ಸಂಸದ ಸಂಜಯ್ ರಾವತ್ ಮತ್ತು ಮಾಜಿ ಸಿಎಂ ಏಕನಾಥ್ ಶಿಂಧೆ
ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಸೋಲಿನ ಬಳಿಕ ಮಾಜಿ ಸಿಎಂ ಏಕನಾಥ್ ಶಿಂಧೆ ವಿರುದ್ಧ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದು, ಶಿಂಧೆ ಜೈಚಂದ್ ಆಗಿರದಿದ್ರೆ, ಬಿಜೆಪಿಗೆ ಮುಂಬೈ ಮೇಯರ್ ಹುದ್ದೆ ಸಿಗುತ್ತಿದ್ದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಜೈಚಂದ್ ಫೋಟೋ ಹಾಕಿ ಪೋಸ್ಟ್ ಮಾಡಿರುವ ಅವರು, ಏಕನಾಥ್ ಶಿಂಧೆ ಶಿವಸೇನೆಯ ಜೈಚಂದ್ ಆಗಿರದಿದ್ದರೆ, ಬಿಜೆಪಿಗೆ ಮುಂಬೈನಲ್ಲಿ ಮೇಯರ್ ಹುದ್ದೆ ಸಿಗುತ್ತಿರಲಿಲ್ಲ!, ಮರಾಠಿ ಜನರು ಶಿಂಧೆ ಅವರನ್ನು ಜೈಚಂದ್ ಎಂದೇ ನೆನಪಿಸಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಗಹದವಾಲಾ ರಾಜವಂಶದ ರಜಪೂತ್ ದೊರೆಯಾಗಿರುಗ ಜೈಚಂದ್, ರಜಪೂತ್ರ ಪ್ರಬಲ ದೊರೆ ಪೃಥ್ವಿರಾಜ್ ಚವ್ಹಾಣ್ ವಿರುದ್ಧ ಮಹಮ್ಮದ್ ಘೋರಿಯೊಂದಿಗೆ ಸೇರಿ ಸೋಲಿಸಲು ಸಂಚು ರೂಪಿಸಿದ್ದರು. ಹಿಂದಿಯಲ್ಲಿ ಸ್ವಧರ್ಮಿಯರು, ಸ್ವಜಾತಿಯವರಿಗೆ ಬೆನ್ನಿಗೆ ಇರಿದು ದ್ರೋಹ ಬಗೆದದ್ದನ್ನು ಉಲ್ಲೇಖಿಸಲು ಜೈಚಂದ್ ಹೆಸರು ಬಳಸಲಾಗುತ್ತದೆ.
ಮಹರಾಷ್ಟ್ರದ ಲಾತೂರ್, ಪರ್ಭಾನಿ ಹೊರತುಪಡಿಸಿ ಬೃಹನ್ಮುಂಬೈ ಸೇರಿ 26 ಪುರಸಭೆಗಳ ಚುನಾವಣೆಯಲ್ಲಿ ಆಡಳಿರೂಢ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಜಯಗಳಿಸಿದೆ. ಪಾಲಿಕೆಯ 227 ಸ್ಥಾನಗಳ ಪೈಕಿ ಬಿಜೆಪಿ 89 ಅದರ ಮಿತ್ರ ಪಕ್ಷ ಶಿಂಧೆ ಶಿವಸೇನಾ 29 ಸ್ಥಾನಗಳಲ್ಲಿ ಗೆದ್ದು ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಬಹುಮತವನ್ನು ಗಳಿಸಿವೆ
ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಗಮನಾರ್ಹ ಸಾಧನೆ ಮಾಡಿದ್ದು 65 ಸ್ಥಾನಗಳಲ್ಲಿ ಗೆದ್ದಿದೆ. ಮಿತ್ರ ಪಕ್ಷ ಎಂಎನ್ಎಸ್ 6, ಕಾಂಗ್ರೆಸ್ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಕಳೆದ ಮೂವತ್ತು ವರ್ಷಗಳಿಂದ ಉದ್ದವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನಾ ಪಕ್ಷದ ಹಿಡಿತದಲ್ಲಿದ್ದ ಮುಂಬೈ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಜಾರಿದೆ.
ಪಕ್ಷದ ಸೋಲಿನ ಬಳಿಕ ಮೊದಲ ಬಾರಿಗೆ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ, ರಾಜಕೀಯ ಹೋರಾಟದ ಯುದ್ದ ಇನ್ನೂ ಮುಗಿದಿಲ್ಲ. ಮರಾಠಿ ವ್ಯಕ್ತಿ ಅರ್ಹ ಗೌರವ ಸಿಗುವವರೆಗೂ ಇದು ಹೀಗೆ ಮುಂದುವರೆಯುತ್ತದೆ ಎಂದು ಹೇಳಿದೆ (ಏಜೆನ್ಸೀಸ್).