Post Office Scheme: ನಮ್ಮ ಭವಿಷ್ಯಕ್ಕೆಂದು ತಿಂಗಳ ಕೊನೆಯಲ್ಲಿ ಬರುವ ಸಂಬಳದಲ್ಲಿ ಹೇಗಾದರೂ ಮಾಡಿ ಅಷ್ಟೋ, ಇಷ್ಟೋ ಅಂತ ಉಳಿತಾಯ ಮಾಡುವುದು ಹಲವರ ಕಟ್ಟುಪಾಡಾಗಿದೆ. ಪೆಟ್ರೋಲ್, ಬಸ್ ಪಾಸ್, ಊಟ-ತಿಂಡಿ, ತಿಂಗಳ ರೇಷನ್, ಸಾಲದ ಕಂತುಗಳು ಎಂದು ಬಂದ ಸಂಪಾದನೆಯ ಬಹುಪಾಲು ಇವುಗಳಿಗೆ ಹೋದರೆ ಇನ್ನೂ ಉಳಿತಾಯ ಎಂದು ನಮಗೆ ಕಾಣಿಸುವುದು ಚೂರು ಪಾರು ಹಣವಷ್ಟೇ. ಹೀಗಿರುವಾಗ, ಭಾರತೀಯ ಅಂಚೆ ಕಚೇರಿಯಲ್ಲಿ ತಿಂಗಳಿಗೆ 2 ಸಾವಿರ ರೂ. ಅನ್ನು ಹೂಡಿಕೆ ಮಾಡಿದರೆ, ಬಡ್ಡಿ ಎಲ್ಲ ಸೇರಿಸಿ ಅಂತಿಮವಾಗಿ ನಿಮ್ಮ ಕೈಗೆ ಸೇರುವ ಒಟ್ಟು ಹಣವೆಷ್ಟು ಗೊತ್ತಾ? ಹೀಗಿದೆ ನೋಡಿ ಉಪಯುಕ್ತ ಮಾಹಿತಿ.
ಸಾಮಾನ್ಯವಾಗಿ, ಜನರು ಎಲ್ಲಿ ಹೂಡಿಕೆ ಮಾಡಿದರೆ ಸರಿ? ಲಾಭದಾಯಕ ಹಾಗೂ ನಂಬಿಕೆಗೆ ಅರ್ಹವಾದ ಕಡೆ ಹೂಡಿಕೆ ಮಾಡುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಇದಕ್ಕೆಂದೇ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಸುರಕ್ಷಿತ ಹೂಡಿಕೆಯ ಭಾಗವಾಗಿ ಈ ಒಂದು ಸ್ಕೀಮ್ ಅನ್ನು ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆಂದೇ ಪರಿಚಯಿಸಿದೆ. ಪೋಸ್ಟ್ ಆಫೀಸ್‌ನ ಫಿಕ್ಸೆಡ್ ಡೆಪಾಸಿಟ್ ಫಂಡ್ ಯೋಜನೆಯು ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಇದು ಒಂದಾಗಿದೆ.
ಕೇಂದ್ರ ಸರ್ಕಾರದ ಖಾತರಿಯೊಂದಿಗೆ, ಹೂಡಿಕೆದಾರರು ಠೇವಣಿ ನಿಧಿ ಯೋಜನೆಯಲ್ಲಿ ವಿಶ್ವಾಸದಿಂದ ಹಣವನ್ನು ಉಳಿಸಬಹುದಾಗಿದೆ. ಈ ಠೇವಣಿ ಯೋಜನೆಯ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಚಕ್ರಬಡ್ಡಿ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದಲ್ಲದೆ, ನೀವು ತಿಂಗಳಿಗೆ 2 ಸಾವಿರ ರೂ. ಹಣವನ್ನು 5 ವರ್ಷಗಳವರೆಗೆ ಕಟ್ಟಿಕೊಂಡು ಹೋದರೆ, ಒಟ್ಟು ಹೂಡಿಕೆ 1,20,000 ರೂ. ಆಗಲಿದೆ. ಈ ಯೋಜನೆಯು ಕೊನೆಯ ಹಂತ ತಲುಪಿದಾಗ, ನಿಮ್ಮ ಕೈಗೆ ಒಟ್ಟು 1,42,732 ದೊರೆಯಲಿದೆ.
ಅಂದರೆ ನಿಮಗೆ ಸುಮಾರು 22,732 ರೂ. ಬಡ್ಡಿ ಹಣವೇ ಉಳಿತಾಯದೊಂದಿಗೆ ಸೇರಲಿದೆ. ನೀವು ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ ಕನಿಷ್ಠ 100 ರೂ.ನಿಂದ ಹೂಡಿಕೆ ಮಾಡಬಹುದು. ಇನ್ನು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆಯ ಅವಧಿ 5 ವರ್ಷಗಳು ಎಂಬುದು ನಿಮಗೆ ಸ್ಪಷ್ಟವಾಗಿ ಗೊತ್ತಿರಲಿ. ನಿಮಗೆ ತೀರ ಅಗತ್ಯವಿದ್ದರೆ, 3 ವರ್ಷಗಳು ಪೂರ್ಣಗೊಂಡ ನಂತರ ಖಾತೆಯನ್ನು ಮುಂಚಿತವಾಗಿಯೇ ಕ್ಲೋಸ್ ಮಾಡಿಕೊಳ್ಳಬಹುದು.
ಈ ಯೋಜನೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಹೊಂದಿಲ್ಲ. ಆಧಾರ್ ಮತ್ತು ಪ್ಯಾನ್ ಸೇರಿದಂತೆ ಮುಖ್ಯ ದಾಖಲೆಗಳೊಂದಿಗೆ ಪೋಸ್ಟ್ ಆಫೀಸ್‌ನಲ್ಲಿ ಈ ಠೇವಣಿ ಯೋಜನೆಗಾಗಿ ನೀವು ಖಾತೆಯನ್ನು ತೆರೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ನಿಮ್ಮ ಸ್ಥಳೀಯ ಅಂಚೆ ಕಚೇರಿಗೆ ಭೇಟಿ ನೀಡಬಹುದು ಅಥವಾ ಆನ್ಲೈನ್ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದಾಗಿದೆ,(ಏಜೆನ್ಸೀಸ್).