ದಳಪತಿ ವಿಜಯ್, ಇಪಿಎಸ್ ಹಾಗೂ ಎಂ.ಕೆ.ಸ್ಟಾಲಿನ್
DMK: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದ್ದು, ಚುನಾವಣೆಯಲ್ಲಿ 108 ಸ್ಥಾನ ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ಬೆಂಬಲದ ಹೊರತಾಗಿಯೂ ಬಹುಮತಕ್ಕೆ ಆರು ಸಂಖ್ಯೆ 6 ಸಂಖ್ಯೆಗಳ ಕೊರತೆ ಎದುರಾಗಿದೆ. ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನಿರಾಕರಿಸಿದ್ದಾರೆ.
ಈ ನಡುವೆ, 59 ಸ್ಥಾನಗಳನ್ನು ಗೆದ್ದಿರುವ ಡಿಎಂಕೆ, ಸರ್ಕಾರ ರಚಿಸಲು ತನ್ನ ಬದ್ಧ ವೈರಿ 47 ಸ್ಥಾನಗಳನ್ನು ಗೆದ್ದಿರುವ ಎಐಎಡಿಎಂಕೆಗೆ ಬೆಂಬಲ ನೀಡಬಹುದು ಎಂಬ ವರದಿಗಳ ಮಧ್ಯೆ, ಗುರುವಾರ ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಪಕ್ಷವು ಅಧ್ಯಕ್ಷ ಎಂ.ಕೆ. ಸ್ಟಾಲಿನ್ ನಿರ್ಣಯವನ್ನು ಅಂಗೀಕರಿಸಿದೆ ಎನ್ನಲಾಗಿದೆ.
ಈ ನಿರ್ಣಯವೂ ಮೈತ್ರಿಕೂಟದ ಬಾಗಿಲು ಇನ್ನೂ ತೆರೆದಿದೆ ಎಂಬುದನ್ನು ಸೂಚಿಸಿದ್ದು, ಭಾಗವಹಿಸಿದ್ದ ನಾಯಕರ ಪ್ರಕಾರ, ಎಐಎಡಿಎಂಕೆ ಬೆಂಬಲ ನೀಡುವ ಬಗ್ಗೆ ಎಂ.ಕೆ.ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದರೂ, ಪಕ್ಷದ ಎರಡನೇ ಹಂತದ ನಾಯಕರ ಒಂದು ಭಾಗವು ಮೈತ್ರಿಗೆ ಒತ್ತಾಯಿಸುತ್ತಿದೆ ಎನ್ನಲಾಗಿದೆ.
ಇನ್ನೊಬ್ಬ ಡಿಎಂಕೆ ನಾಯಕರ ಪ್ರಕಾರ, ಪಕ್ಷದ ನಾಯಕತ್ವವು ಡಿಎಂಕೆ ಚುನಾಯಿತ ಶಾಸಕರು ಮೇ 10 ರವರೆಗೆ ಚೆನ್ನೈನಲ್ಲಿಯೇ ಇರುವಂತೆ ಸೂಚನೆ ನೀಡಿದೆ. ವಿರೋಧ ಪಕ್ಷವಾಗಿ ಕೆಲಸ ಮಾಡಲು ಸಿದ್ದರಿದ್ದರೂ, ಪಕ್ಷದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಹಿರಿಯ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ, ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಈ ನಿರ್ಧಾರಗಳು ಏನೇ ಇರಲಿ, ಪಕ್ಷದ ಚುನಾಯಿತ ಶಾಸಕರು ಅವುಗಳನ್ನು ಪಾಲಿಸಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಡಿಎಂಕೆ ನಿರ್ಣಯದ ಪ್ರಕಾರ, ಇತ್ತೀಚೆಗೆ ನಡೆದ ಚುನಾವಣೆಯು ಅತಂತ್ರ ವಿಧಾನಸಭೆಗೆ ಕಾರಣವಾಗಿದೆ, ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಇದು ನಿರ್ಣಾಯಕ ಮತ್ತು ಸಂಕೀರ್ಣವಾದ ಘಟ್ಟ. ತಮಿಳುನಾಡು ಮತ್ತೊಂದು ಚುನಾವಣೆಯನ್ನು ಎದುರಿಸುವ ಸ್ಥಿತಿಯಲ್ಲಿಲ್ಲದ ಕಾರಣ, ರಾಜ್ಯದಲ್ಲಿ ಸ್ಥಿರ ಸರ್ಕಾರವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ. ಅದೇ ಸಮಯದಲ್ಲಿ, ದ್ರಾವಿಡ ಚಳವಳಿಯ ತತ್ವಗಳಿಗೆ ವಿರುದ್ಧವಾದ ಕೋಮುವಾದಿ ಶಕ್ತಿಗಳಿಗೆ ಯಾವುದೇ ಸ್ಥಳಾವಕಾಶ ನೀಡಬಾರದು ಎಂಬುದನ್ನು ನಾವು ಪರಿಗಣಿಸಬೇಕಾಗಿದೆ ಎಂದು ಹೇಳಿದೆ (ಏಜೆನ್ಸೀಸ್).