈ ಕ್ರಮವು ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ತೀರ್ಪಿಗೆ ಹಾಗೂ ಅದನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಸಿಎಂ ವಿಜಯ್ ಪತ್ರದಲ್ಲಿ ತಿಳಿಸಿದ್ದಾರೆ
2018ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಕಾವೇರಿ ನದಿಯ ಮೇಲ್ಭಾಗದಲ್ಲಿರುವ ರಾಜ್ಯಗಳು ಕೆಳಭಾಗದಲ್ಲಿರುವ ರಾಜ್ಯಗಳ ಒಪ್ಪಿಗೆಯಿಲ್ಲದೆ ಯಾವುದೇ ಅಣೆಕಟ್ಟು ಅಥವಾ ಜಲಾಶಯಗಳನ್ನು ನಿರ್ಮಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕವು ಮೇಕೆದಾಟು ಅಣೆಕಟ್ಟು ನಿರ್ಮಿಸಬೇಕಾದರೆ ಕೆಳಹಂತದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.
ನ್ಯಾಯಾಧಿಕರಣವು ಅನುಮತಿ ನೀಡಿರುವ ಯೋಜನೆಗಳ ಪಟ್ಟಿಯಲ್ಲಿ ಮೇಕೆದಾಟು ಅಣೆಕಟ್ಟು ಸೇರಿಲ್ಲ ಮತ್ತು ಈ ಅಂಶವನ್ನು ಸುಪ್ರೀಂ ಕೋರ್ಟ್ ಕೂಡ ದೃಢಪಡಿಸಿದೆ ಎಂದು ವಿಜಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾವೇರಿ ಕಣಿವೆಯು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿರುವುದರಿಂದ ಮತ್ತು ಶೇಕಡಾ 50ರಷ್ಟು ವಿಶ್ವಾಸಾರ್ಹತೆಯಲ್ಲಿ ಲಭ್ಯವಿರುವ ನೀರನ್ನು ಈಗಾಗಲೇ ಸಂಬಂಧಪಟ್ಟ ರಾಜ್ಯಗಳಿಗೆ ಹಂಚಿಕೆ ಮಾಡಿರುವುದರಿಂದ, ಇಲ್ಲಿ ಹೆಚ್ಚುವರಿ ಬಳಕೆಗಾಗಲಿ ಅಥವಾ ಬೃಹತ್ ಸಂಗ್ರಹಣಾ ಜಲಾಶಯವನ್ನು ನಿರ್ಮಿಸುವುದಕ್ಕಾಗಲಿ ಯಾವುದೇ ಅವಕಾಶವಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರವು ಹೊಸ ಜಲಾಶಯ ನಿರ್ಮಿಸಲು ಪ್ರಸ್ತಾಪಿಸುತ್ತಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಸಿಎಂ ಜೋಸೆಫ್ ವಿಜಯ್, ಪ್ರಧಾನಿ ಮೋದಿ ಗಮನಕ್ಕೆ ತಂದಿದ್ದಾರೆ.
ಕಾವೇರಿ ನದಿ ಪಾತ್ರದ ಕೆಳಹಂತದ ಸಹ-ಕಣಿವೆ ರಾಜ್ಯಗಳ ಪೂರ್ವಾನುಮತಿ ಅಥವಾ ಒಪ್ಪಿಗೆಯನ್ನು ಪಡೆಯದೆ ಕರ್ನಾಟಕ ಸರ್ಕಾರವು ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು ಮತ್ತು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು ಎಂದು ಕರ್ನಾಟಕ ಸರ್ಕಾರಕ್ಕೆ ಸೂಕ್ತ ಸಲಹೆ ಹಾಗೂ ನಿರ್ದೇಶನ ನೀಡುವಂತೆ ಸಿಎಂ ವಿಜಯ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ(ಏಜೆನ್ಸೀಸ್).