Vijay Karur Visit |ಸಿಎಂ ಆದ ಬಳಿಕ ಮೊದಲ ಬಾರಿಗೆ ಕರೂರ್‌ಗೆ ವಿಜಯ್ ಎಂಟ್ರಿ!
ಕರೂರ್: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿ. ಜೋಸೆಫ್ ವಿಜಯ್, ಮೊದಲ ಬಾರಿಗೆ ಕರೂರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ (Vijay Karur Visit). ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಅವರು ಈ ಭೇಟಿ ಹಮ್ಮಿಕೊಂಡಿದ್ದಾರೆ. ಆದರೆ, ಈ ಪರಿಹಾರ ಕ್ರಮಗಳನ್ನು ಟಿವಿಕೆ ಸರ್ಕಾರವು ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಟಿವಿಕೆ ರ್ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ತಮ್ಮ ಆಪ್ತರನ್ನು ಕಳೆದುಕೊಂಡ 32 ಕುಟುಂಬಗಳ ಅರ್ಹ ಸದಸ್ಯರಿಗೆ ಸಿಎಂ ವಿಜಯ್ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೇಮಕಾತಿ ಆದೇಶ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ. ರಾಜ್ಯದ ಪುನರ್ವಸತಿ ಪರಿಹಾರ ಯೋಜನೆಯ ಭಾಗವಾಗಿ, ಸಂತ್ರಸ್ತ ಪ್ರತಿಯೊಂದು ಕುಟುಂಬದ ಒಬ್ಬ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ.
ವಿಜಯ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಮುನ್ನ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ತ ಕುಟುಂಬಗಳ ಸದಸ್ಯರೊಂದಿಗೆ ಖುದ್ದಾಗಿ ಸಂವಾದ ನಡೆಸಲಿದ್ದಾರೆ ಎಂದು ವರದಿಯಾಗಿದೆ.
13,500 ಉದ್ಯೋಗ ಸೃಷ್ಟಿಸಲಿರುವ ಬೃಹತ್ ಯೋಜನೆ
ತಮ್ಮ ಪ್ರವಾಸದ ಅವಧಿಯಲ್ಲಿ ಮುಖ್ಯಮಂತ್ರಿಗಳು 1,700 ಕೋಟಿ ರೂಪಾಯಿ ವೆಚ್ಚದ ಪಾದರಕ್ಷೆ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆ ಸುಮಾರು 13,500 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದ್ದು, ಈ ಭಾಗದ ಕೈಗಾರಿಕಾ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ದೊರೆತ ಬಹುದೊಡ್ಡ ಬೆಂಬಲ ಎಂದು ಬಿಂಬಿಸಲಾಗುತ್ತಿದೆ.
ಮುಖ್ಯಮಂತ್ರಿಯವರ ಈ ಭೇಟಿಯು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಕೆಲಸ ನೀಡುವ ನಿರ್ಧಾರವನ್ನು ಸ್ವಾಗತಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಆದರೆ ಈ ನಡೆ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ಕರೂರ್‌ಗೆ ಹೋಗುತ್ತಿರುವುದು ಸ್ವಾಗತಾರ್ಹ. ಆದರೆ, ದುರಂತ ಸಂಭವಿಸಿದ ತಕ್ಷಣವೇ ಜಿಲ್ಲೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರೆ ಅದಕ್ಕೆ ಹೆಚ್ಚಿನ ಗೌರವ ಮತ್ತು ಅರ್ಥವಿರುತ್ತಿತ್ತು ಎಂದು ನಾಗೇಂದ್ರನ್ ಹೇಳಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಕೆಲಸ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಆ ಘಟನೆ ನಡೆದ ತಕ್ಷಣವೇ ಅಲ್ಲಿಗೆ ಹೋಗಿದ್ದರೆ ಅದಕ್ಕೊಂದು ಬೆಲೆ ಇರುತ್ತಿತ್ತು. ಈಗಿನ ಈ ನಡೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ ಎಂದಿರುವ ನಾಗೇಂದ್ರನ್, ಕರೂರ್ ಶಾಸಕರ ರಾಜೀನಾಮೆ ವಿಚಾರವನ್ನೂ ಪ್ರಸ್ತಾಪಿಸಿದರು.
ಕರೂರ್‌ನಲ್ಲಿ ಬಿಗಿ ಬಂದೋಬಸ್ತ್!...
ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಕರೂರ್‌ನಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಜನಸಂದಣಿ ನಿಯಂತ್ರಣ, ಸಂಚಾರ ನಿರ್ವಹಣೆ ಮತ್ತು ತುರ್ತು ಸ್ಪಂದನೆಗಾಗಿ 5,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳೆದ ವರ್ಷದ ದುರಂತವನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇವಲ 5,000 ಜನರಿಗೆ ಮಾತ್ರ ಅವಕಾಶ ಸೀಮಿತಗೊಳಿಸಲಾಗಿದೆ. ಕ್ಯೂಆರ್ ಕೋಡ್ ಆಧಾರಿತ ಪಾಸ್‌ಗಳನ್ನು ಹೊಂದಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಕಳೆದ ವರ್ಷ ನಡೆದ ದುರಂತದ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ನಿರ್ಗಮನ ಮಾರ್ಗಗಳು, ವೈದ್ಯಕೀಯ ಸಿದ್ಧತೆಗಳು ಮತ್ತು ಜನಸಂದಣಿ ನಿಯಂತ್ರಣ ವ್ಯವಸ್ಥೆಗಳನ್ನು ಸಮಗ್ರವಾಗಿ ಪರಿಶೀಲಿಸಿದ್ದಾರೆ(ಏಜೆನ್ಸೀಸ್).