ನವದೆಹಲಿ : ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಶನಿವಾರ (ಅ.10) ಕಾಕ್ರೋಚ್ ಜನತಾ ಪಾರ್ಟಿ (CJP) ದೆಹಲಿಯ ಜಂತರ್-ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಆದರೆ, ಪ್ರತಿಭಟನಾ ಸ್ಥಳಕ್ಕೆ ತಲುಪುವ ಮೊದಲೇ, ಸಿಜೆಪಿ ನಾಯಕರಾದ ಅಭಿಜಿತ್ ದಿಪ್ಕೆ, ಆಶುತೋಷ್ ರಾಂಕಾ, ಸೌರವ್ ದಾಸ್ ರನ್ನು ದೆಹಲಿ ಪೊಲೀಸರು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿದ ಹಿನ್ನಲೆ, ಈಗ ಈ ಪ್ರತಿಭಟನೆಯನ್ನು ಯಾರು ಮುನ್ನಡೆಸಲಿದ್ದಾರೆಂಬ ಗೊಂದಲ ಜಿರಳೆ ಬೆಂಬಲಿಗರಲ್ಲಿ ಮೂಡಿತ್ತು. ಆದರೆ, ಇದಕ್ಕೆ ಈಗ ತೆರೆ ಬಿದ್ದಿದ್ದು, ಅಜಿಂಕ್ಯಾ ಶಿಂಧೆ ಈಗ ಜಂತರ್-ಮಂತರ್ನಲ್ಲಿ ನಡೆಯಲಿರುವ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ.
ಈ ಕುರಿತು ಕಾಕ್ರೋಚ್ ಜನತಾ ಪಾರ್ಟಿಯಲ್ಲಿ ವಿಡಿಯೋವೊಂದು ಹಂಚಿಕೆಯಾಗಿದ್ದು, ಈ ವಿಡಿಯೋನಲ್ಲಿ ಅಭಿಜಿತ್ ದಿಪ್ಕೆ, ನೀವು ಈ ವಿಡಿಯೋವನ್ನು ನೋಡುತ್ತಿದ್ದಿರಾ ಎಂದರೆ, ನಾನು (ಅಭಿಜಿತ್) ಸೌರವ್ ಮತ್ತು ಆಶುತೋಷ್ ಅರೆಸ್ಟ್ ಆಗಿದ್ದೇವೆ ಎಂದರ್ಥ. ನಾನು ಮೂವರು ಪೊಲೀಸರಿಂದ ಬಂಧನಕ್ಕೊಳಗಾದ ಹಿನ್ನಲೆ ಈಗ, ಅಜಿಂಕ್ಯಾ ಶಿಂಧೆ ಈ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ. ನೀವೆಲ್ಲರೂ, ಅಜಿಂಕ್ಯಾನನ್ನು ಫಾಲೋ ಮಾಡಿಕೊಳ್ಳಿ, ಅವನೇ ಪ್ರತಿಭಟನೆಯ ಮುಂದಿನ ರೂಪು-ರೇಷೆಗಳನ್ನು ಹಂಚಿಕೊಳ್ಳುತ್ತಾನೆಂದು ವಿಡಿಯೋನಲ್ಲಿ ಹೇಳಲಾಗಿದೆ.
ಸಿಜೆಪಿಯ ನೂತನ ನಾಯಕ ಅಜಿಂಕ್ಯಾ ಶಿಂಧೆ ಮೂಲತಃ ಮಹಾರಾಷ್ಟ್ರದವರಾಗಿದ್ದಾರೆ. ಇವರು ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ನಾಯಕರಾಗಿದ್ದು, ನೀಟ್ ವಿರೋಧಿ ಪ್ರತಿಭಟನೆಯಲ್ಲಿ ಬಹಳ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಅಂತಯೇ, ಕೆಲ ದಿನಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ, ಚುನಾವಣಾ ಆಯೋಗ ವಿರುದ್ಧದ ಜೈಲ್ ಭರೋ ಹೋರಾಟದ ನೇತೃತ್ವವನ್ನು ಇದೇ ಅಜಿಂಕ್ಯಾ ಶಿಂಧೆ ವಹಸಿಕೊಂಡಿದ್ದರು. ಹಾಗೂ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ್ದ, ಸ್ಕೂಲ್ ಟೀಕ್ ಕರೋ ಅಭಿಯಾನ ಕೂಡ ಇವರದೇ ಯೋಜನೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಕಾಕ್ರೋಚ್ ಜನತಾ ಪಾರ್ಟಿ (CJP) ದೆಹಲಿಯ ಜಂತರ್-ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಆದರೆ, ಪ್ರತಿಭಟನೆಗೂ ಮುನ್ನವೇ, ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ, ವಕ್ತಾರರಾದ, ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಮತ್ತು ಯೂಟ್ಯೂಬರ್ ಧ್ರುವ್ ರಾಠಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.
ಒಂದೆಡೆ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದೆಡೆ, ಸಿಜೆಪಿ ನಾಯಕ ಅಭಿಜಿತ್ ದಿಪ್ಕೆ ಅವರ ಅಜ್ಜಿ ಸಾವಿತ್ರಿಭಾಯಿ ದಿಪ್ಕೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಮಾಹಿತಿ ಪ್ರಕಾರ ಸಾವಿತ್ರಿಭಾಯಿ ಅವರ ಅಂತ್ಯಕ್ರಿಯೆಯು ಮಹಾರಾಷ್ಟ್ರದ ಹಿಂಗೋಳಿ ಜಿಲ್ಲೆಯ ಶಾಂತುಕ್ ಪಿಂಪ್ರಿಯಲ್ಲಿ ನಡೆಯಲಿದ್ದು, ಅಭಿಜಿತ್ ಅವರ ತಂದೆ ಮತ್ತು ತಾಯಿ ಊರಿನತ್ತ ಪ್ರಯಾಣ ಬೆಳೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿರುವ ಅಭಿಜಿತ್ ದಿಪ್ಕೆ ಅಜ್ಜಿಯ ಅಂತಿಮ ದರ್ಶನ ಪಡೆಯಲು ಮುಂಬೈಗೆ ಮರಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).