ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 
ದೇಶ

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ; ರಾಹುಲ್ ಗಾಂಧಿಗೆ ಬಿಗ್​ ರಿಲೀಫ್; ಅಲಹಾಬಾದ್ ಹೈಕೋರ್ಟ್‌ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ | Rahul Gandhi

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧದ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನಡೆಸುತ್ತಿರುವ ವಿಚಾರಣೆಗೆ ಸೋಮವಾರ(ಆ. 17) ಸುಪ್ರೀಂಕೋರ್ಟ್ ತಡೆ ನೀಡಿದ್ದು, ಮುಂದಿನ ಆದೇಶದವರೆಗೂ ಯಾವುದೇ ವಿಚಾರಣೆ ನಡೆಸದಂತೆ ಹೈಕೋರ್ಟ್​ಗೆ ನಿರ್ದೇಶನ ನೀಡಿದೆ.
ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾ. ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು, ರಾಹುಲ್ ಗಾಂಧಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ದಾಖಲೆಗಳನ್ನು ಮನ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದ ಕರ್ನಾಟಕದ ನಿವಾಸಿ ಎಸ್. ವಿಘ್ನೇಶ್ ಶಿಶಿರ್, ಸಿಬಿಐ  ಹಾಗೂ ಇಡಿಗೆ ನೋಟಿಸ್ ಜಾರಿಗೊಳಿಸಿತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುವವರೆಗೆ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ಮತ್ತು ವಿಚಾರಣೆಯನ್ನು ಮುಂದೂಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ನಿರ್ದೇಶನ ನೀಡಿತು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಥವಾ ಜಾರಿ ನಿರ್ದೇಶನಾಲಯ ಯಾವುದೇ ವರದಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಬಾರದು ಎಂದು ಸೂಚಿಸಿತು.
ಇದೇ ವೇಳೆ ರಾಹುಲ್ ಗಾಂಧಿ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, ಅರ್ಜಿದಾರ ವಿಘ್ನೇಶ್ ಶಿಶಿರ್ ಅವರು ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲು ಇರುವ ಅರ್ಹತೆಯನ್ನು ಪ್ರಶ್ನಿಸಿದರು. ಇದು ಕಾನೂನಿಗೆ ಸಂಪೂರ್ಣವಾಗಿ ಅಪರಿಚಿತವಾದ ವಿಷಯ. ಕಾನೂನಿನ ಮಾನ್ಯತೆ ಇಲ್ಲದ, ದ್ವೇಷಪೂರಿತವಾಗಿ ಗುರಿಮಾಡಿ ನಡೆಸುವ ಪ್ರಕ್ರಿಯೆಯಾಗಿದೆ. ಅತ್ಯಂತ ದುರದೃಷ್ಟಕರ. ಇದೇ ಅರ್ಜಿದಾರರಿಂದ ಪದೇ-ಪದೇ ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂದು ಕೋರ್ಟ್​ಗೆ ತಿಳಿಸಿದರು.
ಹೈಕೋರ್ಟ್ ಅನ್ನು ಸಂಪರ್ಕಿಸಲು ಶಿಶಿರ್ ಅವರಿಗೆ ಇರುವ ಅರ್ಹತೆ ಏನು? ಅರ್ಜಿದಾರರು ತಮ್ಮ ಹಿನ್ನೆಲೆ ಅಥವಾ ವಿವರಗಳನ್ನು ಬಹಿರಂಗಪಡಿಸಿಲ್ಲ. ಇನ್ನೂ ಸಿಬಿಐ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸುವುದನ್ನು ಹೊರತುಪಡಿಸಿ ಬೇರೇನನ್ನೂ ಮಾಡಿಲ್ಲ ಎಂದು ವಾದಿಸಿದರು.
ತನಿಖಾ ಸಂಸ್ಥೆಗಳ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಸಿಬಿಐ ಮತ್ತು ಇಡಿಗೆ ಈವರೆಗೆ ಈ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ ಎಂದು ತಿಳಿಸಿದರು. ದೂರು ಗಂಭೀರ ಸ್ವರೂಪದ ಅಪರಾಧಗಳನ್ನು ಒಳಗೊಂಡಿದ್ದರೆ ಆರೋಪಗಳು ಗಂಭೀರವಾಗಿರುತ್ತವೆ ಎಂದು ಹೇಳಿದರು.
ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅವರು ರಾಹುಲ್ ಗಾಂಧಿ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್​​, ಈ ಹಿಂದೆ ಸಿಬಿಐ ಮತ್ತು ಇಡಿಗೆ ನಿರ್ದೇಶನ ನೀಡಿತ್ತು. ರಾಹುಲ್ ಗಾಂಧಿ ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ (ಏಜೆನ್ಸೀಸ್).