Asish Banerjee | ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಟಿಎಂಸಿ ನಾಯಕ ಆಶಿಶ್ ಬ್ಯಾನರ್ಜಿ
ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಡೆಪ್ಯೂಟಿ ಸ್ಪೀಕರ್ ಆಶಿಶ್ ಬ್ಯಾನರ್ಜಿ (Asish Banerjee) ಅವರು ಭಾನುವಾರ ಬೆಳಿಗ್ಗೆ ರಾಜ್ಯದ ಬೀರ್‌ಭೂಮ್ ಜಿಲ್ಲೆಯ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಜಿ ಸಚಿವರಾಗಿದ್ದ ಬ್ಯಾನರ್ಜಿ, ರಾಂಪುರ್‌ಹಾಟ್ ಕ್ಷೇತ್ರದಿಂದ 2001 ರಿಂದ 2026 ರವರೆಗೆ ಸತತ 25 ವರ್ಷಗಳ ಕಾಲ ಪ್ರತಿನಿಧಿಸಿ, ಐದು ಬಾರಿ ಶಾಸಕರಾಗಿದ್ದರು.
ಆಶಿಶ್ ಬ್ಯಾನರ್ಜಿ ಅವರು ಇತ್ತೀಚೆಗೆ ನಡೆದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಧ್ರುವ ಸಹಾ ವಿರುದ್ಧ ಸೋಲನುಭವಿಸಿದ್ದರು. ರಾಂಪುರ್‌ಹಾಟ್‌ನಲ್ಲಿರುವ ನಿವಾಸಕ್ಕೆ ಹೊಂದಿಕೊಂಡಿರುವ ಟಿಎಂಸಿ ಕಚೇರಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದ ಬಳಿಕ ಈ ಘಟನೆ ಸಂಭವಿಸಿದೆ.
ಘಟನಾ ಸ್ಥಳದಲ್ಲಿ ಡೆತ್‌ನೋಟ್ ಕೂಡ ದೊರೆತಿದ್ದು, ಆ ಪತ್ರದಲ್ಲಿ, ಬ್ಯಾನರ್ಜಿ ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಳ್ಳುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ತಾರಾಪೀಠ್ ರಾಂಪುರ್‌ಹಾಟ್ ಅಭಿವೃದ್ಧಿ ಪ್ರಾಧಿಕಾರದ (TRDA) ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯೋಜನೆ ಮತ್ತು ಅಭಿವೃದ್ಧಿ ಸಂಸ್ಥೆಯ ಟೆಂಡರ್ ಸಂಬಂಧಿತ ನಿರ್ಧಾರಗಳು, ಚೆಕ್ ವಿತರಣೆ, ಪ್ಲಾನ್ ಅನುಮೋದನೆಗಳು ಅಥವಾ ನಿರಾಕ್ಷೇಪಣಾ ಪತ್ರಗಳ ವಿತರಣೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದಿರುವ ಬ್ಯಾನರ್ಜಿ, ತಮ್ಮನ್ನು ಈ ಹಗರಣದಲ್ಲಿ ಸಿಲುಕಿಸುವ ಮತ್ತು ಅವಮಾನಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ರಾಜಕೀಯ ಪ್ರವೇಶಿಸಿದ್ದೇ ದೊಡ್ಡ ತಪ್ಪು ಎಂದಿರುವ ಅವರು, ಪಕ್ಷದೊಳಗಿನ ತಪ್ಪುಗಳನ್ನು ಪ್ರತಿಭಟಿಸಲು ಸಾಧ್ಯವಾಗಲಿಲ್ಲ ಎಂದೂ ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಚುನಾವಣಾ ಸೋಲಿನ ನಂತರ ಬ್ಯಾನರ್ಜಿ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಪಕ್ಷದ ಮೂಲಗಳನ್ನು ಆಧರಿಸಿ ಪಿಟಿಐ ವರದಿ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಸರ್ಕಾರ ರಚಿಸುವುದರೊಂದಿಗೆ, ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತ ಮುಕ್ತಾಯಗೊಂಡು ಅಧಿಕಾರ ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ಈ ಘಟನೆ ಸಂಭವಿಸಿದೆ. ಟಿಎಂಸಿ ಸೋಲಿನ ಬಳಿಕ ಹಲವಾರು ನಾಯಕರು ಮತ್ತು ಶಾಸಕರು ಭ್ರಷ್ಟಾಚಾರ ಸಂಬಂಧಿತ ತನಿಖೆಗಳು ಮತ್ತು ಬಂಧನಗಳನ್ನು ಎದುರಿಸುತ್ತಿದ್ದಾರೆ. ಬ್ಯಾನರ್ಜಿ ಸಾವಿಗೆ ಕಾರಣವಾದ ನಿಖರವಾದ ಅಂಶಗಳೇನು ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ(ಏಜೆನ್ಸೀಸ್).