Tejashwi Yadav | ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್  
ದೇಶ

ಬಂಧಿತ ವಿದ್ಯಾರ್ಥಿಗಳನ್ನು ತಕ್ಷಣವೇ ರಿಲೀಸ್ ಮಾಡಿ!...ಸರ್ಕಾರಕ್ಕೆ 24 ಗಂಟೆಗಳ ಅಂತಿಮ ಗಡುವು ನೀಡಿದ ತೇಜಸ್ವಿ ಯಾದವ್​ | Tejashwi Yadav

ಪಟನಾ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ (Tejashwi Yadav) ರಾಜ್ಯ ಸರ್ಕಾರಕ್ಕೆ 24 ಗಂಟೆಗಳ ಅಂತಿಮ ಗಡುವು ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನಾ ಚಳವಳಿ ಪ್ರಾರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ತೇಜಸ್ವಿ, ಅವರ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀಟ್ ಪೇಪರ್ ಲೀಕ್ ವಿರುದ್ಧ ಪ್ರತಿಭಟನೆ ನಡೆಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನಾವು ಜೈಕಾರ ಹಾಕುತ್ತೇವೆ. ಅವರು ತಮ್ಮ ಹಕ್ಕುಗಳು ಮತ್ತು ಉತ್ತಮ ಭವಿಷ್ಯಕ್ಕಾಗಿ ಹೋರಾಡಿದ್ದಾರೆ. ಇದಕ್ಕೆ ಎಲ್ಲಾ ವಿರೋಧ ಪಕ್ಷಗಳು ಬೆಂಬಲ ನೀಡಿದ್ದು, ಈ ನ್ಯಾಯಯುತ ಹೋರಾಟದಲ್ಲಿ ನಾವೂ ಸಹ ಭಾಗಿಯಾಗಿದ್ದೇವೆ ಎಂದು ಅವರು ಹೇಳಿದರು.

ಸರ್ಕಾರಕ್ಕೆ ತೇಜಸ್ವಿ ಯಾದವ್ ಅಂತಿಮ ಗಡುವು

ಬಿಹಾರ ಎನ್​ಡಿಎ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ ತೇಜಸ್ವಿ ಯಾದವ್, ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ದೆಹಲಿಯಲ್ಲಿ ನಿನ್ನೆ ನಿರ್ಧರಿಸಿದ್ದರೆ, ನಾನು ಸರ್ಕಾರಕ್ಕೆ ವಿನಂತಿ ಮಾತ್ರ ಮಾಡುತ್ತಿಲ್ಲ, ಸ್ಪಷ್ಟ ಎಚ್ಚರಿಕೆ ನೀಡುತ್ತಿದ್ದೇನೆ, ನಾಳೆಯೊಳಗೆ ಸಾವಿರಾರು ವಿದ್ಯಾರ್ಥಿಗಳ ಮೇಲಿನ ಎಲ್ಲಾ ಆರೋಪಗಳನ್ನು ಕೈಬಿಡಬೇಕು ಮತ್ತು ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು. ಒಂದು ವೇಳೆ ಈ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡದಿದ್ದರೆ, ನಾವು ಬೃಹತ್ ಮಟ್ಟದ ಪ್ರತಿಭಟನಾ ಚಳವಳಿಯನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.
ಮುಂದುವರಿದು ಮಾತನಾಡಿದ ತೇಜಸ್ವಿ, ಪ್ರಕರಣ ದಾಖಲಾಗಿರುವ ಎಲ್ಲರ ಕುರಿತು ನಿನ್ನೆ ಎಟುಕಿದ ಒಪ್ಪಂದದ ಬಗ್ಗೆ ದೊಡ್ಡ ಪ್ರಶ್ನೆ ಮೂಡುತ್ತದೆ. ಪ್ರತಿಭಟನೆಗಳು ನಡೆದ ವಿವಿಧ ರಾಜ್ಯಗಳಲ್ಲಿ ಸಾವಿರಾರು ಜನರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.

ಗುಂಡು ಹಾರಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ಪೊಲೀಸರ ವಿರುದ್ಧ ತಕ್ಷಣದ ಕ್ರಮಕ್ಕೆ ಆಗ್ರಹಿಸಿರುವ ಇದೇ ವೇಳೆ ಆರ್‌ಜೆಡಿ ನಾಯಕ, ರಾಜ್ಯದಲ್ಲಿ ಪೊಲೀಸರ ಅತಿಯಾದ ಬಲಪ್ರಯೋಗಕ್ಕೆ ಒಳಗಾಗಿ ಗಾಯಗೊಂಡಿದ್ದ ಸಂತ್ರಸ್ತ ವಿದ್ಯಾರ್ಥಿಗಳನ್ನು ಭೇಟಿಯಾಗಿ ಕ್ಷೇಮ ವಿಚಾರಿಸಿದರು.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಸಹ ಹಂಚಿಕೊಂಡಿರುವ ಅವರು, ಪೊಲೀಸ್ ಗುಂಡೇಟಿನಿಂದ ಗಾಯಗೊಂಡ ವಿದ್ಯಾರ್ಥಿ ಹಾಗೂ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಯು ಪ್ರಜೆಗಳ ಮೂಲಭೂತ ಹಕ್ಕಾಗಿದ್ದು, ಅದು ತಮ್ಮ ಅಸಮ್ಮತಿ ಹಾಗೂ ವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಅಂಕೆಯಿಲ್ಲದ ಅಧಿಕಾರವನ್ನು ಪ್ರಶ್ನಿಸಲು ಅವಕಾಶ ನೀಡುತ್ತದೆ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಬಿಹಾರ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ಒತ್ತಾಯಿಸಿದರು.
ಹಿಂಸಾಚಾರಕ್ಕೆ ತಿರುಗಿದ ಬಿಹಾರ ಬಂದ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಬಿಹಾರದ ಹಲವೆಡೆ ಕರೆಯ ನೀಡಲಾಗಿದ್ದ ರಾಜ್ಯವ್ಯಾಪಿ ಬಂದ್ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪಟನಾ, ಸಿವಾನ್, ಸರನ್, ಔರಂಗಾಬಾದ್ ಮತ್ತು ಭಾಗಲ್ಪುರಗಳಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದು, ಸಮಸ್ತಿಪುರ, ನವಾಡ ಮತ್ತು ನಳಂದಾಗಳಲ್ಲಿ ಬಂದ್ ಬಹುತೇಕ ಶಾಂತಿಯುತವಾಗಿತ್ತು.
ಪ್ರತಿಭಟನಾಕಾರರ ಮೇಲೆ ಪೊಲೀಸರು ನೇರ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತೇಜಸ್ವಿ ಆರೋಪಿಸಿದ್ದಾರೆ. ಸಿವಾನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಎಕೆ-47 ನಿಂದ ನೇರ ಗುಂಡಿನ ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಮುಖ್ಯಮಂತ್ರಿಯಾದಾಗ, ಪೊಲೀಸರು ಹೀಗೆ ನಿರ್ದೋಷಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುತ್ತಾರೆ ಎಂದು ತೇಜಸ್ವಿ ವಿಡಿಯೋ ಸಂದೇಶದಲ್ಲಿ ಕಿಡಿಕಾರಿದ್ದಾರೆ.

ಹೋರಾಟ ಹಿಂಪಡೆದ ಸಿಜೆಪಿ!

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಆದ್ದರಿಂದ ಪ್ರತಿಭಟನಾಕಾರರು ತಕ್ಷಣವೇ ಜಾಗವನ್ನು ಖಾಲಿ ಮಾಡಿ ಶಾಂತಿಯುತವಾಗಿ ಮನೆಗೆ ಮರಳುವಂತೆ ವಿನಂತಿಸುತ್ತೇವೆ. ನಮ್ಮ ಮುಂದಿನ ಕಾರ್ಯತಂತ್ರ ಅಥವಾ ಇತರ ವಿಷಯಗಳ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇವೆ. ಆದರೆ ಸದ್ಯಕ್ಕೆ ಎಲ್ಲರೂ ತಕ್ಷಣವೇ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಮನವಿ ಮಾಡಿದ್ದಾರೆ(ಏಜೆನ್ಸೀಸ್​).