Vande Mataram | ದೇ ಮೊದಲ ಬಾರಿಗೆ ವಂದೇ ಮಾತರಂನೊಂದಿಗೆ ಆರಂಭವಾದ ಲೋಕಸಭೆ ಕಲಾಪ! 
ದೇಶ

ಸಂಸತ್‌ನಲ್ಲಿ ಐತಿಹಾಸಿಕ ಕ್ಷಣ: ಇದೇ ಮೊದಲ ಬಾರಿಗೆ ವಂದೇ ಮಾತರಂನೊಂದಿಗೆ ಆರಂಭವಾದ ಲೋಕಸಭೆ ಕಲಾಪ! | Vande Mataram

ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ಲೋಕಸಭೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ವಂದೇ ಮಾತರಂನ (Vande Mataram) ಸಂಪೂರ್ಣ ಆರೂ ಚರಣಗಳನ್ನು ಪ್ರಸಾರ ಮಾಡುವ ಮೂಲಕ ಕಲಾಪವನ್ನು ಆರಂಭಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಸದನದ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ವಂದೇ ಮಾತರಂ ಗಾಯನ ನೆರವೇರಿದ ಬೆನ್ನಲ್ಲೇ, ಲೋಕಸಭೆ ಹಾಗೂ ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ (Sine Die) ಮುಂದೂಡಲಾಯಿತು.

ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಂದೇ ಮಾತರಂ ಗೀತೆಗೆ ಕಾನೂನಾತ್ಮಕ ರಕ್ಷಣೆ ನೀಡುವ ಮಸೂದೆಗೆ ಅಂಕಿತ ಹಾಕಿದ್ದರು. ರಾಷ್ಟ್ರಗೀತೆಯಂತೆ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದಕ್ಕೆ ಅಡ್ಡಿಪಡಿಸುವುದು ಅಥವಾ ಅವಮಾನಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ಈ ಕಾನೂನು ಘೋಷಿಸಿದೆ. ಕೇಂದ್ರ ಗೃಹ ಸಚಿವಾಲಯದ ಜನವರಿ 28ರ ನಿರ್ದೇಶನದಂತೆ, ರಾಷ್ಟ್ರಪತಿಗಳ ಆಗಮನ, ತ್ರಿವರ್ಣ ಧ್ವಜಾರೋಹಣ ಹಾಗೂ ರಾಜ್ಯಪಾಲರ ಭಾಷಣದಂತಹ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಆರೂ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಗದ್ದಲದಲ್ಲೇ ಅಂತ್ಯವಾಯ್ತು ಅಧಿವೇಶನ!..

ಜುಲೈ 20 ರಂದು ಆರಂಭವಾದ ಈ ಮುಂಗಾರು ಅಧಿವೇಶನವು ನಿರಂತರ ಗದ್ದಲ ಮತ್ತು ಸಭಾತ್ಯಾಗಕ್ಕೇ ಸಾಕ್ಷಿಯಾಯಿತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಆರೋಪಗಳು ಅಧಿವೇಶನದುದ್ದಕ್ಕೂ ತೀವ್ರ ಸದ್ದು ಮಾಡಿದವು. ಬುಧವಾರದಂದು ಗೃಹ ಸಚಿವ ಅಮಿತ್ ಷಾ ಅವರು ವಿದ್ಯಾರ್ಥಿಗಳ ಸಮಸ್ಯೆಯ ಕುರಿತು ಚರ್ಚೆಗೆ ಸಿದ್ಧವಿದ್ದು, ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ಹೇಳಿದ್ದರೂ ಸಹ, ಕೊನೆಯ ದಿನವೂ ವಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದವು. ಅಧಿವೇಶನದ ಕೊನೆಯ ದಿನವಾದ ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಓದುತ್ತಿದ್ದ ಸಮಾರೋಪ ಭಾಷಣವನ್ನು ಓದದೇ ನೇರವಾಗಿ ಅನಿರ್ದಿಷ್ಟಾವಧಿ ಮುಂದೂಡಿದರು.
ಸದನದ ಒಳಗಷ್ಟೇ ಅಲ್ಲದೆ, ಸಂಸತ್ ಸಂಕೀರ್ಣದ ಮಕರ ದ್ವಾರದ ಬಳಿ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಪ್ರತಿಭಟನಾ ಸಮರವೇ ನಡೆಯಿತು. ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಮೌನವಹಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿದರೆ, ವಿಪಕ್ಷಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದವು(ಏಜೆನ್ಸೀಸ್​).