Tamil Nadu Election | ಟಿವಿಕೆ ಬಹುಮತ ಪಡೆದರೆ ಬಿಜೆಪಿ ಪ್ಲಾನ್ ಏನು..?
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Election) ಮತ ಎಣಿಕೆಗೆ ಕೇವಲ ಒಂದೇ ದಿನ ಬಾಕಿ ಉಳಿದಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಮೈತ್ರಿಗಳ ಬಗ್ಗೆ ಚರ್ಚೆಗಳು ಜೋರಾಗಿವೆ. ಒಂದು ವೇಳೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ನಟ ವಿಜಯ್ ನೇತೃತ್ವದ ಟಿವಿಕೆ ಬೆಂಬಲ ಪಡೆಯಬಹುದೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳನ್ನು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ದೃಢವಾಗಿ ತಳ್ಳಿಹಾಕಿದ್ದಾರೆ.
ಕನ್ಯಾಕುಮಾರಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ನೈನಾರ್ ನಾಗೇಂದ್ರನ್, ಇತ್ತೀಚೆಗೆ ಬಿಡುಗಡೆಯಾಗಿರುವ ಎಕ್ಸಿಟ್ ಪೋಲ್ಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದರು. ಓಪಿನಿಯನ್ ಪೋಲ್ಗಳು ಆಡಳಿತಾರೂಢ ಡಿಎಂಕೆ ಮೈತ್ರಿಕೂಟದ ಪರವಾಗಿ ಪಕ್ಷಪಾತ ತೋರುತ್ತಿವೆ. ಅನೇಕ ಕಡೆಗಳಲ್ಲಿ ಕೇವಲ ಡಿಎಂಕೆ ಪರವಾಗಿ ಪ್ರಚಾರ ನಡೆಯುತ್ತಿದೆಯೇ ಹೊರತು ವಾಸ್ತವ ಹಾಗಿಲ್ಲ. ಕಳೆದ ಐದು ವರ್ಷಗಳಿಂದ ತಮಿಳುನಾಡಿನಲ್ಲಿ ಯಾವ ರೀತಿಯ ಸರ್ಕಾರ ಅಸ್ತಿತ್ವದಲ್ಲಿದೆ ಮತ್ತು ಜನರ ಆಲೋಚನೆಗಳು ಹೇಗಿವೆ ಎಂಬುದು ಮೇ 4 ರಂದು ನಡೆಯುವ ಮತ ಎಣಿಕೆಯ ದಿನವೇ ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ಕಾದು ನೋಡುವುದು ಬುದ್ಧಿವಂತಿಕೆ ಎಂದು ನಾಗೇಂದ್ರನ್ ತಿಳಿಸಿದ್ದಾರೆ.
ಡಿಎಂಕೆ ವಿರುದ್ಧ ಜನಾಕ್ರೋಶ; ಬಿಜೆಪಿಗೆ ಲಾಭದ ನಿರೀಕ್ಷೆ
ಏಪ್ರಿಲ್ 29 ರಂದು ಬಿಡುಗಡೆಯಾದ ಸಮೀಕ್ಷೆಗಳು ಇಲ್ಲಿನ ವಾಸ್ತವತೆಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ನಾಗೇಂದ್ರನ್ ತಿಳಿಸಿದ್ದು, ಸರ್ಕಾರಿ ನೌಕರರು, ವ್ಯಾಪಾರಿಗಳು, ಮಹಿಳೆಯರು ಮತ್ತು ಮಧ್ಯಮ ವರ್ಗದ ಜನರು ಸೇರಿದಂತೆ ಸಮಾಜದ ವಿವಿಧ ವರ್ಗಗಳಲ್ಲಿ ಪ್ರಸ್ತುತ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನವಿದೆ. ಕಳೆದ ಬಾರಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು, ಆದರೆ ಈ ಬಾರಿ ನಮ್ಮ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ ಎಂಬ ವಿಶ್ವಾಸವಿದೆ, ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡಿನಲ್ಲಿ ಒಂದು ವೇಳೆ ಅತಂತ್ರ ಸ್ಥಿತಿ ಸೃಷ್ಟಿಯಾದರೆ ಬಿಜೆಪಿಯು, ಟಿವಿಕೆ ಪಕ್ಷದ ಬೆಂಬಲ ಪಡೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರನ್, ಅಂತಹ ಸನ್ನಿವೇಶವೇ ಉದ್ಭವಿಸುವುದಿಲ್ಲ ಎಂದರು. ವಿಜಯ್ ಯಾವುದೇ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆಯೇ ಇಲ್ಲ, ಹೀಗಿದ್ದಾಗ ಬಹುಮತ ಪಡೆಯುವುದು ದೂರದ ಮಾತು, ಆದ್ದರಿಂದ ಅವರೊಂದಿಗೆ ಮೈತ್ರಿ ಬಗ್ಗೆ ಯಾವುದೇ ಮಾತುಕತೆಗಳೂ ನಡೆಯುತ್ತಿಲ್ಲ ಎಂದು ತಿಳಿಸಿದರು.
ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯೊಂದಿಗೆ ತಮಿಳುನಾಡಿನ ಫಲಿತಾಂಶವೂ ಮೇ 4 ರಂದು ಹೊರಬೀಳಲಿದ್ದು, ಇಡೀ ದೇಶದ ಕಣ್ಣು ಈಗ ದಕ್ಷಿಣದ ಈ ಪ್ರಮುಖ ರಾಜ್ಯದ ಮೇಲಿದೆ, ಮತದಾರ ಯಾರಿಗೆ ಪಟ್ಟ ಕಟ್ಟಲಿದ್ದಾನೆ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ(ಏಜೆನ್ಸೀಸ್).