LollipopBoy 
ದೇಶ

ಕಣ್ಣು ಮುಚ್ಚಿ ಪ್ರಾರ್ಥನೆ ಮಾಡ್ತಿದ್ದಾನೆ ಅನ್ಕೊಂಡ್ರಾ? ಈತನ ಲಾಲಿಪಾಪ್ ಪ್ರೀತಿಗೆ ನೀವೂ ನಗದೇ ಇರಲಾರಿರಿ | LollipopBoy

ಬೆಂಗಳೂರು: ಶಾಲಾ ದಿನಗಳ ಬೆಳಗಿನ ಪ್ರಾರ್ಥನೆ ಎಂದರೆ ಎಲ್ಲರಿಗೂ ನೆನಪಿರುವುದು ಸಾಲಾಗಿ ನಿಂತು, ಕಣ್ಣು ಮುಚ್ಚಿ, ಶಿಸ್ತಿನಿಂದ ಭಗವಂತನನ್ನು ಸ್ಮರಿಸುವುದು. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ(LollipopBoy) ವಿಡಿಯೋವೊಂದು ಶಾಲಾ ಪ್ರಾರ್ಥನೆಯ ಹಳೆಯ ನೆನಪುಗಳಿಗೆ ಹೊಸ ಆಯಾಮ ನೀಡಿದೆ. ಪ್ರಾರ್ಥನೆಯ ವೇಳೆ ಎಲ್ಲರೂ ಭಕ್ತಿಯಿಂದ ನಿಂತಿದ್ದರೆ, ಈ ಪುಟ್ಟ ಬಾಲಕ ಮಾತ್ರ ತನ್ನದೇ ಆದ 'ಸಿಹಿ' ಲೋಕದಲ್ಲಿ ವಿಹರಿಸುತ್ತಿದ್ದಾನೆ!
ಹೌದು, ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಶಾಲೆಯ ಎಲ್ಲಾ ಮಕ್ಕಳು ಕಣ್ಣು ಮುಚ್ಚಿ ಕೈಮುಗಿದು ಪ್ರಾರ್ಥನೆಯಲ್ಲಿ ಮಗ್ನರಾಗಿದ್ದಾರೆ. ಆದರೆ ಈ ಪುಟ್ಟ ಬಾಲಕನ ಪ್ಲ್ಯಾನಿಂಗ್ ಬೇರೆಯೇ ಇತ್ತು. ತಾನು ಕಣ್ಣು ಮುಚ್ಚಿಕೊಂಡರೆ ತನ್ನನ್ನು ಯಾರೂ ನೋಡುವುದಿಲ್ಲ ಎಂಬ ಮುಗ್ಧ ನಂಬಿಕೆ ಅವನದು. ಇದೇ ಧೈರ್ಯದಲ್ಲಿ ತನ್ನ ಜೇಬಿನಿಂದ ನಿಧಾನವಾಗಿ ಲಾಲಿಪಾಪ್ ತೆಗೆದು, ಕಣ್ಣು ಮುಚ್ಚಿಕೊಂಡೇ ಸವಿಯಲು ಆರಂಭಿಸುತ್ತಾನೆ. ಅವನ ಮುಖದಲ್ಲಿನ ಗಂಭೀರತೆ ನೋಡಿದರೆ ಪ್ರಾರ್ಥನೆ ಮಾಡುತ್ತಿದ್ದಾನೆ ಎಂದೇ ಅನಿಸುತ್ತದೆ, ಆದರೆ ಅವನ ಬಾಯಿ ಮತ್ತು ಕೈಗಳು ಲಾಲಿಪಾಪ್ ಎಂಜಾಯ್ ಮಾಡುತ್ತಿರುವುದನ್ನು ಕ್ಯಾಮೆರಾ ಸ್ಪಷ್ಟವಾಗಿ ಸೆರೆಹಿಡಿದಿದೆ.

ಶಿಸ್ತಿನ ಬಾಲಕ: ಜೇಬಿಗೇ ಸೇರಿದ ಕಡ್ಡಿ!

ಬಾಲಕನ ತುಂಟಾಟ ಇಲ್ಲಿಗೆ ಮುಗಿಯುವುದಿಲ್ಲ. ಲಾಲಿಪಾಪ್ ತಿಂದು ಮುಗಿಸಿದ ನಂತರ, ಆತ ಅದರ ಕಡ್ಡಿಯನ್ನು ಎಲ್ಲೂ ಎಸೆಯದೆ ಜಾಗರೂಕತೆಯಿಂದ ಮರಳಿ ತನ್ನ ಜೇಬಿನಲ್ಲೇ ಇಟ್ಟುಕೊಳ್ಳುತ್ತಾನೆ. ನಂತರ ಏನೂ ತಿಳಿಯದವನಂತೆ ಮತ್ತೆ ಕೈಮುಗಿದು ಪ್ರಾರ್ಥನೆಯಲ್ಲಿ ಮಗ್ನನಾಗುತ್ತಾನೆ. ಬಾಲಕನ ಈ 'ನಾಗರಿಕ ಪ್ರಜ್ಞೆ' (Civic Sense) ಈಗ ನೆಟ್ಟಿಗರ ಮನ ಗೆದ್ದಿದೆ. "ಎಷ್ಟೋ ದೊಡ್ಡವರಿಗಿಂತ ಈ ಮಗು ಉತ್ತಮ, ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಜೇಬಿಗೆ ಹಾಕಿಕೊಂಡಿದ್ದಾನೆ" ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ

ಈ ವಿಡಿಯೋ 'ಎಕ್ಸ್' (ಟ್ವಿಟರ್) ನಲ್ಲಿ ಹಂಚಿಕೆಯಾದ ಬೆನ್ನಲ್ಲೇ ಸಾವಿರಾರು ವ್ಯೂಸ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು, "ಇವನು ಬಾಲ್ಯದ ಜೇಠಾಲಾಲ್ ಇದ್ದಂತೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ದೇವರು ಎಲ್ಲಿದ್ದಾನೆ ಎಂದು ಹುಡುಕುವ ಅವಶ್ಯಕತೆ ಇಲ್ಲ, ಈ ಮಗುವಿನಲ್ಲೇ ನಿಜವಾದ ದೇವನಿದ್ದಾನೆ" ಎಂದು ಬರೆದಿದ್ದಾರೆ. "ತಾನು ಕಣ್ಣು ಮುಚ್ಚಿಕೊಂಡರೆ ಸಾಕು, ಇಡೀ ಜಗತ್ತೇ ನನ್ನನ್ನು ನೋಡುತ್ತಿಲ್ಲ ಎಂದು ಈ ಮಗು ಅಂದುಕೊಂಡಿದೆ, ಎಷ್ಟು ಮುಗ್ಧತೆ!" ಎಂದು ಹಲವರು ನಗುತ್ತಿದ್ದಾರೆ.
ಅದೇ ವಿಡಿಯೋದಲ್ಲಿ ಈ ಬಾಲಕನ ಹಿಂದೆ ನಿಂತಿರುವ ಇನ್ನೊಬ್ಬ ವಿದ್ಯಾರ್ಥಿ ತನ್ನ ಪ್ಯಾಂಟ್ ಬೆಲ್ಟ್ ಸಡಿಲವಾಗಿ ಅದನ್ನು ಸರಿಪಡಿಸಲು ಪಡುತ್ತಿರುವ ಪಾಡು ಕೂಡ ವೀಕ್ಷಕರಿಗೆ ನಗು ತರಿಸುತ್ತಿದೆ. ಈ ವಿಡಿಯೋ ಎಲ್ಲಿ ಚಿತ್ರೀಕರಣಗೊಂಡಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ, ಶಾಲಾ ದಿನಗಳ ತುಂಟಾಟವನ್ನು ನೆನಪಿಸುವಲ್ಲಿ ಈ ಪುಟ್ಟ ಬಾಲಕ ಯಶಸ್ವಿಯಾಗಿದ್ದಾನೆ,(ಏಜೆನ್ಸೀಸ್).