Praful Patel | ಅಜಿತ್​ ಪವಾರ್​ರೊಂದಿಗೆ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್  
ದೇಶ

ಸುನೇತ್ರಾ 'ಪವರ್' ಬೇಡ ಅಂದ್ರೆ ಮುಂದಿನ ಸಾರಥಿ ಇವರೇ..? ಎನ್​​ಸಿಪಿ ಪಾಲಿಗೆ ಈತ ಟ್ರಬಲ್​ ಶೂಟರ್​ | Praful Patel

ಮುಂಬೈ: ಪ್ರಸ್ತುತ ಇಡೀ ದೇಶದ ಕಣ್ಣು ಮಹಾರಾಷ್ಟ್ರದ ರಾಜಕೀಯ, ಅದರಲ್ಲೂ ಪವಾರ್ ಕುಟುಂಬದ ಉತ್ತರಾಧಿಕಾರಿಯ ಮೇಲಿದೆ. ಅಜಿತ್ ಪವಾರ್ ನಿಧನದ ಬಳಿಕ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ) ಯಾರು ಮುನ್ನಡೆಸುತ್ತಾರೆ ಎನ್ನುವುದು ಸದ್ಯದ ಯಕ್ಷ ಪ್ರಶ್ನೆಯಾಗಿದೆ.
ಎನ್‌ಸಿಪಿಯೊಳಗಿನ ಗುಂಪು ಅಜಿತ್ ಪವಾರ್ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರನ್ನು ಪಕ್ಷದ ಮುಂದಿನ ಅಧ್ಯಕ್ಷೆ ಮತ್ತು ಶಾಸಕಾಂಗ ಪಕ್ಷದ ನಾಯಕಿಯಾಗಿ ನೇಮಿಸಲು ಒತ್ತಾಯಿಸುತ್ತಿದೆ. ಇದು ಕಾರ್ಯರೂಪಕ್ಕೆ ಬರದಿದ್ದರೆ, ಎನ್‌ಸಿಪಿಯ ಪ್ರಫುಲ್ ಪಟೇಲ್ ಪಕ್ಷದ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಫುಲ್ ಪಟೇಲ್​ಗೆ ಯಾಕೆ..?

ಪ್ರಫುಲ್ ಪಟೇಲ್ ಒಬ್ಬ ಚುನಾವಣಾ ತಂತ್ರಜ್ಞ ಮತ್ತು ಟ್ರಬಲ್​ ಶೂಟರ್​ ಆಗಿ ಪಕ್ಷಕ್ಕೆ ನೆರವಾಗಿದ್ದಾರೆ ಎನ್ನುವ ಅಂಶ ಅವರ ಆಯ್ಕೆಗೆ ಪ್ರಮುಖ ಕಾರಣವಾಗಿದ್ದು, ಅವರಿಗೆ ಪಕ್ಷಾತೀತವಾಗಿ ದೆಹಲಿಯವರ ಸಂಪರ್ಕವಿದೆ. ಬಿಜೆಪಿ ವರಿಷ್ಟರೊಂದಿಗಿನ ಉತ್ತಮ ಬಾಂಧವ್ಯವು ಎನ್‌ಡಿಎ ಒಕ್ಕೂಟದಲ್ಲಿ ಅಜಿತ್ ಪವಾರ್ ಬಣವು ಪ್ರಸ್ತುತವಾಗುವಂತೆ ಮಾಡಿತು ಎನ್ನಲಾಗಿದೆ.
ಈ ಹಿಂದಿನ ಯುಪಿಎ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ,  ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಪ್ರಫುಲ್ ಪಟೇಲ್, ಪ್ರಸ್ತುತ ಆಡಳಿತ ಮತ್ತು ವಿರೋಧ ಪಕ್ಷಗಳ ಉನ್ನತ ನಾಯಕರೊಂದಿಗೆ ತಮ್ಮದೇ ಆದ ಸಂಪರ್ಕವನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ..
ಎನ್‌ಸಿಪಿ ವಿಭಜನೆಯಾದಾಗ ಚುನಾವಣಾ ಆಯೋಗದೊಂದಿಗಿನ ಹೋರಾಟ ಮತ್ತು ಕಾನೂನು ಜಟಿಲತೆಗಳನ್ನು ತೆರೆಮರೆಯಿಂದ ನಿಭಾಯಿಸಿದವರು ಪ್ರಫುಲ್ ಪಟೇಲ್. ಶರದ್ ಪವಾರ್​ರ ಆತ್ಮೀಯರಾಗಿದ್ದರಿಂದಲೇ ಅವರ ನಡೆಗಳ ಬಗ್ಗೆ ತಿಳಿದುಕೊಂಡು ಅಜಿತ್​ ಬಣಕ್ಕೆ ಮಾನ್ಯತೆ ಸಿಗಲು ನೆರವಾದರು ಎಂಬ ಮಾತು ಮಹಾರಾಷ್ಟ್ರದ ರಾಜಕೀಯ ವಲದಯಲ್ಲಿ ಹರಿದಾಡುತ್ತಿದೆ.
ಪ್ರಫುಲ್ ಪಟೇಲ್ ಪ್ರಭಾವ ಕೇವಲ ರಾಜಕೀಯಕ್ಕೆ ಸೀಮಿತವಾಗಿದ್ದಲ್ಲ. ಕಾರ್ಪೊರೇಟ್ ಜಗತ್ತಿನಲ್ಲಿ ಅವರ ವ್ಯಾಪ್ತಿ ಎಲ್ಲರಿಗೂ ತಿಳಿದಿದ್ದು, ಚುನಾವಣೆಯ ಸಮಯದಲ್ಲಿ ಪಕ್ಷಕ್ಕೆ ಸಂಪನ್ಮೂಲಗಳನ್ನು ಸಂಗ್ರಹಿಸುವುದಾಗಲಿ ಅಥವಾ ಮೈತ್ರಿ ಪಾಲುದಾರರೊಂದಿಗೆ ಚೌಕಾಶಿಯಲ್ಲಿ ತೊಡಗುವುದಕ್ಕಾಗಲಿ ಪ್ರಫುಲ್ ಪಟೇಲ್ ಉಪಸ್ಥಿತಿ ಇರಲೇಬೇಕು. ಅದಕ್ಕಾಗಿ ಅವರನ್ನು ಆಟದ ಮಾಸ್ಟರ್ ಎಂದು ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಫುಲ್ ಪಟೇಲ್ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಮತ್ತು ಆರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ರಾಜಕೀಯದ ಎಲ್ಲಾ ಪಟ್ಟುಗಳನ್ನು ತಿಳಿದುಕೊಂಡಿದ್ದಾರೆ. 10ನೇ (1991), 11ನೇ (1996), 12ನೇ (1998), ಮತ್ತು 15ನೇ (2009) ಲೋಕಸಭೆಯಲ್ಲಿ ಭಂಡಾರ-ಗೊಂಡಿಯಾ ಕ್ಷೇತ್ರವನ್ನು ಪ್ರತಿನಿಧಿಸಿದರು. 2000 ರಿಂದ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತೀಯ ವಾಯುಯಾನ ಕ್ಷೇತ್ರದ ಆಧುನೀಕರಣ ಮತ್ತು ಏರ್ ಇಂಡಿಯಾದ ವಿಸ್ತರಣೆಗೆ ಪ್ರಫುಲ್ ಪಟೇಲ್ ಕೊಡುಗೆ ಅಪಾರ. ಇದಕ್ಕಾಗಿ ಅವರು 2005 ರಲ್ಲಿ ವರ್ಷದ ವಾಯುಯಾನ ಸಚಿವರು ಮತ್ತು ವರ್ಷದ ಸುಧಾರಕ ಸೇರಿದಂತೆ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶರದ್ ಪವಾರ್​​ರ ಆಪ್ತ ವಲಯದಲ್ಲಿ ಗುರುತಸಿಕೊಂಡಿದ್ದ ಪ್ರಫುಲ್ ಪಟೇಲ್​ರನ್ನು ಸಮ್ಮಿಶ್ರ ರಾಜಕೀಯದ 'ಚಾಣಕ್ಯ' ಎಂದು ಸಹ ಕರೆಯುತ್ತಾರೆ. ಇವರಿಗೆ ಆಡಳಿತಾತ್ಮಕವಾದ ಅನುಭವವಿದ್ದು, ಪಕ್ಷದೊಳಗೆ ಅವರದ್ದೇ ಆದ ಗೌರವವಿದೆ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ, ಸುನೇತ್ರಾ ಪವಾರ್ ಅವರನ್ನು ಎನ್‌ಸಿಪಿ ಮುಖ್ಯಸ್ಥೆಯಾಗಿ ನಾಮನಿರ್ದೇಶನ ಮಾಡದಿದ್ದರೆ, ಪ್ರಫುಲ್ ಪಟೇಲ್ ಅಜಿತ್​ ನಾಯಕತ್ವ ವಹಿಸಲು ತಕ್ಕ ವ್ಯಕ್ತಿ ಎನ್ನಲಾಗಿದೆ(ಏಜೆನ್ಸೀಸ್​​).