ಈ ತಿಂಗಳಲ್ಲಿ ಹೇಗಿರಲಿದೆ ಮಳೆ, ಚಳಿ? ಎಲ್​ನಿನೋ ಎಫೆಕ್ಟ್​ಗೆ ತತ್ತರಿಸಿರೋ ಜನಕ್ಕೆ ಐಎಂಡಿ ಕೊಟ್ಟ ಉತ್ತರವಿದು  
ದೇಶ

ಈ ತಿಂಗಳಲ್ಲಿ ಹೇಗಿರಲಿದೆ ಮಳೆ, ಚಳಿ? ಎಲ್​ನಿನೋ ಎಫೆಕ್ಟ್​ಗೆ ತತ್ತರಿಸಿರೋ ಜನಕ್ಕೆ ಹೀಗಿದೆ ಐಎಂಡಿ ಹೊಸ ವರದಿ | October Rains

ಇದು ಮುಂದಿನ ವರ್ಷ ದೇಶದ ಜನತೆ ಭೀಕರ ಬರಗಾಲ ಎದುರಿಸುವ ಮುನ್ಸೂಚನೆಯನ್ನು ನೀಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆಯು, ಅಕ್ಟೋಬರ್ ತಿಂಗಳ ಹವಾಮಾನ ಹೇಗಿರಲಿದೆ ಎಂಬುದರ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ.

ನವದೆಹಲಿ: ದೇಶದಲ್ಲಿ ಎಲ್​ನಿನೋ, ಸೂಪರ್​ ನಿನೋ ಮತ್ತು ಗಾಡ್ಜಿಲ್ಲ ನಿನೋ ಎಂಬ ಹವಾಮಾನ ವೈಪರೀತ್ಯಗಳು ಇದೀಗ ಭೀಕರ ಬರಗಾಲದ ಪರಿಸ್ಥಿತಿ ಕಾಡಲು ಅತಿದೊಡ್ಡ ಕಾರಣವಾಗಿದೆ. ಈ ವರ್ಷದ ಜೂನ್​ ಕೊನೆಯಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆಯ ಆಗಮನಕ್ಕೆ ಯಾವಾಗ ಕೊಡಲಿ ಪೆಟ್ಟು ಬಿದ್ದಿತೋ, ಅಂದಿನಿಂದ ಇಲ್ಲಿಯವರೆಗೆ ಮಳೆಯ ಕೊರತೆ ವಿಪರೀತಗೊಂಡಿದೆ. ಮಳೆಗಾಲದಲ್ಲೂ ಬೇಸಿಗೆ ಬೇಗೆ ಕಾಡಲಾರಂಭಿಸಿರುವುದೇ ಇದಕ್ಕೆ ಜ್ವಲಂತ ಸಾಕ್ಷಿ ಎನ್ನಬಹುದು.

ವಾಡಿಕೆಗಿಂತ ಕಡಿಮೆ ಮಳೆ ದಾಖಲು

ಜೂನ್,​ ಜುಲೈ, ಆಗಸ್ಟ್​ ಮತ್ತು ಸೆಪ್ಟೆಂಬರ್​ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಬೇಕಿತ್ತು. ಆದರೆ, ಕರಾವಳಿ ಮತ್ತು ಮಲೆನಾಡಿನಂತ ಭಾಗಗಳಲ್ಲೇ ವಾಡಿಕೆಗಿಂತಲೂ ಕಡಿಮೆ ಪ್ರಮಾಣದ ಮಳೆ ಬಿದ್ದಿರುವುದು ಸದ್ಯ ಕಳವಳ ಹಾಗೂ ಆತಂಕ ಮೂಡಿಸಿದೆ. ಇದು ಮುಂದಿನ ವರ್ಷ ದೇಶದ ಜನತೆ ಭೀಕರ ಬರಗಾಲ ಎದುರಿಸುವ ಮುನ್ಸೂಚನೆಯನ್ನು ನೀಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆಯು, ಅಕ್ಟೋಬರ್ ತಿಂಗಳ ಹವಾಮಾನ ಹೇಗಿರಲಿದೆ ಎಂಬುದರ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ.

ಎಲ್ ನಿನೋ ಎಫೆಕ್ಟ್​

ಹೊಸ ವರದಿಯ ಪ್ರಕಾರ, ಈ ವರ್ಷದ ಅಕ್ಟೋಬರ್‌ನಲ್ಲಿಯೂ ಸಾಧಾರಣ ಮಳೆಯ ಸಾಧ್ಯತೆಯು ಕಡಿಮೆ. ಸಾಮಾನ್ಯವಾಗಿ ತಂಪಾಗಿರುವ ಅಕ್ಟೋಬರ್ ತಿಂಗಳು, ಈ ಬಾರಿ ಒಣ ಹವಾಮಾನದ ಅವಧಿಯಂತೆ ಭಾಸವಾಗಬಹುದು. ಸಾಗರಗಳಲ್ಲಿ ಉಂಟಾಗಿರುವ ಬದಲಾವಣೆಗಳೇ ಈ ಪರಿಸ್ಥಿತಿಗೆ ಮುಖ್ಯ ಕಾರಣ. ಪ್ರಸ್ತುತ, ಸಮಭಾಜಕ ಪೆಸಿಫಿಕ್ ಸಾಗರದ ಮೇಲೆ ಪ್ರಬಲವಾದ ಎಲ್ ನಿನೋ ಪರಿಸ್ಥಿತಿಗಳು ಕಂಡುಬರುತ್ತಿವೆ. ಈ ವರ್ಷದ ಅಂತ್ಯದವರೆಗೆ ಎಲ್ ನಿನೋ ಪರಿಸ್ಥಿತಿಗಳು ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಮತ್ತೊಂದೆಡೆ, ಹಿಂದೂ ಮಹಾಸಾಗರದ ಮೇಲೆ ಸದ್ಯ ತಟಸ್ಥ ಇಂಡಿಯನ್ ಓಷನ್ ಡೈಪೋಲ್ (IOD) ಸ್ಥಿತಿಯಿದೆ ಮತ್ತು ಮುಂಬರುವ ಈಶಾನ್ಯ ಮಾನ್ಸೂನ್ ಅವಧಿಯಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಸಾಗರ ಸಂಬಂಧಿತ ಹವಾಮಾನ ಪರಿಸ್ಥಿತಿಗಳ ಪ್ರಭಾವದಿಂದಾಗಿ, ಅಲ್ಲದೆ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಇರುವ ಚಳಿಗಾಲದ ಆರಂಭಿಕ ಅವಧಿಯಲ್ಲೂ ಒಟ್ಟು ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆ ಇರಬಹುದು ಎನ್ನಲಾಗಿದೆ.

ಅಕ್ಟೋಬರ್​ ಟು ಡಿಸೆಂಬರ್‌ವರೆಗಿನ ಚಳಿಗಾಲದ ಅವಧಿಯಲ್ಲಿ ಭಾರತದ ಹೆಚ್ಚಿನ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಆದರೆ, ನೈಋತ್ಯ ಮುಂಗಾರಿನಲ್ಲಿ ಮಳೆ ಕೊರತೆ ಎದುರಿಸಿದ್ದ ಪಂಜಾಬ್, ಹರಿಯಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಈ ಬಾರಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಮುಂಗಾರು ಅವಧಿಯಲ್ಲಿ ವರುಣನ ಅಭಾವ ಎದುರಿಸಿದ್ದ ಈ ಪ್ರದೇಶಗಳಿಗೆ ಮುಂಬರುವ ಚಳಿಗಾಲದ ಮಳೆಯು ದೊಡ್ಡ ಮಟ್ಟದ ರಿಲೀಫ್ ನೀಡುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ,(ಏಜೆನ್ಸೀಸ್).