ಅಮ್ರೋಹಾ (ಉತ್ತರ ಪ್ರದೇಶ): ಫಾಸ್ಟ್ ಫುಡ್‌ನ ಅತಿಯಾದ ಸೇವನೆಯಿಂದ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗಿ, ಅಮ್ರೋಹಾದ 11ನೇ ತರಗತಿಯ ವಿದ್ಯಾರ್ಥಿನಿ ಅಹಾನಾ (17 ವರ್ಷ) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 21ರಂದು ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಅಹಾನಾ ಅಮ್ರೋಹಾದ ಹಶ್ಮಿ ಗರ್ಲ್ಸ್ ಇಂಟರ್ ಕಾಲೇಜಿನ ವಿದ್ಯಾರ್ಥಿನಿ. ಬಾಲ್ಯದಿಂದಲೇ ಚೌಮೀನ್, ಪಿಜ್ಜಾ, ಬರ್ಗರ್, ಮ್ಯಾಗಿ ಮತ್ತು ಇತರ ಫಾಸ್ಟ್ ಫುಡ್‌ಗಳನ್ನು ಹೆಚ್ಚು ಇಷ್ಟಪಟ್ಟು, ಮನೆಯ ಆಹಾರವನ್ನು ತಪ್ಪಿಸುತ್ತಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ನವೆಂಬರ್ 28ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಅವಳನ್ನು ಅಮ್ರೋಹಾ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಿತಿ ಹದಗೆಡದಿದ್ದರಿಂದ ಮೊರಾದಾಬಾದ್‌ಗೆ ಸ್ಥಳಾಂತರಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕರುಳುಗಳು ಒಟ್ಟಿಗೆ ಅಂಟಿಕೊಂಡು ಜೀರ್ಣಾಂಗ ವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಕುಟುಂಬದವರು ಹೇಳಿಕೊಂಡಂತೆ, ದೀರ್ಘಕಾಲದ ಫಾಸ್ಟ್ ಫುಡ್ ಸೇವನೆಯೇ ಕರುಳಿನ ಹಾನಿಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಆದರೆ ಏಮ್ಸ್ ಮೂಲಗಳು ಮತ್ತು ಕೆಲವು ವರದಿಗಳು ಇದನ್ನು ನಿರಾಕರಿಸಿ, ಟೈಫಾಯಿಡ್, ಟಿಬಿ ಮತ್ತು ಇತರ ಸೋಂಕುಗಳಿಂದ ಉಂಟಾದ ತೊಡಕುಗಳೇ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿವೆ. ಜಂಕ್ ಫುಡ್ ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಖಂಡಿತ.ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಪಿ. ಸಿಂಗ್ ಪೋಷಕರಿಗೆ ಎಚ್ಚರಿಕೆ ನೀಡಿ, ಮಕ್ಕಳು ಫಾಸ್ಟ್ ಫುಡ್ ಸೇವಿಸದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಈ ದುರಂತ ಘಟನೆ ಕುಟುಂಬ ಮತ್ತು ಸಮುದಾಯವನ್ನು ಆಘಾತಕ್ಕೀಡುಮಾಡಿದೆ,(ಏಜೆನ್ಸೀಸ್).