ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ 
ದೇಶ

26/11 ದಾಳಿ ಬಳಿಕ ಆಪರೇಷನ್ ಸಿಂಧೂರ ನಡೆದಿದ್ರೆ ಭಾರತದ ಮೇಲೆ ಯಾರೂ ದಾಳಿ ಮಾಡಲು ಧೈರ್ಯ ಮಾಡ್ತಿರಲಿಲ್ಲ; ಸಿಎಂ ಫಡ್ನವೀಸ್ | CM Fadnavis

ಮುಂಬೈ: 2008ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಅಂದಿನ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಮಾದರಿಯ ಕ್ರಮ ಕೈಗೊಂಡಿದ್ದರೆ , ಯಾರೂ ಮತ್ತೆ ದೇಶವನ್ನು ಗುರಿಯಾಗಿಸಿಕೊಳ್ಳುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್(CM Fadnavis) ಹೇಳಿದ್ದಾರೆ.
ಶನಿವಾರ(ನ. 22) ಪತ್ನಿ ಅಮೃತಾ ಫಡ್ನವೀಸ್ ನೇತೃತ್ವದ ದಿವ್ಯಜ್ ಫೌಂಡೇಶನ್ ಆಯೋಜಿಸಿದ್ದ 'ಜಾಗತಿಕ ಶಾಂತಿ ಗೌರವಗಳು: 26/11 ರ ವೀರರನ್ನು ಮತ್ತು ಪಹಲ್ಗಾಮ್ ದಾಳಿಯ ಬಲಿಪಶುಗಳನ್ನು ಸ್ಮರಿಸುವುದು' ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಅಂದಿನ ದಾಳಿ ಅದು ಕೇವಲ ತಾಜ್ ಮತ್ತು ಟ್ರೈಡೆಂಟ್ ಹೋಟೆಲ್‌ಗಳ ಮೇಲಿನ ದಾಳಿಯಲ್ಲ. ಮುಂಬೈ ಭಾರತದ ಆರ್ಥಿಕ ರಾಜಧಾನಿಯಾಗಿದ್ದು, ಆ ನಗರದ ಮೇಲಿನ ದಾಳಿ ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ. ನಾವು ಇದನ್ನು ಅರ್ಥ ಮಾಡಿಕೊಂಡು 'ಆಪರೇಷನ್ ಸಿಂಧೂರ್' ನಡೆಸುವ ಧೈರ್ಯವನ್ನು ತೋರಿಸಿದ್ದರೆ, ಯಾರೂ ಮತ್ತೆ ನಮ್ಮ ಮೇಲೆ ದಾಳಿ ಮಾಡುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಈ ವರ್ಷದ ಏಪ್ರಿಲ್​ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, ಅದಕ್ಕೆ ಪ್ರತಿದಾಳಿಯಾಗಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಅಡಿಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತು ಎಂದು ತಿಳಿಸಿದ್ದಾರೆ.
2008ರಲ್ಲಿ ನಡೆದ ಉಗ್ರರ ಮುಂಬೈ ದಾಳಿ ಕನಿಷ್ಠ 166 ಮಂದಿಯನ್ನು ಬಲಿತೆಗೆದುಕೊಂಡಿತ್ತು. 17 ವರ್ಷಗಳು ಕಳೆದರೂ ನಮ್ಮ ಹೃದಯದಲ್ಲಿ ಇನ್ನೂ ನೋವು ಇದೆ. ಹುತಾತ್ಮರು ಮತ್ತು ಧೈರ್ಯಶಾಲಿಗಳನ್ನು ಗೌರವಿಸಲು ನಾವು ಇಲ್ಲಿ ಒಟ್ಟುಗೂಡಿದ್ದೇವೆ. ಭಯೋತ್ಪಾದನೆಯ ಬೆದರಿಕೆ ಇನ್ನೂ ಮುಂದುವರೆದಿದೆ ಮತ್ತು ನಾವು ಜಾಗರೂಕರಾಗಿರಬೇಕು ಎಂದಿದ್ದಾರೆ (ಏಜೆನ್ಸೀಸ್).