Stone Quarry  
ದೇಶ

ಒಡಿಶಾದಲ್ಲಿ ಅಕ್ರಮ ಕಲ್ಲು ಕ್ವಾರಿ ಸ್ಫೋಟ: ಇಬ್ಬರು ಕಾರ್ಮಿಕರು ದುರ್ಮರಣ; ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ! Stone Quarry

ಪ್ರಮುಖ ಮುಖ್ಯಾಂಶಗಳು

  • ಓಡಿಶಾದ ಅಕ್ರಮ ಕಲ್ಲು ಕ್ವಾರಿಯಲ್ಲಿ ಸ್ಪೋಟ
  • ಇಬ್ಬರು ಮರಣ; ಹಲವಾರು ಕಾರ್ಮಿಕರು ಸಿಲುಕಿರುವ ಶಂಕೆ
  • ಬೃಹತ್​ ಯಂತ್ರೋಪಕರಣಗಳು, ಶ್ವಾನದಳ ಸ್ಥಳಕ್ಕೆ ಆಗಮನ
ಒಡಿಶಾ: ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ಶನಿವಾರ(ಜ.3) ತಡರಾತ್ರಿ ಅಕ್ರಮ ಕಲ್ಲು ಕ್ವಾರಿ (Stone Quarry) ಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವಾರು ಕಾರ್ಮಿಕರು ಸಿಲುಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಗೋಪಾಲ್‌ಪುರ ಗ್ರಾಮದ ಬಳಿಯ ಕ್ವಾರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದ್ದು, ಈ ಕ್ವಾರಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ತಡರಾತ್ರಿ ಬೆಳಕಿಗೆ ಬಂದಿದ್ದು, ಸ್ಥಳೀಯ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುರಕ್ಷಿತಗೊಳಿಸಲು ಕಾರ್ಯಪ್ರವರ್ತರಾಗಿದ್ದಾರೆ.
ಬೃಹತ್ ಕಲ್ಲಿನ ಚಪ್ಪಡಿಗಳು ಗುಂಡಿಗೆ ಕುಸಿದಿರುವುದನ್ನು ನೋಡಬಹುದಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಮೊದಲು ಸ್ಥಳೀಯ ನಿವಾಸಿಗಳು ಗಾಯಗೊಂಡ ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ. ಗಾಯಗೊಂಡ ಹಲವಾರು ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ಸಾವುನೋವುಗಳ ನಿಖರ ಸಂಖ್ಯೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ಆರಂಭಿಸಿದರು. ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಪೀಡಿತ ವಲಯದ ಬಳಿ ಸಾರ್ವಜನಿಕರ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ತಡರಾತ್ರಿ ಸ್ಫೋಟ ಸಂಭವಿಸಿದ್ದರಿಂದ ಮತ್ತು ಸ್ಥಳದಲ್ಲಿದ್ದ ಕಾರ್ಮಿಕರ ಸಂಖ್ಯೆಯ ಬಗ್ಗೆ ವಿವರಗಳು ಸ್ಪಷ್ಟವಾಗಿಲ್ಲದ ಕಾರಣ, ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂದು ಖಚಿತಪಡಿಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು. ಸ್ಫೋಟದ ನಂತರ ಕ್ವಾರಿಯೊಳಗಿನ ಮಣ್ಣಿನ ಒಂದು ಭಾಗ ಕುಸಿದಿದೆ ಎಂದು ಆರಂಭಿಕ ವರದಿಗಳು ಸೂಚಿಸಿವೆ, ಇದು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಹೂತುಹೋಗುವ ಭಯವನ್ನು ಹೆಚ್ಚಿಸಿದೆ ಎಂಬ ಮಾಹಿತಿ ದೊರೆತಿದೆ.
ಅಧಿಕೃತ ಮೂಲಗಳ ಪ್ರಕಾರ, ಡೆಂಕನಲ್ ಜಿಲ್ಲಾ ಗಣಿಗಾರಿಕೆ ಕಚೇರಿಯು ಸೆಪ್ಟೆಂಬರ್ 8, 2025 ರಂದು ಗುತ್ತಿಗೆದಾರರಿಗೆ ಬ್ಲಾಸ್ಟಿಂಗ್‌ಗೆ ಕಡ್ಡಾಯ ಅನುಮೋದನೆ ಇಲ್ಲದ ಕಾರಣ ಕ್ವಾರಿಯನ್ನು ಮುಚ್ಚುವ ನಿರ್ದೇಶನವನ್ನು ನೀಡಿತ್ತು. ಆದೇಶದ ಹೊರತಾಗಿಯೂ, ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿ ಸ್ಥಳದಲ್ಲಿ ಬ್ಲಾಸ್ಟಿಂಗ್ ಮುಂದುವರೆದಿದೆ ಎಂದು ಆರೋಪಿಸಲಾಗಿದೆ.
ಜಿಲ್ಲಾ ಗಣಿ ಅಧಿಕಾರಿ ಮತ್ತು ಕ್ವಾರಿ ಗುತ್ತಿಗೇದಾರರ ಪ್ರತಿಕ್ರಿಯೆ ಇನ್ನು ದೊರೆತಿಲ್ಲ . ಕ್ವಾರಿಯ ಲೀಸ್ ಈಗಾಗಲೇ ಅವಧಿ ಮುಗಿದಿದೆಯೇ ಎಂಬ ಬಗ್ಗೆ ಸ್ಥಳೀಯವಾಗಿ ಪ್ರಶ್ನೆಗಳು ಎದ್ದಿದ್ದು, ಆದರೂ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕಲ್ಲಿನ ಕ್ವಾರಿಯಲ್ಲಿ ಬೃಹತ್ ಕಲ್ಲಿನ ತುಂಡುಗಳು ಬಿದ್ದಿರುವುದು ಕಂಡುಬಂದಿದೆ. ಅಂತಹ ಬೃಹತ್ ಕಲ್ಲುಗಳನ್ನು ತೆಗೆಯಲು ಭಾರೀ ಯಂತ್ರೋಪಕರಣಗಳನ್ನು ಸ್ಥಳಕ್ಕೆ ಕರೆತರಲಾಗಿದೆ ಶ್ವಾನ ದಳ ಸಹ ಸ್ಥಳಕ್ಕೆ ತಲುಪಿವೆ" ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜನ್ಸೀಸ್).