ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ
ಚೆನ್ನೈ: ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್, ಸರ್ಕಾರ ರಚನೆಗೆ ಬೇಕಾದ 118 ಶಾಸಕರ ಬೆಂಬಲದ ಪುರಾವೆಗಳನ್ನು ತೋರಿಸಲು ವಿಫಲವಾದ್ರೆ, ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರ ಸಮಯವನ್ನು ಕೇಳುತ್ತೇವೆ ಎಂದು ಎಐಎಡಿಎಂಕೆ(AIADMK) ಹೇಳಿದೆ.
ಈ ಕುರಿತು ಮಾತನಾಡಿರುವ ಎಐಎಡಿಎಂಕೆ ಹಿರಿಯ ನಾಯಕ ಎಂ. ತಂಬಿದುರೈ, ಈಗ ತುಂಬಾ ಚರ್ಚೆಗಳು ನಡೆಯುತ್ತಿವೆ. ನಾನು ಏನನ್ನೂ ಹೇಳಲಾರೆ. ಒಳ್ಳೆಯದು ಸಂಭವಿಸುತ್ತದೆ ಎಂದು ನಾವು ಆಶಿಸುತ್ತೇವೆ. ಸರ್ಕಾರ ರಚಿಸಲು ಹಕ್ಕು ಮಂಡಿಸುವ ಮೊದಲು ನಮ್ಮ ಪಕ್ಷವೂ ಸಿಪಿಐ, ಸಿಪಿಎಂ ಮತ್ತು ವಿಸಿಕೆ ನಿರ್ಧಾರಗಳಿಗಾಗಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.
ಎಐಎಡಿಎಂಕೆ ಅಧಿಕಾರಕ್ಕೆ ಬರಬೇಕು ಎಂಬುದು ಸಾರ್ವಜನಿಕರ ಭಾವನೆ. ನಮ್ಮ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತೆ ಅಧಿಕಾರಕ್ಕೆ ಬಂದು ಉತ್ತಮ ಆಡಳಿತ ನೀಡುತ್ತಾರೆ. ದೇವರ ದಯೆಯಿಂದ ಅದು ಸಕಾಲದಲ್ಲಿ ಆಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ.
ಇನ್ನೂ ಸರ್ಕಾರ ರಚಿಸಲು ಬೆಂಬಲ ನೀಡುವಂತೆ ಟಿವಿಕೆ ಸಲ್ಲಿಸಿದ ಮನವಿಯ ಮೇರೆಗೆ ಸಿಪಿಐ ಮತ್ತು ಸಿಪಿಎಂ ಇಂದು ತಮ್ಮ ಕಚೇರಿಗಳಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದು, ಸಂಜೆ ವೇಳೆಗೆ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಅವುಗಳ ನಿರ್ಧಾರಕ್ಕೆ ಅನುಗುಣವಾಗಿ ತನ್ನ ನಿರ್ಧಾರ ಇರುತ್ತದೆ ಎಂದು ಈಗಾಗಲೇ ವಿಸಿಕೆ ತಿಳಿಸಿದೆ (ಏಜೆನ್ಸೀಸ್).