ದೆಹಲಿ: ಟಿಎಂಸಿ ಸಂಸದರೊಬ್ಬರು ಸದನದೊಳಗೆ ಇ-ಸಿಗರೇಟ್ ಸೇದುತ್ತಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೆಲ ದಿನಗಳ ಬಳಿಕ, ಹೇಳಿಕೆಗೆ ಪುಷ್ಠಿ ನೀಡುವ ವಿಡಿಯೋವನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಬುಧವಾರ ಹಂಚಿಕೊಂಡಿದ್ದು, ಟಿಎಂಸಿ ಸಂಸದ ಕೀರ್ತಿ ಆಜಾದ್ ಕಲಾಪದ ಸಮಯದಲ್ಲಿ ವೇಪಿಂಗ್ ಮಾಡುತ್ತಿರುವುದು ಇದರಲ್ಲಿ ಕಂಡುಬಂದಿದೆ.
ಸುಮಾರು 35 ಸೆಕೆಂಡುಗಳ ಈ ವಿಡಿಯೋದಲ್ಲಿ ಆಜಾದ್ ಲೋಕಸಭೆಯೊಳಗೆ ಕುಳಿತು ಧೂಮಪಾನ ಮಾಡುವಂತೆ ಕಾಣುವ ಸನ್ನೆಯನ್ನು ಮಾಡುತ್ತಿದ್ದರು, ಅವರು ತಮ್ಮ ಬಲಗೈಯನ್ನು ಬಾಯಿಗೆ ತಂದು ಸುಮಾರು ಐದು ಸೆಕೆಂಡುಗಳ ಕಾಲ ಅದನ್ನು ಹಾಗೆಯೇ ಹಿಡಿದಿದ್ದರು. ಬಿಜೆಪಿ ನಾಯಕರು ಹಂಚಿಕೊಂಡಿರುವ ಕ್ಲಿಪ್‌ನಲ್ಲಿ ಸಿಗರೇಟ್, ಇ-ಸಿಗರೇಟ್ ಅಥವಾ ಯಾವುದೇ ಹೊಗೆ ಕಾಣುತ್ತಿಲ್ಲ.
ಸಂಸತ್ತಿನ ಪಾವಿತ್ರ್ಯಕ್ಕೆ ದಕ್ಕೆ ತಂದಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ ತೃಣಮೂಲ ಸಂಸದ ಬೇರೆ ಯಾರೂ ಅಲ್ಲ, ಅದು ಕೀರ್ತಿ ಆಜಾದ್. ಇವರಂತಹ ಜನರಿಗೆ, ನಿಯಮಗಳು ಮತ್ತು ಕಾನೂನುಗಳು ಸ್ಪಷ್ಟವಾಗಿ ಅರ್ಥಹೀನವಾಗಿವೆ. ಸದನದಲ್ಲಿದ್ದಾಗ ತನ್ನ ಅಂಗೈಯಲ್ಲಿ ಇ-ಸಿಗರೇಟ್ ಅನ್ನು ಮರೆಮಾಡಿಕೊಂಡು ಸೇದುವ ಧೈರ್ಯವನ್ನು ನೀವು ಊಹಿಸಿ!. ಧೂಮಪಾನ ಕಾನೂನುಬಾಹಿರವಲ್ಲದಿರಬಹುದು ಆದರೆ ಸಂಸತ್ತಿನಲ್ಲಿ ಅದನ್ನು ಬಳಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಮ್ಮ ಸಂಸದರ ದುರ್ನಡತೆಯ ಬಗ್ಗೆ ಸ್ಪಷ್ಠಿಕರಣ ನೀಡಲಿ ಎಂದು ಮಾಳವೀಯ ಬರೆದುಕೊಂಡಿದ್ದಾರೆ.
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪ
ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ಲೋಕಸಭೆಯ ಆವರಣದೊಳಗೆ ಇ-ಸಿಗರೇಟ್ ಅಥವಾ ವೇಪ್ ಸೇದುತ್ತಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದರು. ಯಾವ ಸದಸ್ಯರ ಹೆಸರನ್ನು ಉಲ್ಲೇಖಿಸದೆ ಈ ವಿಷಯವನ್ನು ಪ್ರಸ್ತಾಪಿಸಿದ್ದ ಠಾಕೂರ್, ಉಲ್ಲಂಘನೆಯನ್ನು ಗಮನಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು.
ಇಡೀ ದೇಶದಲ್ಲಿ ಇ-ಸಿಗರೇಟ್‌ಗಳನ್ನು ನಿಷೇಧಿಸಲಾಗಿದೆ, ಹೀಗಿದ್ದಾಗ ಲೋಕಸಭೆಯ ಸ್ಪೀಕರ್ ಸದನದಲ್ಲಿ ಇ-ಸಿಗರೇಟ್ ಸೇದಲು ಅವರು ಅನುಮತಿ ನೀಡಿದ್ದಾರೆಯೇ ಎಂದು ಕೇಳಲು ಬಯಸುತ್ತೇನೆ. ಟಿಎಂಸಿ ಸಂಸದರೊಬ್ಬರು ಇಲ್ಲಿ ಅನೇಕ ದಿನಗಳಿಂದ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಠಾಕೂರ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿರ್ಲಾ, ಸಂಸತ್ ಸದಸ್ಯರು ಸದನದೊಳಗೆ ಧೂಮಪಾನ ಮಾಡಲು ಅನುಮತಿಸುವ ನಿಯಮ ಅಥವಾ ಪೂರ್ವನಿದರ್ಶನವಿಲ್ಲ ಎಂದು ಹೇಳಿದರು. ಅಂತಹ ಘಟನೆಯನ್ನು ಸ್ಪಷ್ಟ ಸಾಕ್ಷಿಯೊಂದಿಗೆ0 ನನ್ನ ಗಮನಕ್ಕೆ ತಂದರೆ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಏನಿದು ಇ-ಸಿಗರೇಟ್..?
ಇ-ಸಿಗರೇಟ್‌ಗಳು ಎಲೆಕ್ಟ್ರಾನಿಕ್ ಸಾಧನಗಳಾಗಿದ್ದು, ಬಳಕೆದಾರರು ಉಸಿರಾಡುವ ಏರೋಸಾಲ್ನ್ನು ಉತ್ಪಾದಿಸಲು ದ್ರವವನ್ನು ಬಿಸಿ ಮಾಡುತ್ತವೆ. ಈ ದ್ರವವು ಸಾಮಾನ್ಯವಾಗಿ ನಿಕೋಟಿನ್, ಸುವಾಸನೆ ನೀಡುವ ಏಜೆಂಟ್‌ಗಳು ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುತ್ತದೆ. ಸಾಂಪ್ರದಾಯಿಕ ಸಿಗರೇಟ್‌ಗಳಿಗಿಂತ ಭಿನ್ನವಾಗಿ, ಇ-ಸಿಗರೇಟ್‌ಗಳು ತಂಬಾಕನ್ನು ಸುಡುವುದಿಲ್ಲ, ಆದರೆ ಅವು ಇನ್ನೂ ನಿಕೋಟಿನ್ ಅನ್ನು ನೀಡುತ್ತವೆ, ಇದು ವ್ಯಸನಕಾರಿಯಾಗಿದೆ ಮತ್ತು ಬಳಕೆದಾರರಿಗೆ ಹಾನಿಕಾರಕವಾಗಿದೆ. ಇದನ್ನು ಬಳಸುವುದರಿಂದ ಅಪಾಯಗಳು ಎದುರಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದರೂ ಕೂಡ ಅವುಗಳನ್ನು ಧೂಮಪಾನಕ್ಕೆ ಪರ್ಯಾಯವಾಗಿ ಮಾರಾಟ ಮಾಡಲಾಗುತ್ತದೆ(ಏಜೆನ್ಸೀಸ್).