Anil Kumar Rastogi > ಪ್ರಧಾನಿ ಮೋದಿ ವಿಡಿಯೋ ಟ್ರೋಲ್ ಮಾಡಿದವರಿಗೆ ನಟ ರಸ್ತೋಗಿ ತಿರುಗೇಟು  
ದೇಶ

ದೇಶ ಮುನ್ನಡೆಸಲು ಅವರೇ ಬೆಸ್ಟ್!.. ಪ್ರಧಾನಿ ಮೋದಿ ವಿಡಿಯೋ ಟ್ರೋಲ್ ಮಾಡಿದವರಿಗೆ ನಟ ರಸ್ತೋಗಿ ತಿರುಗೇಟು | Anil Kumar Rastogi

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಗಮಿಸಿದ ಹಿರಿಯ ನಟ ಡಾ. ಅನಿಲ್ ಕುಮಾರ್ ರಸ್ತೋಗಿ (Anil Kumar Rastogi) ಅವರು, ಪ್ರಧಾನಿ ಮೋದಿ ಹ್ಯಾಂಡ್‌ಶೇಕ್ ಮಾಡಲು ಕೈ ಚಾಚಿದಾಗ ಅದನ್ನು ಗಮನಿಸದೇ ಕೈಮುಗಿದು ಮುಂದೆ ಸಾಗಿದ್ದರು.
ಈ ವಿಡಿಯೋವನ್ನು ಬಳಸಿಕೊಂಡ ತೃಣಮೂಲ ಕಾಂಗ್ರೆಸ್ (TMC) ಸಂಸದ ಸಾಕೇತ್ ಗೋಖಲೆ ಸೇರಿದಂತೆ ಹಲವರು, ಇದು ಮೋದಿಯವರ ಇವೆಂಟ್ ಮ್ಯಾನೇಜ್‌ಮೆಂಟ್ ಫೇಲ್ಯೂರ್ ಎಂದು ಲೇವಡಿ ಮಾಡಿದ್ದರು.
ಈ ವಿಡಿಯೋ ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿರುವವರಿಗೆ 80 ವರ್ಷದ ಪದ್ಮಶ್ರೀ ಪುರಸ್ಕೃತ ನಟ ಅನಿಲ್ ಕುಮಾರ್ ರಸ್ತೋಗಿ ಬುಧವಾರ ತಿರುಗೇಟು ನೀಡಿದ್ದಾರೆ. ಸಾಕೇತ್ ಗೋಖಲೆ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅವರು, ನನ್ನನ್ನು ತಮಾಷೆ ಮಾಡುತ್ತಿರುವವರೆಲ್ಲರಿಗೂ ಒಂದು ಮಾತು, ನನಗೆ ಈಗ 80 ವರ್ಷ ದಾಟಿದೆ. ನನ್ನ ವಯಸ್ಸಿನ ಕಾರಣದಿಂದಾಗಿ ಅಲ್ಲಿ ಆ ರೀತಿ ಗಮನಿಸದೇ ಇರುವುದು ನಡೆದುಹೋಗಿದೆ. ನನಗೆ ನಮ್ಮ ಪ್ರಧಾನಿ ಮೇಲೆ ಅಪಾರ ಗೌರವವಿದೆ. ಪ್ರಸ್ತುತ ದೇಶವನ್ನು ಮುನ್ನಡೆಸಲು ಅವರೇ ಅತ್ಯುತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ ಎಂದು ಬರೆಯುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
ಯಾರು ಈ ಅನಿಲ್ ಕುಮಾರ್ ರಸ್ತೋಗಿ..?
ರಂಗಭೂಮಿ, ಸಿನಿಮಾ, ರೇಡಿಯೋ ಮತ್ತು ಕಿರುತೆರೆ ಲೋಕಕ್ಕೆ ನೀಡಿರುವ ಅಪಾರ ಕೊಡುಗೆಗಾಗಿ ಡಾ. ಅನಿಲ್ ಕುಮಾರ್ ರಸ್ತೋಗಿ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಸುಮಾರು 100 ನಾಟಕಗಳ 1000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. 75 ಕ್ಕೂ ಹೆಚ್ಚು ಚಲನಚಿತ್ರಗಳು ಹಾಗೂ 500 ಕ್ಕೂ ಹೆಚ್ಚು ಟಿವಿ ಧಾರಾವಾಹಿ ಸಂಚಿಕೆಗಳಲ್ಲಿ ನಟಿಸಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೆ, ಇವರು 78ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಸಹ-ಬರಹಗಾರರಾಗಿ ಪ್ರಕಟಿಸಿರುವ ಒಬ್ಬ ಯಶಸ್ವಿ ವಿಜ್ಞಾನಿಯೂ ಹೌದು. ಜೊತೆಗೆ ಅನಾಥ ರೋಗಿಗಳಿಗೆ ನೆರವಾಗುವ ದೊಡ್ಡ ಸಮಾಜಸೇವಕರಾಗಿದ್ದಾರೆ.

ರೋಹಿತ್ ಶರ್ಮಾ, ಮಮ್ಮುಟ್ಟಿಗೂ ಪದ್ಮಶ್ರೀ ಗೌರವ

ಮಂಗಳವಾರ ನಡೆದ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಿಲ್ ಕುಮಾರ್ ರಸ್ತೋಗಿ ಅವರಲ್ಲದೆ ಟೆನಿಸ್ ದಂತಕಥೆ ವಿಜಯ್ ಅಮೃತರಾಜ್, ಹಿರಿಯ ನಟರಾದ ಮಮ್ಮುಟ್ಟಿ, ಸತೀಶ್ ಶಾ, ಭಾರತ ಕ್ರಿಕೆಟ್ ತಂಡದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ ಮತ್ತು ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಸೇರಿದಂತೆ ಹಲವು ಗಣ್ಯರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಈ ವರ್ಷದ ಗಣರಾಜ್ಯೋತ್ಸವದ ಮುನ್ನಾದಿನದಂದು ಕೇಂದ್ರ ಸರ್ಕಾರ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ಮೇ 25 ರಂದು ನಡೆದ ಮೊದಲ ಸಮಾರಂಭದಲ್ಲಿ 65 ಪ್ರಶಸ್ತಿಗಳನ್ನು ನೀಡಲಾಗಿದ್ದು, ಉಳಿದ 65 ಪ್ರಶಸ್ತಿಗಳನ್ನು ಮಂಗಳವಾರ ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ಪ್ರದಾನ ಮಾಡಲಾಯಿತು(ಏಜೆನ್ಸೀಸ್​).