ಅಭಿಷೇಕ್ ಬ್ಯಾನರ್ಜಿ ಮತ್ತು ಅಮಿತ್ ಶಾ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಖಾಡದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ನಿಮಗೆ ಧೈರ್ಯವಿದ್ರೆ ಮತ ಎಣಿಕೆಯ ದಿನದಂದು ಕೋಲ್ಕತ್ತಾದಲ್ಲಿ ಇರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗುರುವಾರ(ಏ. 16) ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ(Abhishek Banerjee) ಸವಾಲು ಹಾಕಿದ್ದಾರೆ.
ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಸಿಎಂ ಮಮತಾ ಬ್ಯಾನರ್ಜಿ ಅವರು ಬಲವಾದ ಜನಾದೇಶದೊಂದಿಗೆ ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಧೈರ್ಯವಿದ್ದರೆ, ಮತ ಎಣಿಕೆಯ ದಿನದಂದು ಕೋಲ್ಕತ್ತಾದಲ್ಲಿರಿ, ಆಗ ನೋಡೋಣ ಎಂದು ಹೇಳಿದ್ದಾರೆ.
ಬಿಜೆಪಿ ಚುನಾವಣೆಗೆ ಮುನ್ನವೇ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಬೆದರಿಸುತ್ತಿದೆ. ತೃಣಮೂಲ ಕಾರ್ಯಕರ್ತರು ತಮ್ಮ ಮನೆಗಳಿಂದ ಹೊರಗೆ ಕಾಲಿಡಬಾರದು, ಇಲ್ಲದಿದ್ದರೆ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಇಲ್ಲಿಗೆ ಬಂದು ಬಂಗಾಳದ ಜನರನ್ನು ಬೆದರಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಬಿಜೆಪಿ & ಟಿಎಂಸಿ ಕಾರ್ಯಕರ್ತರ ನಡುವಿನ ಸಂರ್ಘರ್ಷ ವಿರುದ್ಧ ಪ್ರತೀಕಾರದ ಸುಳಿವು ನೀಡಿರುವ ಅವರು, ನಾನು ಬ್ಲಾಕ್‌ನಿಂದ ಬ್ಲಾಕ್‌ಗೆ, ಪಂಚಾಯತ್‌ನಿಂದ ಪಂಚಾಯತ್‌ಗೆ ಪಟ್ಟಿಯನ್ನು ಸಿದ್ಧಪಡಿಸಿದ್ದೇನೆ. ಖಾತೆಗಳನ್ನು ಬಡ್ಡಿ ಮತ್ತು ಅಸಲು ಸಹಿತ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಕೇಂದ್ರ ಇಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್ ಹಾಗೂ ಚುನಾವಣಾ ಆಯೋಗಗಳನ್ನು ಬಳಸುತ್ತಿದೆ. ಯಾವುದೂ ಕೆಲಸ ಮಾಡುವುದಿಲ್ಲ. ನೀವು ನಮ್ಮನ್ನು ಹೆಚ್ಚು ನಿಂದಿಸಿದಷ್ಟೂ ನಾವು ಬಲಶಾಲಿಯಾಗುತ್ತೇವೆ. ಇದು ದೆಹಲಿಯ ಶಕ್ತಿ ಮತ್ತು ಬಂಗಾಳದ ಜನರ ನಡುವಿನ ಸ್ಪರ್ಧೆ. ಒಂದು ಕಡೆ ದೆಹಲಿ ಪ್ರಬಲ ಶಕ್ತಿಗಳು ಇನ್ನೊಂದೆಡೆ 10 ಕೋಟಿ ಬಂಗಾಳಿಗಳು ಮತ್ತು ಚಪ್ಪಲಿ ಧರಿಸಿದ ಸಾಧಾರಣ ಮಹಿಳೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಬಂಗಾಳಿಗಳನ್ನು ಬಾಂಗ್ಲಾದೇಶಿಗಳು ಎಂದು ಬ್ರಾಂಡ್ ಮಾಡುವ ಮೂಲಕ ಮತ್ತು ಅವರ ಆಹಾರ ಪದ್ಧತಿಯನ್ನು ಗುರಿಯಾಗಿಸಿಕೊಂಡು ಅವಮಾನಿಸುತ್ತಿದೆ. ಮತದಾನದ ಮೂಲಕ ಅವರಿಗೆ ಸೂಕ್ತ ಉತ್ತರ ನೀಡಬೇಕೆಂದು ಬ್ಯಾನರ್ಜಿ ಒತ್ತಾಯಿಸಿದ್ದಾರೆ.
294 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ (ಏಜೆನ್ಸೀಸ್).