Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ನವದೆಹಲಿ: ಸಿಬಿಎಸ್‌ಇ (CBSE) ಮೌಲ್ಯಮಾಪನದ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಒಪ್ಪಂದದಲ್ಲಿ ನಡೆದಿರುವ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ಗುರುವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ವಿವಾದಕ್ಕೆ ಸಿಲುಕಿದ್ದ ಗ್ಲೋಬರೇನಾ ಹೆಸರಿನ, ಸದ್ಯ ಕೋಯೆಂಪ್ಟ್ ಎಂದು ಕರೆಯಲ್ಪಡುವ ಕಂಪನಿಗೆ ಈ ಪ್ರಮುಖ ಒಪ್ಪಂದವನ್ನು ನೀಡಿದ್ದು ಹೇಗೆ ಎಂದು ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ಈ ವಿಷಯದಲ್ಲಿ ಶಿಕ್ಷಣ ಸಚಿವರು ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ರಾಹುಲ್ ಗಾಂಧಿ, ಒಪ್ಪಂದವನ್ನು ಹಸ್ತಾಂತರಿಸುವ ಮುನ್ನ ಕಂಪನಿಯ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆಯೇ ಎಂಬುದರ ಕುರಿತಾಗಿ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಧರ್ಮೇಂದ್ರ ಪ್ರಧಾನ್ ಜೀ, ನೀವು ನನ್ನ ಮೇಲೆ ಎಷ್ಟು ಬೇಕಾದರೂ ವಾಗ್ದಾಳಿ ನಡೆಸಿ, ಆದರೆ ಅದು ನಿಮ್ಮ ತಪ್ಪುಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, 18.5 ಲಕ್ಷ ಮಕ್ಕಳ ಪರವಾಗಿ ನಾನು ಪ್ರಶ್ನೆ ಕೇಳುವುದನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ, ಕೇಂದ್ರ ಸರ್ಕಾರವು ಕಂಪನಿಯ ಹಿನ್ನೆಲೆ ತಿಳಿದೂ ಒಪ್ಪಂದ ಮಾಡಿಕೊಂಡಿದೆ ಅಥವಾ ಯಾವುದೇ ಸರಿಯಾದ ತನಿಖೆ ನಡೆಸದೆಯೇ ಬೇಜವಾಬ್ದಾರಿತನ ತೋರಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
ಕಂಪನಿಯ ಆಯ್ಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಹಳೆಯ ಹೆಸರಿನಲ್ಲಿ ಈಗಾಗಲೇ ವಿವಾದಕ್ಕೆ ಸಿಲುಕಿರುವ ಕೋಯೆಂಪ್ಟ್ ಕಂಪನಿಗೆ ಸಿಬಿಎಸ್‌ಇ ಒಎಸ್ಎಂ ಒಪ್ಪಂದವನ್ನು ಏಕೆ ನೀಡಲಾಯಿತು..? ಇದು ಯಾರ ಆದೇಶದ ಮೇರೆಗೆ ನಡೆಯಿತು..? ಕಂಪನಿಯ ಹಿನ್ನೆಲೆ ಪರಿಶೀಲನೆ ಏಕೆ ನಡೆಸಲಿಲ್ಲ..? ಕೋಯೆಂಪ್ಟ್ ಕಂಪನಿಯ ಆಡಳಿತ ಮಂಡಳಿ ಮತ್ತು ಮೋದಿ ಸರ್ಕಾರಕ್ಕೆ ಇರುವ ಲಿಂಕ್ ಏನು..? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಧಾನಿ ಮೋದಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ...
ಒಂದೋ ನೀವು ಹಿನ್ನೆಲೆ ಪರಿಶೀಲನೆ ನಡೆಸಿ, ಎಲ್ಲವೂ ಗೊತ್ತಿದ್ದೂ ಒಪ್ಪಂದಕ್ಕೆ ಮುಂದಾಗಿದ್ದೀರಿ, ಇಲ್ಲವೇ ನೀವು ಯಾವುದೇ ಪರಿಶೀಲನೆಯನ್ನೇ ನಡೆಸಿಲ್ಲ. ಈ ಎರಡೂ ಸಂದರ್ಭಗಳಲ್ಲೂ ನೀವು ಇದರಲ್ಲಿ ಭಾಗಿಯಾಗಿದ್ದೀರಿ ಎಂದೇ ಅರ್ಥ, ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗುರಿಯಾಗಿಸಿಕೊಂಡು ಮಾತನಾಡಿದ ರಾಹುಲ್, ಪ್ರಧಾನಿಯವರಿಗೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಇಷ್ಟರಲ್ಲೇ ಶಿಕ್ಷಣ ಸಚಿವರನ್ನು ಹುದ್ದೆಯಿಂದ ವಜಾಗೊಳಿಸುತ್ತಿದ್ದರು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಹತಾಶರಾಗಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್
ಇದಕ್ಕೂ ಮುನ್ನ, ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯ ಬಗ್ಗೆ ರಾಹುಲ್ ಗಾಂಧಿ ಮಾಡಿದ್ದ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕಾಂಗ್ರೆಸ್ ಸಂಸದರು ಹತಾಶರಾಗಿದ್ದಾರೆ ಮತ್ತು ಭಾರತದ ತಾಂತ್ರಿಕ ಪ್ರಗತಿಯನ್ನು ಸದಾ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಒಎಸ್ಎಂ ವ್ಯವಸ್ಥೆಯ ಖರೀದಿ ಪ್ರಕ್ರಿಯೆಯನ್ನು ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಮಾಡಲಾಗಿದೆ ಮತ್ತು ಇದರಲ್ಲಿ ಯಾವುದೇ ರೀತಿಯ ಅಕ್ರಮಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು, ಸಿಬಿಎಸ್‌ಇ ಈಗಾಗಲೇ ಈ ಬಗ್ಗೆ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿದೆ. ಭಾರತ ಸರ್ಕಾರದ ನೀತಿಗಳನ್ನು ಅನುಸರಿಸಿಯೇ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಒಂದು ವೇಳೆ ಯಾವುದೇ ಅಕ್ರಮಗಳು ಪತ್ತೆಯಾದರೆ ಯಾರನ್ನೂ ಬಿಡುವುದಿಲ್ಲ ಎಂದು ಸಚಿವ ಪ್ರಧಾನ್ ಪುನರುಚ್ಛರಿಸಿದರು.
ನಾನೇ ಜವಾಬ್ದಾರಿ ಹೊತ್ತುಕೊಂಡಿದ್ದೇನೆ
ಪ್ರಸ್ತುತ ನಡೆಯುತ್ತಿರುವ ಸಿಬಿಎಸ್‌ಇ ಕ್ಲಾಸ್ 12 ರ ಮರುಮೌಲ್ಯಮಾಪನ (Revaluation) ಪ್ರಕ್ರಿಯೆಯಲ್ಲಿ ಕೆಲವು ಲೋಪದೋಷಗಳು ನಡೆದಿರುವುದನ್ನು ಒಪ್ಪಿಕೊಂಡ ಶಿಕ್ಷಣ ಸಚಿವರು, ವಿದ್ಯಾರ್ಥಿಗಳು ಮತ್ತು ಪೋಷಕರು ಎತ್ತಿರುವ ಸಮಸ್ಯೆಗಳ ಜವಾಬ್ದಾರಿಯನ್ನು ಸರ್ಕಾರದ ಪರವಾಗಿ ನಾನು ವಹಿಸಿಕೊಂಡಿದ್ದೇನೆ, ಹಾಗಾಗಿ ಈ ಸಮಯದಲ್ಲಿ ಯಾರೂ ರಾಜಕೀಯ ಮಾಡದಂತೆ ವಿನಂತಿಸುತ್ತೇನೆ. ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಹೆಚ್ಚಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಗುರಿಯಾಗಬೇಕು ಎಂದು ಅವರು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಎಲ್ಲಾ ಹಂತಗಳಲ್ಲೂ ಉತ್ತರದಾಯಿತ್ವವನ್ನು ನಿಗದಿಪಡಿಸಲಾಗುವುದು ಎಂದು ಪ್ರಧಾನ್ ಭರವಸೆ ನೀಡಿದ್ದಾರೆ. ಗುರುವಾರ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮೌಲ್ಯಮಾಪನ ಅಥವಾ ಮರುಮೌಲ್ಯಮಾಪನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯ ಕುಂದುಕೊರತೆಗಳನ್ನು ಪರಿಹರಿಸಲಾಗುವುದು ಎಂಬ ಭರವಸೆ ನೀಡಿದರು.
ಅಂಕಗಳಲ್ಲಿನ ವ್ಯತ್ಯಾಸ, ಉತ್ತರ ಪತ್ರಿಕೆಗಳ ಲಭ್ಯತೆ ಮತ್ತು ಹೊಸದಾಗಿ ಪರಿಚಯಿಸಲಾದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯ ಬಗ್ಗೆ ಆತಂಕಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಹೊರಬಿದ್ದಿದೆ(ಏಜೆನ್ಸೀಸ್).